ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆತಡೆ
ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ರಸ್ತೆ ಹದಗೆಟ್ಟಿದ್ದು, ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ಸೋಮವಾರ ರಸ್ತೆತಡೆದು ಪ್ರತಿಭಟನೆ ನಡೆಸಿದರು.
ಸಂಗನಕಲ್ಲು ಗ್ರಾಮದ ಮೂಲಕ ಅಂತಾರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಎರಡು ವರ್ಷಗಳ ಹಿಂದೆ ಕುಡಿಯುವ ನೀರಿನ ಪೈಪ್ಲೈನ್ನನ್ನು ಅಳವಡಿಸಲು ರಸ್ತೆ ಮಧ್ಯದಲ್ಲಿ ಅಗೆಯಲಾಗಿತ್ತು. ಕೆಲದಿನಗಳ ನಂತರ ಸುಸಜ್ಜಿತ ರಸ್ತೆ ನಿರ್ಮಿಸಿಕೊಡುವುದಾಗಿ ತಿಳಿಸಿ, ಇರುವ ರಸ್ತೆಯನ್ನೂ ಅಗೆದು, ಕಚ್ಚಾ ರಸ್ತೆಯನ್ನಾಗಿ ಮಾರ್ಪಡಿಸಿದ್ದಾರೆ. ಇದಾಗಿ ಒಂದೂವರೆ ವರ್ಷವಾದರೂ ಇತ್ತಕಡೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧೂಳಿನ ಅಭಿಷೇಕ: ರಸ್ತೆಯು ತೀರಾ ಹದಗೆಟ್ಟಿರುವುದರಿಂದ ಧೂಳು ಅಧಿಕವಾಗಿದೆ. ಸುಮಾರು 2 ಕಿ.ಮೀ. ರಸ್ತೆ ಹದಗೆಟ್ಟಿದೆ. ರಸ್ತೆಯ ಸಾಮರ್ಥ್ಯ ಕೇವಲ 10 ಟನ್ಗಳಷ್ಟಿದ್ದರೆ, ಮರಳು ಸಾಗಾಣಿಕೆ ಲಾರಿಗಳು 15-20 ಟನ್ಗಳಷ್ಟು ಮರಳು ತುಂಬಿಕೊಂಡು ಹಗಲಿರುಳೂ ಸಂಚರಿಸುತ್ತಿವೆ. ಅಲ್ಲದೆ ಆಂಧ್ರದ ಹೈದರಾಬಾದ್, ಕರ್ನೂಲು, ಆದೋನಿ ಸೇರಿದಂತೆ ರಾಯಚೂರು ಜಿಲ್ಲೆಗಳಿಗೆ ನಿತ್ಯ ಸಂಚರಿಸುವ ಸಾರಿಗೆ, ಖಾಸಗಿ ಬಸ್ಗಳು ಈ ರಸ್ತೆಯಲ್ಲೆ ಓಡಾಡುತ್ತಿವೆ. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಧೂಳಿನಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮುನ್ನವೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ವಾಹನ ಸಂಚಾರ ತಡೆ: ರಸ್ತೆಯಲ್ಲಿ ನಿತ್ಯ ಸಂಚರಿಸುವ ನೂರಾರು ವಾಹನಗಳನ್ನು ತಡೆದ ಗ್ರಾಮಸ್ಥರು, ಸರ್ಕಾರ, ಜಿಲ್ಲಾಡಳಿತದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡು, ಉತ್ತಮ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮದ ಮುಖಂಡರಾದ ಬಿ. ಹನುಮಂತ, ಎ.ಕೆ. ಗಂಗಾಧರ, ನಬಿಸಾಬ್, ಬಿ. ಸುಂಕಯ್ಯ, ಟಿ. ವಿಜಯ್, ಎ. ನೆಟ್ಟಪ್ಪ, ಸಿದ್ಧಪ್ಪ ಇತರರು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

