9ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 1
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಹಮ್ಮಿಕೊಂಡಿರುವ ಸರದಿ ಉಪವಾಸ ಸತ್ಯಾಗ್ರಹ ಒಂಭತ್ತನೇ ದಿನವಾದ ಮಂಗಳವಾರವೂ ಮುಂದುವರಿಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ನೇತೃತ್ವ ವಹಿಸಿ ಮಾತನಾಡಿ, ಗಣಿಗಾರಿಕೆ ರಾಷ್ಟ್ರೀಕರಣಗೊಳಿಸಬೇಕು. ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಬೀದಿಗೆ ಬಿದ್ದ 25 ಸಾವಿರ ಗಣಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು. ಆರ್ಅಂಡ್ಆರ್ ಯೋಜನೆ ಜಾರಿ ಮಾಡದ ಅಧಿಕಾರಿಗಳನ್ನು ವಜಾಗೊಳಿಸಬೇಕು. ಯೋಜನೆಯಡಿ ವಿವಿಧ ಕಂಪನಿಗಳಿಂದ ಸಂಗ್ರಹಿಸಿದ 36 ಸಾವಿರ ಕೋಟಿ ಹಣದಲ್ಲಿ ಗಣಿ ಕಾರ್ಮಿಕರಿಗೆ ಮಾಸಿಕ ವೇತನ ಒದಗಿಸಬೇಕು. ವಿವಿಧ ಕಂಪನಿಗಳಿಂದ ಗಣಿ ಕಾರ್ಮಿಕರಿಗೆ ದೊರೆಯಬೇಕಿದ್ದ ಬಾಕಿ ಹಣವನ್ನು ಕೂಡಲೇ ಕೊಡಿಸುವುದು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗಾಗಿ 2013 ಸೆಪ್ಟೆಂಬರ್ ಹಾಗೂ 2014ರ ಫೆಬ್ರವರಿ 18ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.
ಆದರೂ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಸತತ ಸರದಿ ನಿರಶನ ಹಮ್ಮಿಕೊಂಡಿದ್ದೇವೆ. ಮೊದಲ ದಿನ ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಮನವಿ ಸ್ವೀಕರಿಸಿದ ನಂತರ ಈ ವರೆಗೂ ಯಾವುದೇ ಶಾಸಕ, ಸಚಿವರು ಭೇಟಿ ನೀಡಿಲ್ಲ. ಹೀಗಾಗಿ, ನಿರಶನವನ್ನು ಹಾಗೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಸಂಡೂರು ಶಾಸಕ ಈ. ತುಕಾರಾಂ ಬಿಜೆಪಿಯನ್ನು ವಿರೋಧಿಸುತ್ತಲೇ ಎರಡು ಬಾರಿ ಆಯ್ಕೆಯಾದರೂ ಕ್ಷೇತ್ರದ ಅಭಿವೃದ್ಧಿ ಹಾಗೂ ಗಣಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯವರೇ ಆದ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಕಾರ್ಮಿಕ ಸಚಿವರಾಗಿದ್ದರೂ, ಯಾವುದೇ ಪ್ರಯೋಜನವಿಲ್ಲ. ಸತತ 9 ದಿನಗಳಿಂದ ನಿರಶನ ಹಮ್ಮಿಕೊಂಡರೂ, ಸೌಜನ್ಯಕ್ಕಾದರೂ ನಿರಶನ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂರಿದರು.
ವೀರಮಣಿ, ಭಿ. ಜಂಭಣ್ಣ, ಬಿ. ಚಿಲಕಣ್ಣ, ವಿ. ವೀರೇಶ್, ಬಿ. ಚಿತ್ತಪ್ಪ, ಬಿ. ಮುನಿಯ, ಹುಲಿಯಪ್ಪ, ಈರಣ್ಣ, ಚಂದ್ರಶೇಖರ್, ಫಕ್ರುದ್ಧೀನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

