ಬಳ್ಳಾರಿ

ಕೆರೆ ಒತ್ತುವರಿ ತೆರವಿಗೆ ಮೀನ-ಮೇಷ

Published On :

-ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಬಯಲು ಸೀಮೆ ರೈತರಿಗೆ ಕೆರೆಗಳೇ ಜೀವಾಳ. ಈ ಕೆರೆ ಅಂಗಳವನ್ನು ಇಂದು ಉಳ್ಳವರು, ಪ್ರಭಾವಿಗಳು ಒತ್ತುವರಿ ಮಾಡಿರುವುದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ತೆರೆವುಗೊಳಿಸುವ ಗೋಜಿಗೆ ಹೋಗಿಲ್ಲ.
ಹೌದು, ತಾಲೂಕು ಸಣ್ಣ ನೀರಾವರಿ ಇಲಾಖೆಗೆ 8 ಹಾಗೂ ಪಂಚಾಯತ್ ರಾಜ್ ಇಲಾಖೆಗೆ 6 ಸೇರಿ ಒಟ್ಟು ತಾಲೂಕಿನಲ್ಲಿ 14 ಕೆರೆಗಳಿವೆ. ಆದರೆ, ಸರ್ಕಾರ ಕೆರೆ ಒತ್ತುವರಿ ತೆರವಿಗೆ ಕೆರೆ ಅಭಿವೃದ್ಧಿ ನಿಗಮ ಸ್ಥಾಪಿಸಿದರೂ ಯಾವ ಕ್ರಮವಿಲ್ಲ. ಕಂದಾಯ ಇಲಾಖೆ ಈವರೆಗೂ ಕೆರೆಗಳ ಸರ್ವೇ ಕಾರ್ಯಕ್ಕೆ ಮುಂದಾಗಿಲ್ಲ.
ಈ ಭಾಗದ 10 ಕೆರೆಗಳಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಈಗಾಗಲೇ ಕಾಮಗಾರಿ ಆರಂಭವಾಗಿದೆ. ರೈತರ ಜಮೀನುಗಳಿಗೆ ನೀರು ಹರಿಸುವ ಕಾಲುವೆಗಳಿಂದ ಮುದೇನೂರು, ದೇವಗೊಂಡನಹಳ್ಳಿ ಮತ್ತು ಹಿರೇಮಲ್ಲನಕೆರೆ ಗ್ರಾಮದ ಕೆರೆಗಳಿಗೆ ಜನ, ಜಾನುವಾರುಗಳಿಗೆ ನೀರಿನ ಅನುಕೂಲಕ್ಕಾಗಿ ನೀರು ಹರಿಸಲಾಗುತ್ತಿದೆ. ಆದರೆ ಕೆರೆಗೆ ನೀರು ಬಂದಿಲ್ಲ.
ರಾಜ್ಯದ 2 ಸಾವಿರ ಕೆರೆ ಅಭಿವೃದ್ಧಿಗೆ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೋಟ್ಯಂತರ ರು. ಬಿಡುಗಡೆ ಮಾಡಿತ್ತು. ಆದರೆ, ತಾಲೂಕಿನ ಕೆರೆ ಅಭಿವೃದ್ಧಿ ಕಾಮಗಾರಿ ಅರೆಬರೆಯಾಗಿವೆ. ಕೆರೆಗಳಿಗೆ ಗಡಿರೇಖೆಗಳಿಲ್ಲ, ಉಳ್ಳವರು ಕೆರೆ ಅಂಗಳದಲ್ಲಿಯೇ ಕೊಳವೆ ಬಾವಿಗಳನ್ನು ಕೊರೆದಿದ್ದಾರೆ. ಕೆರೆ ಭೂಮಿ ಉಳುಮೆ ಮಾಡುತ್ತಿರುವ ಪ್ರಕರಣಗಳೇ ಹೆಚ್ಚು.
ಎಲ್ಲೆಲ್ಲಿ ಎಷ್ಟು ಒತ್ತುವರಿ: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಗೊಂಡನಹಳ್ಳಿ- 50 ಎಕರೆ, ಹಗರನೂರು- 35 ಎಕರೆ, ಹಿರೇಹಡಗಲಿ- 15, ಸೋವೇನಹಳ್ಳಿ- 50 ಎಕರೆ, ನಾಗತಿಬಸಾಪುರ- 250 ಎಕರೆ, ಅರಳಿಹಳ್ಳಿ- 50 ಎಕರೆ, ತಳಕಲ್ಲ- 150 ಎಕರೆ, ದಾಸನಹಳ್ಳಿ- 20 ಎಕರೆಗಳಷ್ಟು ಒತ್ತುವರಿಯಾಗಿರುವ ವರದಿ ಇದೆ. ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಕೊಯಿಲಾರಗಟ್ಟಿ, ಹ್ಯಾರಡ ಹೊಸಮಲಿಯಮ್ಮ, ಹ್ಯಾರಡ ಹಳೆಮಲಿನಮ್ಮ, ಮಾನ್ಯರ ಮಸಲವಾಡ, ಮುದೇನೂರು, ಗಿರಿಯಾಪುರ ಸೇರಿದಂತೆ 6 ಕೆರೆಗಳ ಒಟ್ಟು ವಿಸ್ತೀರ್ಣ 123 ಹೆಕ್ಟೇರ್ ಪ್ರದೇಶವಿದೆ. ಇಲ್ಲಿಯೂ ಸಾಕಷ್ಟು ಕಡೆ ಒತ್ತುವರಿಯಾಗಿದೆ. ಆದರೆ ಇಲಾಖೆ ಮಾತ್ರ ಗಾಢ ನಿದ್ರೆಗೆ ಜಾರಿದ್ದು, ತಾಲೂಕಿನ ಕೆರೆಗಳ ಸರ್ವೆ ಮಾಡಿ ವರದಿ ಸರ್ಕಾರಕ್ಕೆ ಸಲ್ಲಿಸಬೇಕೆಂಬ ಆದೇಶವಿದ್ದರೂ ಇಲಾಖೆಗಳು ಸರ್ವೆ ಮಾಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.