ಬಳ್ಳಾರಿ

ಅತ್ಯಾಚಾರ ಖಂಡಿಸಿ ಮೊಂಬತ್ತಿ ಮೆರವಣಿಗೆ

Published On :

ಹಗರಿಬೊಮ್ಮನಹಳ್ಳಿ: ಕರ್ನಾಟಕ ಸೇರಿದಂತೆ ರಾಷ್ಟ್ರವ್ಯಾಪ್ತಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ರಾತ್ರಿ ಮಾನವ ಹಕ್ಕುಗಳ ಸಂರಕ್ಷಣಾ ಮತ್ತು ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳಿಗೆ ಸೇರಿದ ನೂರಾರು ಕಾರ್ಯಕರ್ತರು ಮೊಂಬತ್ತಿ ಹಿಡಿದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.
ಮಾನವ ಹಕ್ಕುಗಳ ಸಂರಕ್ಷಣಾ ಮತ್ತು ಸೇವಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ  ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಸಂಜೆ ಪಟ್ಟಣದ ರಾಮನಗರದ ಶ್ರೀ ಈಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಳೇ ಬಿಡಿಒ ಆಫೀಸ್, ಬೈಪಾಸ್ ರಸ್ತೆ, ಬಸವೇಶ್ವರ ಬಜಾರ್ ಮೂಲಕ ಸಾಗಿ ಬಂದು ತಾಲೂಕು ಕಚೇರಿ ಬಳಿ ಮುಕ್ತಾಯಗೊಂಡಿತು. ಅತ್ಯಾಚಾರಿಗಳನ್ನು ತಕ್ಷಣ ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಿ ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರಸ್ವಾಮಿ, ಮಾನವ ಹಕ್ಕುಗಳ ಸಂರಕ್ಷಣಾ ಮತ್ತು ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಂ. ಚನ್ನವೀರ್, ಮುಖಂಡರಾದ ಕೊರಗಲ್ ಗಿರೀಶ್, ಕೆ. ಮಹೇಶ್, ಪೋಟೋ ಆನಂದ್, ದಲಿತ ಮುಖಂಡ ಮಾತಾಗ್ಯಾಸ್ ಎರ್ರಿಸ್ವಾಮಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಬಂಡ್ರಿ ವಿಶ್ವನಾಥ, ವಕೀಲರ ಸಂಘದ ಅಧ್ಯಕ್ಷೆ ಎಚ್.ಎಸ್. ವಿಶಾಲಾಕ್ಷಿ ಬಾಪೂಜಿ, ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಇ. ಭರತ್, ಮೈತ್ರಿ ಟ್ರಸ್ಟ್ ಅಧ್ಯಕ್ಷ ಚಿದ್ರಿ ಅಮರನಾಥ್, ಎಸ್‌ಎಸ್‌ಕೆ ಸಮಾಜದ ಪರಶುರಾಮ್, ಪೋಟೋಗ್ರಾಫರ್ಸ್ ಸಂಘದ ಅಧ್ಯಕ್ಷ ಪೋಟೋ ರಾಮಣ್ಣ, ಲೇಖಕ ಪರಮೇಶ್ವರಯ್ಯ ಸೋಪ್ಪಿಮಠ್, ಪಿಎಸ್‌ಐ ಸಂತೋಷ್, ಎ. ಚಂದ್ರಶೇಖರ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.