ಬಸವ ಪುತ್ಥಳಿ ಅನಾವರಣಕ್ಕೆ ಕಾನೂನು ಅಡ್ಡಿ: ನಾಯ್ಕ
ಹಗರಿಬೊಮ್ಮನಹಳ್ಳಿ: ಸುಪ್ರೀಂ ಕೋರ್ಟ್ ತೀರ್ಪು ಮುಚ್ಚಿಟ್ಟು, ಹಗರಿಬೊಮ್ಮನಹಳ್ಳಿಯಲ್ಲಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮಾಜಿ ಶಾಸಕ ನೇಮಿರಾಜ್ ನಾಯ್ಕ ಬಸವ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಇದುವೇ ಈಗ ಪುತ್ಥಳಿ ಅನಾವರಣಕ್ಕೆ ತೊಡಕಾಗಿದೆ ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದ್ದಾರೆ.
ಅವರು ಭಾನುವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ವೀರಶೈವ ಮತದ ಮೇಲೆ ಕಣ್ಣಿಟ್ಟು, ಸ್ಥಳಿಯಾಡಳಿತ ಹಾಗೂ ಜಿಲ್ಲಾಡಳಿತದಿಂದ ಪರವಾನಗಿ ಪಡೆದುಕೊಳ್ಳದೆ ಅವಸರವಾಗಿ ಪಟ್ಟಣದ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಮೇಲೆ ಬಸವಣ್ಣನವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೈಯಲ್ಲಿ ಅಡಿಗಲ್ಲು ಹಾಕಿಸಿದರು. ಆ ಸಮಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪರಿಪಾಲಿಸಿದ್ದರೆ, ಇವತ್ತು ಅನಾವರಣಕ್ಕೆ ಇಷ್ಟು ಅಡ್ಡಿಯಾಗುತ್ತಿರಲಿಲ್ಲ ಎಂದರು. ಯಾವುದೇ ಸಾರ್ವಜನಿಕ ಸ್ಥಳ, ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಸರ್ಕಲ್ ನಿರ್ಮಾಣ, ಗಣ್ಯರ ಪುತ್ಥಳಿ ಪ್ರತಿಷ್ಠಾಪಿಸುವ ಮುನ್ನ ಲೋಕೋಪಯೋಗಿ ಇಲಾಖೆ, ಸ್ಥಳೀಯಾಡಳಿತದಿಂದ ಪರವಾನಗಿ ಪಡೆದುಕೊಂಡು ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಜಿಲ್ಲಾಡಳಿತ ಅರ್ಜಿಯನ್ನು ಪರಿಶೀಲಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಕರೆದು ಆನಂತರ ಸರ್ಕಲ್ ನಿರ್ಮಾಣ, ಪುತ್ಥಳಿ ಪ್ರತಿಷ್ಠಾಪಿಸಬೇಕೇ, ಬೇಡವೇ ಎಂದು ಪರವಾನಗಿ ನೀಡಿದ ಮೇಲಷ್ಟೆ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಪ್ರತಿಷ್ಠಾಪಿಸಬೇಕೆಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಪುತ್ಥಳಿ ಪ್ರತಿಷ್ಠಾಪನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ 2012ರಲ್ಲಿಯೇ ಸ್ಪಷ್ಟ ತೀರ್ಪು ನೀಡಿದೆ ಎಂದರು.
ಸಚಿವರ ಗಮನಕ್ಕೆ: ನಾನು ಶಾಸಕನಾಗಿ ಆಯ್ಕೆಗೊಂಡ ಮೇಲೆ ಈ ವಿಚಾರವಾಗಿ ಜಿಲ್ಲಾಡಳಿತದ ಜೊತೆಗೆ ಚರ್ಚಿಸಿದೆ. ಆ ಮೇಲೆ ಕಾನೂನು ಸಚಿವರ ಬಳಿಯೂ ಮಾತನಾಡಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗುತ್ತಿದ್ದು, ಅದಷ್ಟು ಬೇಗ ಪಟ್ಟಣದಲ್ಲಿ ಬಸವಪುತ್ಥಳಿ ಅನಾವರಣಕ್ಕೆ ಜಿಲ್ಲಾಡಳಿತದಿಂದಲೇ ಪರವಾನಗಿ ಪಡೆದುಕೊಂಡು ಪುತ್ಥಳಿ ಅನಾವರಣ ಮಾಡಲಾಗುವುದೆಂದರು. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಸಿನಿಮಾ ಮಂಜಣ್ಣ, ಎಪಿಎಂಸಿ ಸದಸ್ಯ ಹೂಗಾರ ಮಲ್ಲಣ್ಣ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಡೇದ್ ಗುರುಬಸವರಾಜ, ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಆನಂದ್, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಕೆ.ಪಿ. ದೇವರಾಜ, ಮುಖಂಡರಾದ ಹಂಚಿನಮನಿ ಹನುಮಂತಪ್ಪ, ಸಂಪತ್ಕುಮಾರ, ಪ್ರಶಾಂತ್, ಅರಸಿಕೇರಿ ಹನುಮಂತಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

