ಬಳ್ಳಾರಿ

ಇನ್ಮುಂದೆ ವೈದ್ಯರ ನಡಿಗೆ ಹಳ್ಳಿ ಕಡೆಗೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 31
ರಾಜ್ಯದ ತೀರಾ ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಆರೋಗ್ಯ, ಶಿಕ್ಷಣ, ಸ್ವಚ್ಛತೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಭಾರತೀಯ ವೈದ್ಯಕೀಯ ಸಂಘ 'ವೈದ್ಯರ ನಡಿಗೆ ಹಳ್ಳಿಯ ಕಡೆಗೆ' ಎಂಬ ಯೋಜನೆಯೊಂದಿಗೆ ಹಳ್ಳಿಯತ್ತ ಹೆಜ್ಜೆ ಹಾಕಿದೆ. ಅದರ ಭಾಗವಾಗಿಯೇ ಈಗಾಗಲೇ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಅರಳಿಗನೂರು ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದೆ.
ಜಾಗೃತಿ: ಗ್ರಾಮಾಂತರ ಪ್ರದೇಶಗಳು ಅದರಲ್ಲೂ ತೀರಾ ಹಿಂದುಳಿದ ಪ್ರದೇಶಗಳಿಗೆ ವೈದ್ಯರು ಹೋಗುವುದಿಲ್ಲ. ಇಂತಹ ಗ್ರಾಮಗಳನ್ನು ಆಯ್ಕೆ ಮಾಡಿ, ದತ್ತು ತೆಗೆದುಕೊಂಡು ಅಲ್ಲಿನ ಜನರಿಗೆ ಆರೋಗ್ಯ ತಪಾಸಣೆ, ಆರೋಗ್ಯ ಕುರಿತಾಗಿ ಜಾಗೃತಿ ಮೂಡಿಸುವುದರೊಂದಿಗೆ ಶಿಕ್ಷಣ ಮತ್ತು ಸ್ವಚ್ಛತೆ ಮೂಡಿಸಲು ಭಾರತೀಯ ವೈದ್ಯಕೀಯ ಸಂಘ ಮುಂದಾಗಿದೆ. ಇದಕ್ಕೆ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಎಂಬ ಹೆಸರನ್ನಿಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಇಂತಹ ಕಾರ್ಯಕ್ಕೆ ಚಾಲನೆ ನೀಡಿದ್ದು, ಈ ವರ್ಷದಲ್ಲಿ ರಾಜ್ಯದಲ್ಲಿ 35ರಿಂದ 40 ಹಳ್ಳಿ ಅಥವಾ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಚಿಂತನೆ ಹೊಂದಲಾಗಿದೆ.
ಉತ್ತಮ ಬೆಳವಣಿಗೆ: ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರು ಕೆಲಸ ಮಾಡಲು ಇಷ್ಟಪಡುವುದಿಲ್ಲ. ಅಲ್ಲದೆ ಸರ್ಕಾರ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಹರಸಾಹಸ ಮಾಡುತ್ತಿದೆ. ಇದರ ಮಧ್ಯೆಯೇ ಐಎಂಎ ಗ್ರಾಮಗಳ ಕಡೆಗೆ ಹೋಗುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಐಎಂಎ ರಾಜ್ಯ ಘಟಕದೊಂದಿಗೆ ರಾಜ್ಯದ 170ಕ್ಕೂ ಹೆಚ್ಚು ಶಾಖೆಗಳು ಇಂತಹ ಕಾರ್ಯಕ್ಕೆ ಆಸಕ್ತಿವಹಿಸಿರುವುದು ಉತ್ತಮ ಬೆಳವಣಿಗೆ.
ಹೊಸಳ್ಳಿ ದತ್ತು: 15 ದಿನಗಳ ಹಿಂದೆಯೇ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿಯನ್ನು ಅಲ್ಲಿನ ಐಎಂಎ ಘಟಕ ದತ್ತು ತೆಗೆದುಕೊಂಡಿದೆ. ಅಲ್ಲಿನ ಡಾ. ವಾಣಿ ಮತ್ತು ಡಾ. ಕೊಟ್ರೇಶ್ವರ್ ಸೇರಿದಂತೆ ಅಲ್ಲಿನ ಐಎಂಎ ಶಾಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇನ್ನು ಬಳ್ಳಾರಿ ಜಿಲ್ಲೆಯಲ್ಲಿಯೂ ಸಿರುಗುಪ್ಪ ತಾಲೂಕಿನ ಅರಳಿಗನೂರು ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಡಾ. ಮಧುಸೂದನ್ ಕಾರಿಗನೂರು, ಅಚ್ಯುತಕುಮಾರ್, ಮನೋಜ್ ಉಸ್ತುವಾರಿ ವಹಿಸಿಕೊಂಡು ಐಎಂಎ ಉದ್ದೇಶ ಸಕಾರಗೊಳಿಸಲು ಮುಂದಾಗಿದ್ದಾರೆ.
ಲಿಖಿತ ರೂಪದ ಒಡಂಬಡಿಕೆ: ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕೇವಲ ಒಂದೆರಡು ದಿನದ ಕಾರ್ಯಕ್ರಮವಲ್ಲ. ಭಾರತೀಯ ವೈದ್ಯಕೀಯ ಸಂಘ ಶಾಲೆ ಅಥವಾ ಗ್ರಾಮಗಳನ್ನು ದತ್ತು ತೆಗೆದುಕೊಂಡಿರುವ ಬಗ್ಗೆ ಲಿಖಿತವಾದ ಒಪ್ಪಂದವನ್ನು ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿಯೇ ಮಾಡಿಕೊಂಡು ತನ್ನ ಕಾರ್ಯಚಟುವಟಿಕೆ ರೂಪಿಸುತ್ತದೆ.
ಇನ್ನು ಗ್ರಾಮಗಳನ್ನು ದತ್ತು ತೆಗೆದುಕೊಂಡರೆ ಶಾಲೆಯ ಮುಖಾಂತರ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದರೊಂದಿಗೆ ಇಡೀ ಗ್ರಾಮಕ್ಕೆ ಆರೋಗ್ಯ ಕಾಳಜಿ ಮೂಡಿಸಲಾಗುತ್ತದೆ. ಅದರೊಂದಿಗೆ ಶಿಕ್ಷಣ ಕುರಿತಾಗಿ ಜಾಗೃತಿ, ಸ್ವಚ್ಛತೆಯ ಮಹತ್ವ, ಸರ್ಕಾರಿ ಯೋಜನೆಗಳು, ಅವುಗಳಿಂದ ಜನರಿಗೆ ಆಗುವ ಉಪಯೋಗದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಇಂತಹ ಚಟುವಟಿಕೆಗೆ ಬೇಕಾಗುವ ವೆಚ್ಚವನ್ನು ಐಎಂಎ ಭರಿಸಲಿದೆ. ಗ್ರಾಮದಲ್ಲಿ ಉದ್ಭವಿಸುವ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಸೇವೆಯನ್ನೂ ನೀಡಲಿದೆ.
ರಾಜ್ಯದಲ್ಲಿ ಸುಮಾರು 170ಕ್ಕೂ ಹೆಚ್ಚು ಐಎಂಎಗಳ ಶಾಖೆಗಳಿದ್ದು, ಆಯಾ ಶಾಖೆ ತನ್ನ ವ್ಯಾಪ್ತಿಯ ಗ್ರಾಮ ಅಥವಾ ಶಾಲೆಗಳನ್ನು ದತ್ತು ತೆಗೆದುಕೊಂಡು ಸೇವೆ ಒದಗಿಸಲಿದೆ.
ಯಾವತ್ತೋ ಒಂದು ದಿನ ಗ್ರಾಮಕ್ಕೆ ಹೋಗಿ ಕೇವಲ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಲ್ಲ. ಅಗತ್ಯ ಬಿದ್ದಾಗ ಐಎಂಎ ವೈದ್ಯರು ಹೋಗಿ ಅಗತ್ಯ ಚಟುವಟಿಕೆ ಕೈಗೊಳ್ಳಲಿದ್ದಾರೆ. ಪ್ರತಿ ತಿಂಗಳು ಒಂದು ಬಾರಿ ಅಥವಾ ಅಗತ್ಯವಿದ್ದಾಗ ದತ್ತು ತೆಗೆದುಕೊಂಡ ಗ್ರಾಮಕ್ಕೆ ಹೋಗಿ, ಜಾಗೃತಿ, ಚಿಕಿತ್ಸೆ, ತಪಾಸಣೆ ನಡೆಸಲಿದೆ. ತೀರಾ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ, ಅಂತಹ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದು ಐಎಂಎ ಉದ್ದೇಶವಾಗಿದೆ.
ನಾವು ಏನೋ ದೊಡ್ಡ ಕ್ರಾಂತಿ ಮಾಡುತ್ತೇವೆ ಎನ್ನುವ ಮನೋಭಾವನೆಯಿಲ್ಲ. ತೀರಾ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ ಅವರಲ್ಲಿ ವೈದ್ಯಕೀಯ ಸೇವೆ ಸೇರಿದಂತೆ ಇತರ ವಿಷಯಗಳ ಕುರಿತು ಜಾಗೃತಿ ಮೂಡಿಸಿ, ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶವಾಗಿದೆ. ಶಾಲೆಗಳನ್ನು ದತ್ತು ತೆಗೆದುಕೊಂಡು ಆ ಮೂಲಕ ಹಳ್ಳಿಗಳನ್ನು ಆರೋಗ್ಯ, ಶಿಕ್ಷಣ, ಸ್ವಚ್ಛತೆಯ ದೃಷ್ಟಿಯಿಂದ ಅಭಿವೃದ್ಧಿ ಪಡಿಸುವ ಉದ್ದೇಶ ನಮ್ಮದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ದತ್ತು ತೆಗೆದುಕೊಂಡಿರುವ ಗ್ರಾಮದಲ್ಲಿನ ಶೇ. 100 ಹಾಜರಾತಿ ಪಡೆದಿರುವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಓದಿಸುವ ಚಿಂತನೆಯನ್ನೂ ಮಾಡಲಾಗತ್ತಿದೆ.
- ವೈ.ಸಿ. ಯೋಗಾನಂದ ರೆಡ್ಡಿ,
 ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.