ಅಮೇಜಿಂಗ್ ವ್ಯಾಲಿ ರೆಸಾರ್ಟ್ ಅರಣ್ಯ ಇಲಾಖೆ ಅಧೀನಕ್ಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 31
ಅಂತಿಮ ತಿಳಿವಳಿಕೆ ಪತ್ರ ನೀಡಿದರೂ ಸ್ವಾಧೀನ ಪಡಿಸಿಕೊಂಡಿರುವ ಅರಣ್ಯ ಭೂಮಿಯನ್ನು ರಜನಿ ಲಾಡ್ (ಶಾಸಕ ಅನಿಲ್ ಲಾಡ್ ಅವರ ಅತ್ತಿಗೆ) ತೆರವುಗೊಳಿಸದ ಹಿನ್ನೆಲೆಯಲ್ಲಿ ಗುರುವಾರ ಅರಣ್ಯಾಧಿಕಾರಿಗಳು ಅಮೇಜಿಂಗ್ ವ್ಯಾಲಿ ರೆಸಾರ್ಟ್ಗೆ ತೆರಳಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡರು.
ಸಂಡೂರು ತಾಲೂಕಿನ ನಾರ್ಥ್ ಈಸ್ಟರ್ನ್ ಫಾರೆಸ್ಟ್ ಬ್ಲಾಕ್ಗೆ ಸೇರಿದ 47.24 ಎಕರೆ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ರಜನಿ ಲಾಡ್ ಅವರ ಪತಿ ಅಶೋಕ್ ಲಾಡ್ ಅವರು ರೆಸಾರ್ಟ್ ನಿರ್ಮಿಸಿದ್ದರು. ಅರಣ್ಯ ಇಲಾಖೆಯ ಬಳ್ಳಾರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜು. 12ರಂದು ಅಂತಿಮ ತಿಳಿವಳಿಕೆ ಪತ್ರ ನೀಡಿ, ಅರಣ್ಯ ಭೂಮಿಯನ್ನು ಜು. 30ರ ಒಳಗಾಗಿ ತೆರವುಗೊಳಿಸಬೇಕೆಂದು ತಿಳಿಸಿದರು. ಆದರೆ ತೆರವುಗೊಳಿಸದ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಗುರುವಾರ ಮಧ್ಯಾಹ್ನ 1 ಗಂಟೆಗೆ ಬಳ್ಳಾರಿಯ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಕೆ.ಜಿ. ಬಸವರಾಜಪ್ಪ, ವಲಯಾಣ್ಯಾಧಿಕಾರಿ ವಿ. ಗಣೇಶ್, ಭಾಸ್ಕರ್, ಮಂಜುನಾಥ್ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಅರಣ್ಯ ಭೂಮಿಯಲ್ಲಿ ನಿರ್ಮಿಸಿದ್ದ ರೆಸ್ಟಾರೆಂಟ್, ಸಭಾಂಗಣ, 42 ಕೊಠಡಿ, ಕಾಟೇಜ್, ಹಿರೋಜಿ ಲಾಡ್ ಅವರ ಸಮಾಧಿ ಹಾಗೂ ಅರಣ್ಯ ಭೂಮಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡ, ಒಂದು ಗೇಟ್ ಜಪ್ತಿ ಮಾಡಿಕೊಂಡು ಬೀಗ ಹಾಕಿದ್ದಾರೆ. ಅರಣ್ಯ ಭೂಮಿಯಲ್ಲಿ ನಿರಂತರವಾಗಿ ಅರಣ್ಯಾಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ಇನ್ನು ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿರುವ ಕಟ್ಟಡಗಳನ್ನು ಮೇಲಧಿಕಾರಿಗಳ ಪರವಾನಗಿ ಪಡೆದು ನೆಲಸಮಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕ ಅನಿಲ್ ಲಾಡ್ ಅವರ ಸಹೋದರ ದಿ. ಅಶೋಕ್ ಲಾಡ್ 1999-2000ರಲ್ಲಿ ರೆಸಾರ್ಟ್ ನಿರ್ಮಿಸಿದ್ದರು. ಅಶೋಕ್ ಲಾಡ್ ಮರಣಾನಂತರ ಅವರ ಪತ್ನಿ ರಜನಿ ಲಾಡ್ ಹೆಸರಿಗೆ ರೆಸಾರ್ಟ್ ವರ್ಗಾವಣೆಯಾಗಿತ್ತು. ಅರಣ್ಯ ಪ್ರದೇಶದ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಐಷಾರಾಮಿ ರೆಸಾರ್ಟ್ ನಡೆಸಲಾಗುತ್ತಿತ್ತು. ಅರಣ್ಯ ಪ್ರದೇಶ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಿಸಿರುವುದರ ವಿರುದ್ಧ 2012ರ ಫೆಬ್ರವರಿಯಲ್ಲಿ ಬೆಂಗಳೂರಿನ ಆರ್ಟಿಐ ಕಾರ್ಯಕರ್ತ ಶ್ರೀನಿವಾಸ್ ಹೈಕೋರ್ಟ್ನಲ್ಲಿ ಪಿಐಎಲ್ ಹಾಕಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅರಣ್ಯ ಭೂಮಿ ಅತಿಕ್ರಮ ತೆರವುಗೊಳಿಸುವಂತೆ ಆದೇಶಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

