ಸಿಬ್ಬಂದಿ ಇಲ್ಲದೆ ಸೊರಗಿದ ಜೆಸ್ಕಾಂ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜು. 7
ಇಲ್ಲಿಯ ಜೆಸ್ಕಾಂ ಕಚೇರಿ ಅಧಿಕಾರಿಗಳು ಸಿಬ್ಬಂದಿ ಇಲ್ಲದೆ ಸೊರಗುತ್ತಿದೆ. ಏಳು ಕಿರಿಯ ಎಂಜಿನಿಯರ್ ಹಾಗೂ ಮೂರು ಸಹಾಯಕ ಎಂಜಿನಿಯರ್ ಹುದ್ದೆಗಳಿದ್ದರೂ ಕೇವಲ ಒಬ್ಬ ಎಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾದರೆ ವಿದ್ಯುತ್ ಅವಘಡಗಳು, ಗ್ರಾಹಕರ ದೂರಿಗೆ ಹೇಗೆ ಸ್ಪಂದಿಸಲು ಸಾಧ್ಯ? ಗ್ರಾಹಕರು, ರೈತರ ಪಾಡೇನು?
ತಾಂತ್ರಿಕ ಜ್ಞಾನದ ಕೊರತೆಯಿಂದ ತಾಲೂಕಿನಲ್ಲಿ ಹಲವೆಡೆ ವಿದ್ಯುತ್ ಅವಘಡ, ಸರಬರಾಜಿನಲ್ಲಿ ತೊಂದರೆ ಕಂಡು ಬರುತ್ತಿದೆ. ಆದರೂ ಹಿರಿಯ ಅಧಿಕಾರಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಮನೆ ಮನೆಗೆ ಹೋಗಿ ವಿದ್ಯುತ್ ಮೀಟರ್ ನೋಡಿ ಬಿಲ್ ಬರೆದು ಕೊಡುವ ಮೀಟರ್ ರೀಡರ್ಗಳು ಈಗ ತಾಲೂಕಿನ 8 ಶಾಖಾ ಕಚೇರಿಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಜ್ಜಿನಿ ಶಾಖಾ ಕಚೇರಿಯಲ್ಲಿ ಲೈನ್ಮನ್ ಇಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನ ಹುಡೇಂ ಗ್ರಾಮದಲ್ಲಿ ಶಾಖಾ ಕಚೇರಿ ಇದ್ದರೂ ಈ ವರೆಗೂ ಪ್ರಾರಂಭವಾಗಿಲ್ಲ. ಅಲ್ಲದೆ ಕೆಲವು ಶಾಖೆಗಳಲ್ಲಿ ಮೀಟರ್ ರೀಡರ್ಗಳೇ ಎಂಜಿನಿಯರ್ ಆಗಿರುವ ಜತೆಗೆ ಗುತ್ತಿಗೆದಾರರೂ ಆಗಿದ್ದಾರೆ! ಕೆಲವು ಒಂದೇ ಕಚೇರಿಯಲ್ಲಿ 25 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ದುಸ್ಥಿತಿ ತಾಲೂಕಿನ ಜೆಸ್ಕಾಂಗೆ ಬಂದೊದಗಿದ್ದರೂ ಹಿರಿಯ ಅಧಿಕಾರಿಗಳು ಮಾತ್ರ ಈ ಬಗ್ಗೆ ಮೌನ ತಾಳಿದ್ದಾರೆ.
ತಾಲೂಕಿನ ರೈತಪರ, ಜನಪರ ಸಂಘಟನೆಗಳು ಈ ಕುರಿತು ಧ್ವನಿ ಎತ್ತಿದರೂ ಪ್ರಯೋಜನವಾಗುತ್ತಿಲ್ಲ. ತಾಲೂಕಿನಾದ್ಯಾಂತ ವಿದ್ಯುತ್ ಸೋರಿಕೆ, ಕಳ್ಳತನ ನಡೆದೇ ಇದೆ. ತಾಂತ್ರಿಕ ಕಾರಣಗಳಿಂದ ಹಳ್ಳಿಗಳಲ್ಲಿ ಹತ್ತಾರು ದಿನಗಳ ಕಾಲ ಕರೆಂಟ್ ಇರುವುದೇ ಇಲ್ಲ. ಅಧಿಕಾರಿಗಳನ್ನು ಕೇಳಿದರೆ ಸಿಬ್ಬಂದಿ ಕೊರತೆ, ತಾಂತ್ರಿಕ ಕಾರಣ ನೀಡುತ್ತಾರೆ.
2 ತಿಂಗಳಲ್ಲಿ ವಿದ್ಯುತ್ ಅವಘಡದಿಂದ 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಷ್ಟೆಲ್ಲ ಆದರೂ ವಿದ್ಯುತ್ ಇಲಾಖೆ ಜಾಗ್ರತವಾಗಿಲ್ಲ. ಇನ್ನೂ ಕೂಡ್ಲಿಗಿ ಜೆಸ್ಕಾಂ ಇಲಾಖೆ ಕಚೇರಿಯಂತೂ ಈಗಲೋ ಆಗಲೋ ಬಿದ್ದು ಹೋಗುವಂತಿದೆ.
ಹುದ್ದೆ ಖಾಲಿ ಇವೆ: ತಾಲೂಕಿನ ಕೂಡ್ಲಿಗಿ, ಕೊಟ್ಟೂರು ಪಟ್ಟಣ, ಕೊಟ್ಟೂರು ಗ್ರಾಮಾಂತರ, ಗುಡೇಕೋಟೆ, ಬಣವಿಕಲ್ಲು, ಚಿಕ್ಕಜೋಗಿಹಳ್ಳಿ, ಹೊಸಹಳ್ಳಿ, ಹೂಡೇಂ, ಉಜ್ಜಿನಿ ಹೀಗೆ ಜೆಸ್ಕಾಂ ಇಲಾಖೆ 9 ಶಾಖಾ ಕಚೇರಿಗಳಿದ್ದು, ಕೂಡ್ಲಿಗಿ ಹೊರತುಪಡಿಸಿ ಎಲ್ಲ ಶಾಖೆಗಳಲ್ಲಿಯೂ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ. ಅಲ್ಲಿ ಮೀಟರ್ ಬರೆಯುವವರು ಪ್ರಮೋಟೆಡ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2 ಅಕೌಂಟ್ ಸೆಕ್ಷನ್ಗಳಿದ್ದು, 3 ಸೆಕ್ಷನ್ ಕಚೇರಿಗಳಿವೆ. 9 ಶಾಖಾ ಕಚೇರಿಗಳಿವೆ. 7 ಜೆಇ ಹುದ್ದೆಗಳಲ್ಲಿ 6 ಖಾಲಿ ಇವೆ. 3 ಎಇ ಹುದ್ದೆಗಳಲ್ಲಿ ಎಲ್ಲವೂ ಖಾಲಿ ಇವೆ ಎನ್ನುತ್ತಾರೆ ಕೂಡ್ಲಿಗಿ ಜೆಸ್ಕಾಂ ಇಲಾಖೆಯ ಎಇಇ ಉಮಾಮಹೇಶ್.
ಹೋರಾಟ ಅನಿವಾರ್ಯ: ನಿರಂತರ ಜ್ಯೋತಿ ತಾಲೂಕಿನಲ್ಲಿ ಕಾರ್ಯರೂಪಕ್ಕೆ ಬಂದಿದ್ದರೂ ರೈತರಿಗೆ ಸರಿಯಾದ ವಿದ್ಯುತ್ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯುತ್ ಇಲ್ಲದೇ ತಾಲೂಕಿನ ಹಳ್ಳಿಗಳು ರಾತ್ರಿಪೂರ ಕತ್ತಲಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾಗಿ ವಿದ್ಯುತ್ ನೀಡದಿದ್ದರೆ ತಾಲೂಕಿನ ರೈತರು ಬೀದಿಗಿಳಿದು ಹೋರಾಟ ಮಾಡುವ ಕಾಲ ದೂರವಿಲ್ಲ ಎನ್ನುತ್ತಾರೆ ರೈತ ಸಂಘದ ಮುಖಂಡ ಕೆ.ಕೆ. ಹಟ್ಟಿ ಮಹೇಶ್
ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಿ, ತಾಲೂಕಿನ ವಿದ್ಯುತ್ ಸಮಸ್ಯೆ ಸರಿಪಡಿಸಬೇಕು ಎಂಬುದು ತಾಲೂಕಿನ ಸಾರ್ವಜನಿಕರ ಆಗ್ರಹವಾಗಿದೆ.
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

