ಬಳ್ಳಾರಿ

ಕುಡಿವ ನೀರಿನ ಸಮಸ್ಯೆಗೆ ಮುಕ್ತಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 15
ತುಂಗಭದ್ರಾ ಜಲಾಶಯಕ್ಕೆ ನೀರು ಬಿಡದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಕುಡಿವ ನೀರಿನ ಹಾಹಾಕಾರ ಆರಂಭವಾಗುವ ಎಲ್ಲ ಸಾಧ್ಯತೆಗಳಿದ್ದವು.  ಆದರೆ ನೀರಿನ ಸಮಸ್ಯೆ ಅರಿತ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ನಗರ ನೀರು ಸರಬರಾಜು ಮಂಡಳಿ ತುಂಗಭದ್ರಾ ಜಲಾಶಯದಿಂದ ಎಲ್‌ಎಲ್‌ಸಿ ಕಾಲುವೆಗೆ ನೀರು ಬಿಡಿಸುವಲ್ಲಿ ಯಶಸ್ವಿಯಾಗಿದೆ.
ಟಿ.ಬಿ. ಬೋರ್ಡ್ 1200 ಕ್ಯುಸೆಕ್ ನೀರು ಬಿಡುವುದಕ್ಕೆ ಒಪ್ಪಿಗೆ ಸೂಚಿಸಿದ್ದು, ಮಂಗಳವಾರವೇ ಕಾಲುವೆಗೆ 400 ಕ್ಯುಸೆಕ್ ನೀರು ಹರಿದು ಬಂದಿರುವುದು ಭೀಕರ ನೀರಿನ ಸಮಸ್ಯೆಗೆ ಮುಕ್ತಿ ಹಾಡಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಬರ: ಕಳೆದ ವರ್ಷ ಜುಲೈ ತಿಂಗಳ 12ರಂದು ತುಂಗಭದ್ರಾ ಜಲಾಶಯದಿಂದ ಎಚ್‌ಎಲ್‌ಸಿ ಕಾಲುವೆಗೆ ನೀರು ಬಿಟ್ಟಿದ್ದರಿಂದ ನೀರಿನ ಸಮಸ್ಯೆ ಅಷ್ಟಾಗಿ ಕಂಡಿರಲಿಲ್ಲ. ಕಳೆದ ವರ್ಷ ಈ ಹೊತ್ತಿಗೆ  ತುಂಗಭದ್ರಾ ಜಲಾಶಯದಲ್ಲಿ 67 ಟಿಎಂಸಿ ನೀರಿದ್ದರೆ, ಈ ಬಾರಿ ಕೇವಲ 14 ಟಿಎಂಸಿ ನೀರಿದೆ. ಕಳೆದ ವರ್ಷ ಜು. 22ರ ಹೊತ್ತಿಗೆ ಜಲಾಶಯವು ತುಂಬಿತ್ತು, ಆದರೆ ಈ ಬಾರಿ ಜ. 15 ಆದರೂ ಕಾಲು ಭಾಗದಷ್ಟು ಜಲಾಶಯ ತುಂಬದಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿಗಳಿಂದ ಬೋರ್ಡ್‌ಗೆ ಪತ್ರ
ಬಳ್ಳಾರಿ ಮಹಾನಗರಕ್ಕೆ ನೀರಿನ ಮೂಲ ಅಲ್ಲೀಪುರ ಕೆರೆ, ಮೋಕಾ ಕೆರೆ. ಆದರೆ ಅಲ್ಲೀಪುರ ಕೆರೆಯ ಬಂಡ್ ಒಡೆದಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜುಲೈ ತಿಂಗಳ 15ರಿಂದ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಹೆಚ್ಚಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಬೋರ್ಡ್‌ಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಬೋರ್ಡ್ ನೀರು ಬಿಡುವುದಕ್ಕೆ ಒಪ್ಪಿಕೊಂಡಿದೆ. ಎಚ್‌ಎಲ್‌ಸಿ ಕಾಲುವೆಗೆ ಕುಡಿವ ನೀರಿನ ಉದ್ದೇಶಕ್ಕೆ ಮಾತ್ರ ನೀರು ಬಿಡಲಾಗಿದೆ. ಈ ನೀರನ್ನು ನೀರಾವರಿಗೆ ಬಳಕೆ ಮಾಡದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
1200 ಕ್ಯುಸೆಕ್ ನೀರು ಬಿಡುಗಡೆ ಭರವಸೆ:
ಬಳ್ಳಾರಿ ಕುಡಿಯುವ ನೀರಿನ ಉದ್ದೇಶದಿಂದಾಗಿ 1200 ಕ್ಯೂಸೆಕ್ ನೀರು ಬಿಡುಗಡೆಯ ಭರವಸೆಯನ್ನು ಟಿ.ಬಿ. ಬೋರ್ಡ್ ನೀಡಿದೆ. ತುಂಗಭದ್ರಾ ಜಲಾಶಯದಿಂದ ಕಾಲುವೆಯ ಮೂಲಕ ನೀರು ಬಳ್ಳಾರಿಗೆ ತಲುಬೇಕಾದರೆ 83 ಕಿ.ಮೀ. ಕ್ರಮಿಸಬೇಕು. ಮಂಗಳವಾರ ಬೆಳಗ್ಗೆ 100 ಕ್ಯುಸೆಕ್ ನೀರು ಬಿಟ್ಟಿದ್ದು, ಸಂಜೆ ಹೊತ್ತಿಗೆ 400 ಕ್ಯುಸೆಕ್ ಬಿಟ್ಟಿದ್ದಾರೆ. ನೀರು ಬಳ್ಳಾರಿಗೆ ತಲುಪಿದ ಮೇಲೆ ಪ್ರತಿದಿನ 100 ಕ್ಯುಸೆಕ್ ನೀರು ಬಿಡುವುದರಿಂದ ಬಳ್ಳಾರಿಯ ನೀರಿನ ಬೇಡಿಕೆಯನ್ನು ತೀರಿಸಬಹುದಾಗಿದೆ. ಇನ್ನು ಆಂಧ್ರಪ್ರದೇಶದಿಂದ ಇಂಟೆಂಡ್ ಬಂದರೆ, ಎಚ್‌ಎಲ್‌ಸಿ ಕಾಲುವೆಗೆ ನಾಲ್ಕೈದು ದಿನಗಳಲ್ಲಿ ನೀರು ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋರ್ ಮಾತನಾಡಿ, ನೀರನ್ನು ಡಿಪಿಗಳಲ್ಲಿ ನೀರಾವರಿಗೆ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಿದ್ದು, ಡಿಪಿಗಳ ಹತ್ತಿರ ಒಂದು ಡಿಎಆರ್ ತುಕಡಿ ಸೇರಿದಂತೆ ಪ್ರತಿ ಡಿಪಿಗಳ ಹತ್ತಿರ 2 ಸಿಬ್ಬಂದಿ ಸೇರಿದಂತೆ ಸುಮಾರು 50ಕ್ಕೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ನಗರದ ಕುಡಿಯುವ ನೀರಿನ ಗಂಭೀರತೆ ಕುರಿತಾಗಿ ಶುಕ್ರವಾರ ತುಂಗಭದ್ರಾ ಬೋರ್ಡ್‌ಗೆ ಪತ್ರ ಬರೆದು ತಿಳಿಸಲಾಗಿತ್ತು. ಇದರಿಂದಾಗಿ ಮಂಗಳವಾರ 400 ಕ್ಯುಸೆಕ್ ನೀರು ಎಚ್‌ಎಲ್‌ಸಿ ಕಾಲುವೆಗೆ ಬಿಟ್ಟಿದ್ದಾರೆ. ಬುಧವಾರ ಸಂಜೆಯ ಹೊತ್ತಿಗೆ ಬಳ್ಳಾರಿಗೆ ನೀರು ತಲುಪಲಿದ್ದು, ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿದಿನ 100 ಕ್ಯುಸೆಕ್ ನೀರನ್ನು ಅಲ್ಲೀಪುರ ಕೆರೆ ಪಂಪ್ ಮಾಡುವ ಸಾಮರ್ಥ್ಯ ಇರುವುದರಿಂದ ಪ್ರತಿದಿನ ನೀರು ಎಚ್‌ಎಲ್‌ಸಿ ಕಾಲುವೆಯಿಂದ ಬಂದು, ಅಲ್ಲೀಪುರ ಸಮೀಪದ ಕಾಲುವೆಯ ಬಂಡ್‌ನಲ್ಲಿ ನಿಲ್ಲುವುದರಿಂದ ನೀರನ್ನು ಬಳಕೆ ಮಾಡಲಾಗುತ್ತದೆ.
- ಸಮೀರ್ ಶುಕ್ಲಾ, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.