ಬಳ್ಳಾರಿ

ಗಣಿ ಧೂಳಲ್ಲಿ ಪಾಳು ಬಿದ್ದ ವೇ ಬ್ರಿಡ್ಜ್ಗಳು

Published On :

ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 17
ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಸಂಡೂರು ಹಾಗೂ ಗಣಿ ಪ್ರದೇಶದಲ್ಲಿರುವ ಸ್ಟಾಕ್ಯಾರ್ಡ್ಗೊಂದು ಹಾಗೂ ಊರಿಗೊಂದಿದ್ದ ವೇ ಬ್ರಿಡ್ಜ್ಗಳು ಇದೀಗ ಪಾಳು ಬಿದ್ದಿವೆ. ಬೆರಳೆಣಿಕೆಯ ಅದರಲ್ಲೂ ಗಣಿ ಗುತ್ತಿಗೆ ಕಂಪನಿಗಳ ವೇ ಬ್ರಿಡ್ಜ್ಗಳು ಮಾತ್ರ ಇವೆ. ಇನ್ನು ಗಣಿ ವ್ಯಾಪಾರಿಗಳ ಸ್ಟಾಕ್ಯಾರ್ಡ್ಗಳು ಮಾತ್ರ ಖಾಲಿ ಖಾಲಿ...
ಗಣಿ ಅಬ್ಬರ ಇರುವ ತಾಲೂಕುಗಳಾದ ಹೊಸಪೇಟೆ, ಸಂಡೂರಿಗೆ ಹೋದರೆ ಅದಿರು ಲಾರಿಗಳ ವೇ ಬ್ರಿಡ್ಜ್ಗಳಿಗೆ ಲೆಕ್ಕವಿರುತ್ತಿರಲಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಸ್ಟಾಕ್ಯಾರ್ಡ್ಗಳಿದ್ದು, ಅಲ್ಲಿಯೇ ಒಂದೊಂದು ವೇ ಬ್ರಿಡ್ಜ್ಗಳ ವ್ಯವಸ್ಥೆ ಮಾಡಲಾಗಿತ್ತು. ಸ್ಟಾಕ್ಯಾರ್ಡ್ಗಳನ್ನು ರದ್ದುಪಡಿಸಿದ್ದರಿಂದ ಕೇವಲ ಗಣಿ ಗುತ್ತಿಗೆ ಪ್ರದೇಶಕ್ಕೆ ಸಂಬಂಧಿಸಿದ ಸ್ಟಾಕ್ಯಾರ್ಡ್ಗಳಿರುವುದರಿಂದ ಇದೀಗ ಬಹುತೇಕ ಸ್ಟಾಕ್ಯಾರ್ಡ್ಗಳು ಪಾಳು ಬಿದ್ದಿವೆ. ಅಂದು ಗಣಿ ಅಬ್ಬರ ಎಷ್ಟಿತ್ತು ಎಂಬುದು ಇಂತಹ ಸ್ಟಾಕ್ಯಾರ್ಡ್ಗಳಿಂದ ತಿಳಿದು ಬರುತ್ತದೆ.
ಗಣಿ ಗುತ್ತಿಗೆ ಕಂಪನಿ ಸ್ಟಾಕ್ಯಾರ್ಡ್: 2011ರ ಪೂರ್ವದಲ್ಲಿಯೇ ಗಣಿ ಕಂಪನಿಗಳು ತೆಗೆದ ಅದಿರು ಹೊರಗಡೆ ಮಾರಾಟಕ್ಕೆ ಅದಿರು ವ್ಯಾಪಾರಿಗಳು ಇರುತ್ತಿದ್ದು, ಅವರು ಅದಿರು ಕೊಂಡು, ಸ್ಟಾಕ್ಯಾರ್ಡ್ಗಳಲ್ಲಿ ಸಂಗ್ರಹಿಸಿ, ನಂತರ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದರಿಂದ, ಅದಿರು ಟ್ರೇಡರ್ಸ್ಗಳು ತಮ್ಮ ಸ್ಟಾಕ್ಯಾರ್ಡ್ಗಳಲ್ಲಿ ತೂಕ ಮಾಡಲು ವೇ ಬ್ರಿಡ್ಜ್ ಪ್ರತ್ಯೇಕವಾಗಿ ಹಾಕಿಕೊಂಡಿದ್ದರು. ಆದರೆ ಗಣಿಗಾರಿಕೆ ಸಂಪೂರ್ಣವಾಗಿ ಬಂದಾಗಿದ್ದರಿಂದ ಎಲ್ಲಾ ಸ್ಟಾಕ್ಯಾರ್ಡ್ಗಳ ಬಾಗಿಲು ಮುಚ್ಚಿತ್ತು. ಮತ್ತೊಮ್ಮೆ ಗಣಿಗಾರಿಕೆ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಇದ್ದರೂ ಆದರೆ ಇದೀಗ ಎ ಮತ್ತು ಬಿ ಕೆಟಗರಿಯಲ್ಲಿ ಗಣಿ ಕಂಪನಿಗಳು ಆರಂಭವಾಗಿದ್ದರೂ, ಗಣಿ ಗುತ್ತಿಗೆ ಕಂಪನಿಗಳು ನೇರವಾಗಿ ಕೈಗಾರಿಕೆಗಳಿಗೆ ಅದಿರನ್ನು ಮಾರಾಟ ಮಾಡುವುದರಿಂದ (ಮಧ್ಯವರ್ತಿಗಳಿಲ್ಲ) ಇದೀಗ ಬಹುತೇಕ ಗಣಿ ಗುತ್ತಿಗೆ ಕಂಪನಿಗಳಿಗೆ ಸೇರಿಲ್ಲದ ಸ್ಟಾಕ್ಯಾರ್ಡ್ಗಳು ಕಿತ್ತುಕೊಂಡು ಹೋಗಿವೆ.
ಆನ್ಲೈನ್ ವ್ಯವಸ್ಥೆ: 2012ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬನ್ನಿಹಟ್ಟಿ ತೋರಣಗಲ್ ಮಧ್ಯ ಹಾಗೂ ಸಂಡೂರು-ಹೊಸಪೇಟೆ ರಸ್ತೆಯ ಕಲ್ಲಳ್ಳಿ ಕ್ರಾಸ್ನಲ್ಲಿ ತಲಾ ಒಂದು ಕಾಂಪೋಜಿಟ್ ಚೆಕ್ ಪೋಸ್ಟ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಗಣಿ ಗುತ್ತಿಗೆ ಕಂಪನಿಗಳು ತಮ್ಮ ಸ್ಟಾಕ್ಯಾರ್ಡ್ಗಳಲ್ಲಿ ಅದಿರು ಲಾರಿಗಳ ನಂಬರ್ ಹಾಗೂ ತೂಕ ಮಾಡಿದ್ದು, ಮೇನ್ ಸರ್ವರ್ ಮೂಲಕ ಆನ್ಲೈನ್ನಲ್ಲಿ ಬರುತ್ತದೆ. ಸ್ಟಾಕ್ಯಾರ್ಡ್ ಅಳತೆಗೂ ಮತ್ತು ಚೆಕ್ಪೋಸ್ಟ್ನಲ್ಲಿ ಅದೇ ಲಾರಿ ತೂಕದಲ್ಲಿ ವ್ಯತ್ಯಾಸ ಕಂಡು ಹಿಡಿಯಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳಂತೆ ಇದ್ದ ಖಾಸಗಿ ಸ್ಟಾಕ್ಯಾರ್ಡ್ಗಳು, ಟ್ರೇಡರ್ಸ್ಗಳು ಹೊಂದಿರುವ ಸ್ಟಾಕ್ಯಾರ್ಡ್ಗಳು ಇದೀಗ ಪಾಳು ಬೀಳಲು ಕಾರಣವಾಗಿವೆ.
ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿಯೇ 50ಕ್ಕೂ ಹೆಚ್ಚು ಸ್ಟಾಕ್ಯಾರ್ಡ್ಗಳಿದ್ದು, ಗಣಿಗಾರಿಕೆ ಸ್ಥಗಿತವಾಗಿದ್ದರಿಂದ ಎಲ್ಲಾ ಸ್ಟಾಕ್ಯಾರ್ಡ್ಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗಿತ್ತು. ಆದರೆ ಸಿಇಸಿಯು ಎ ಮತ್ತು ಬಿ ಕೆಟಗರಿಯಲ್ಲಿನ ಗಣಿ ಕಂಪನಿಗಳು ಅದರಲ್ಲೂ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ (ಆರ್ ಆ್ಯಂಡ್ ಆರ್) ಅನುಷ್ಠಾನಗೊಳಿಸುತ್ತಿರುವ ಕಂಪನಿಗಳಿಗೆ ಗಣಿ ಗುತ್ತಿಗೆ ಆರಂಭಿಸಲು ಅನುವು ಮಾಡಿಕೊಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 19 ಗಣಿ ಕಂಪನಿಗಳು ಮಾತ್ರ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿರುವುದರಿಂದ ಇದೀಗ ಅಂದಾಜು 19 ಸ್ಟಾಕ್ಯಾರ್ಡ್ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪ್ರದೇಶದಲ್ಲಿ ಮಾತ್ರ ವೇ ಬ್ರಿಡ್ಜ್ಗಳು ಇದ್ದು, ಉಳಿದ ವೇ ಬ್ರಿಡ್ಜ್ಗಳು ನಿಷ್ಪ್ರಯೋಜಕವಾಗಿ, ಮೊದಲು ಅದಿರು ಲಾರಿಗಳಿಂದ ತುಂಬಿ ತುಳುಕುತ್ತಿದ್ದ ಸ್ಟಾಕ್ಯಾರ್ಡ್ ಹಾಗೂ ವೇ ಬ್ರಿಡ್ಜ್ಗಳು ಬಿಕೋ ಎನ್ನುತ್ತಿವೆ.
ಗಣಿಗಾರಿಕೆ ನಡೆಯುತ್ತಿರುವಾಗ ದುಡ್ಡಿಗೆ ಬೆಲೆ ಇರುತ್ತಿರಲಿಲ್ಲ, ಬಹುತೇಕ ಅದಿರು ವ್ಯಾಪಾರಿಗಳು, ಸ್ಟಾಕ್ಯಾರ್ಡ್ ಹೊಂದಿರುವವರು ಲಕ್ಷಾಂತರು ರು.ಗಳನ್ನು ಕೊಟ್ಟು ಸ್ವಂತ ವೇ ಬ್ರಿಡ್ಜ್ ವ್ಯವಸ್ಥೆ ಮಾಡಿಕೊಂಡಿದ್ದರು. ಇದೀಗ ಗಣಿ ತನಿಖೆಗಳಿಂದ ಭೀತಿಗೊಂಡಿದ್ದರಿಂದ ಗಣಿ ಗುತ್ತಿಗೆ ಅಲ್ಲದೆ ಇತರ ಪ್ರದೇಶಗಳು ಸ್ತಬ್ಧಗೊಂಡಂತಾಗಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.