ಬಳ್ಳಾರಿ

ಸ್ವಚ್ಛತೆ, ಸೌಕರ್ಯ ಕಲ್ಪಿಸಲು ಕಟ್ಟಪ್ಪಣೆ

Published On :

ಹೂವಿನಹಡಗಲಿ: ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆ ಫೆ. 6ರ ರಥ ಸಪ್ತಮಿಯಿಂದ ಫೆ. 17ರ ಸರಪಳಿ ಪವಾಡ ಸೇರಿದಂತೆ 12 ದಿನಗಳ ಕಾಲ ನಡೆಯುವ ಜಾತ್ರೆಗೆ ಪೂರ್ವಭಾವಿ ಸಿದ್ಧತಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿತು.
ಉತ್ತರ ಕರ್ನಾಟ ಭಾಗದ ಅತಿ ದೊಡ್ಡದಾದ ಮೈಲಾರ ಜಾತ್ರೆಗೆ ಈ ಬಾರಿ ಸಿಎಂ ಸಿದ್ದರಾಮಯ್ಯ ಬರುವ ನಿರೀಕ್ಷೆಯಿದ್ದು, ಹಲವಡೆ ಸಿಸಿ ಕ್ಯಾಮೆರಾ, ಭದ್ರತೆ ಮತ್ತು ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರೆಗೆ ಬಂದ ಭಕ್ತರಿಗೆ ನದಿ ತೀರದಲ್ಲಿ 400 ತಾತ್ಕಾಲಿಕ ಶೌಚ, 250 ಮಲಮೂತ್ರ ವಿಸರ್ಜನೆ ಶೆಡ್ ನಿರ್ಮಾಣ, ಸ್ವಚ್ಛತೆಗೆ 200 ಕಾರ್ಮಿಕರ ನಿಯೋಜನೆ, 20 ಸಾವಿರ ಲೀಟರ್‌ನ ಎರಡು ಸಿಂಟೆಕ್ಸ್‌ಗಳಿಂದ 10 ಕೊಳಾಯಿಗಳಿಗೆ ನೀರಿನ ವ್ಯವಸ್ಥೆ, ಬಸ್ ನಿಲ್ದಾಣದಲ್ಲಿ ನೀರು, ಸುಲಭ ಶೌಚ ಹಾಗೂ ಸ್ವಚ್ಛತೆ ಕಡ್ಡಾಯವಾಗಿ ಮಾಡಬೇಕೆಂದು ಆಯಾ ಸಮಿತಿಗಳಿಗೆ ತಾಕೀತು ಮಾಡಿದರು.
ಜನಾರೋಗ್ಯ: ಭಕ್ತರ ಅನುಕೂಲಕ್ಕಾಗಿ ಆಸ್ಪತ್ರೆ ಆರಂಭಿಸಿ ಅಗತ್ಯವಿರುವ ವೈದ್ಯರನ್ನು ನಿಯೋಜಿಸಿ ಔಷಧಿ, ಮಾತ್ರೆಗಳನ್ನು ಸಂಗ್ರಹಿಸಬೇಕು, ವೈದ್ಯರ ಅಗತ್ಯ ಕಂಡು ಬಂದರೆ ಬಳ್ಳಾರಿಯ ವಿಮ್ಸ್‌ನಿಂದ ನಿಯೋಜಸುತ್ತೇವೆ. ಸ್ವಚ್ಛತೆಗೆ 500 ಲೀ ಬ್ಲೀಚಿಂಗ್ ಪೌಡರ್, 600 ಲೀ ಫಿನಾಯಿಲ್, 500 ಕೆ.ಜಿ. ಪೋರೆಟ್ ಬಳಸಿ ಸಾಂಕ್ರಾಮಿಕ ಕಾಯಿಲೆ ತಡೆಗಟ್ಟಬೇಕು. ಜಾತ್ರೆ ಆರಂಭದಿಂದ ಮುಗಿಯುವವರೆಗೂ ಫಾಗಿಂಗ್ ನಿರಂತರ ಮಾಡಬೇಕೆಂದು ತಿಳಿಸಿದರು.
ಕುಡಿವ ನೀರಿನ ವ್ಯವಸ್ಥೆ: ಯಾತ್ರಾರ್ಥಿಗಳಿಗೆ ಹಾಗೂ ಜಾನುವಾರುಗಳಿಗೆ 30 ಸ್ಟ್ಯಾಂಡ್ ಪೋಸ್ಟ್ ಕೊಳಾಯಿಗಳಿಂದ 120 ಕೊಳಾಯಿಗಳಿಗೆ ನೀರು ಪೂರೈಕೆ, ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಸಂಪರ್ಕ ನೀಡಿ, ನದಿಯಿಂದ ಪೂರೈಕೆಯಾಗುವ ನೀರನ್ನು ನಿತ್ಯ ವೈದ್ಯರು ಪರೀಕ್ಷೆ ಮಾಡಿ ನೀರಿಗೆ ಕ್ಲೋರೋಫಿನೆಟ್ ಸೇರಿಸಿ ಪೂರೈಕೆ ಮಾಡಬೇಕು.
ವಿದ್ಯುತ್ ದೀಪದ ವ್ಯವಸ್ಥೆ: ಜಾತ್ರೆಗೆ 650 ಮೆಗವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ದೇವಸ್ಥಾನ ಸೇರಿದಂತೆ ಪರಿಷಿ ಸೇರುವ ಎಲ್ಲ ಕಡೆಗಳಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಬೇಕು, ಹೆಚ್ಚುವರಿ ಟಿಸಿಗಳನ್ನು ಇಟ್ಟುಕೊಳ್ಳಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ನಾನಾ ಕಡೆಗಳಿಂದ ಮೈಲಾರಕ್ಕೆ ಆಗಮಿಸುತ್ತಿರುವ ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ಬಸ್ಸಿನ ಸೌಕರ್ಯ ಕಲ್ಪಿಸಿ ಬಸ್ಸಿನ ಟಿಕೆಟ್ ದರವನ್ನು ಶೇ. 10ರಷ್ಟು ಮಾತ್ರ ಹೆಚ್ಚಳ ಮಾಡಬೇಕೆಂದ ಸಚಿವರು, ಬಳ್ಳಾರಿ, ಹೊಸಪೇಟೆ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಗದಗ, ಹುಬ್ಬಳಿ, ಚಿತ್ರದುರ್ಗ ಸೇರಿದಂತೆ ಇನ್ನು ಅನೇಕ ಕಡೆಗಳಿಂದ ಸಾರಿಗೆ ಸೌಕರ್ಯ ಮಾಡಬೇಕೆಂದು ತಿಳಿಸಿದರು.
ಪೊಲೀಸ್ ಬಂದೋಬಸ್ತ್: ಫೆ. 16ರಂದು ನಡೆಯುವ ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ ಸೂಕ್ತ ಬಂದೋಬಸ್ತ್ ಮಾಡಿ, ಬ್ಯಾರಿಕೇಡ್ ನಿರ್ಮಾಣ, ತುಂಗಭದ್ರಾ ನದಿಯಲ್ಲಿ ಯಾವುದೆ ಅನಾಹುತವಾಗದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಈ ಬಾರಿ ನದಿಯಲ್ಲಿ ಭಕ್ತರ ಸಂಚಾರಕ್ಕಾಗಿ 2 ಬೋಟ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ತೆಪ್ಪದ ಮೂಲಕ ಸಾಗಿಸುವಾಗ ಅನಾಹುತಗಳು ಸಂಭವಿಸಬಹುದೆಂದು ಹೇಳಿದರು. ಬೈಪಾಸ್ ರಸ್ತೆಗಳನ್ನು ಮಾಡಿ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಡೆಂಕಣ ಮರಡಿಯಲ್ಲಿ ಯಾವುದೆ ವಾಹನಗಳಿಗೆ ಅವಕಾಶ ನೀಡಬಾರದು, ದೇವರ ದರ್ಶನ ದಾರಿಯಲ್ಲಿ ಭಕ್ತರ ಕಾಲು ತುಳಿತ ತಡೆಗಟ್ಟಬೇಕೆಂದು ಪೊಲೀಸರಿಗೆ ಸೂಚಿಸಿದರು.
ಮದ್ಯಪಾನ ಮಾರಾಟ ನಿಷೇಧಿಸಬೇಕು, ವಸ್ತು ಪ್ರದರ್ಶನ, ಕಾರ್ಣಿಕ ನುಡಿ ಸೇರಿದಂತೆ ಜಾತ್ರೆಯ ಎಲ್ಲ ಮಾಹಿತಿಯನ್ನು ಸಮರ್ಪಕ ರೀತಿಯಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ನಿರ್ವಹಿಸಬೇಕು. ಜಾತ್ರಾ ಸಿದ್ಧತಾ ಪರಿಶೀಲನಾ ಸಭೆ ಹೊಸಪೇಟೆ ಎಸಿ ಸುನಿಲ್‌ಕುಮಾರ ನೇತೃತ್ವದಲ್ಲಿ ನಡೆಯಲಿದ್ದು, ಆ ಸಭೆಗೆ ಕಡ್ಡಾಯವಾಗಿ ಎಲ್ಲ ಅಧಿಕಾರಿಗಳು ಹಾಜರಾಗಿ ವರದಿ ನೀಡಬೇಕೆಂದು ಕಟ್ಟಪ್ಪಣೆ ಮಾಡಿದರು.
ಸಭೆಯಲ್ಲಿ ದೇವಸ್ಥಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಎಡಿಸಿ ವೆಂಕಟೇಶ, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಎಸ್ಪಿ ಡಾ. ಚೇತನ್‌ಸಿಂಗ್ ರಾಠೋಡ್, ಎಸಿ ಸುನಿಲ್‌ಕುಮಾರ, ಜಿಪಂ ಸಿಇಒ ಮಂಜುನಾಥ ನಾಯಕ್, ಜಿಪಂ ಸದಸ್ಯ ವಸಂತ,  ಎಪಿಎಂಸಿ ಅಧ್ಯಕ್ಷ ವಾರದಗೌಸ್ ಮೋಹಿದ್ದೀನ್, ಪ್ರಕಾಶ ಒಡೆಯರ್, ಜಿಪಂ ಮಾಜಿ ಸದಸ್ಯ ಬಸವನಗೌಡ, ಅರವಳ್ಳಿ ವೀರಣ್ಣ, ಅಟವಾಳಗಿ ಕೊಟ್ರೇಶ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.