ಸಂಭ್ರಮದ ಕುರುವತ್ತಿ ಬಸವೇಶ್ವರ ರಥೋತ್ಸವ
ಹೂವಿನಹಡಗಲಿ: ಹರ ಹರ ಮಹದೇವ ಎಂಬ ದೇವರ ನಾಮಸ್ಮರಣೆಯೊಂದಿಗೆ ನಾಡಿನ ಐತಿಹಾಸಿಕ ಪ್ರಸಿದ್ಧ ಶ್ರೀ ಕುರುವತ್ತಿ ಬಸವೇಶ್ವರ ರಥೋತ್ಸವ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಸಂಜೆ 4.30ಕ್ಕೆ ಬಸವೇಶ್ವರ ದೇವಸ್ಥಾನದಿಂದ ಬೆಳ್ಳಿ ಬಸವೇಶ್ವರ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ ಬಳಿಕ ರಥದಲ್ಲಿಟ್ಟು ಮಾಘ ನಕ್ಷತ್ರ ಘಳಿಗೆ ಕಾಲ ಕೂಡಿ ಬಂದಾಗ ರಥೋತ್ಸವ ಸಾಂಪ್ರದಾಯದ ಪೂಜೆ ಸಲ್ಲಿಸುವ ಮೂಲಕ ನೆರವೇರಿತು.
ಭಾರಿ ಗಾತ್ರದ ರುದ್ರಾಕ್ಷಿ ಮತ್ತು ವಿವಿಧ ಬಗೆಯ ಹೂ ಮಾಲೆಗಳೊಂದಿಗೆ ರಥವನ್ನು ಅಲಂಕಾರಗೊಳಿಸಲಾಗಿತ್ತು. ಸಮಾಳ, ನಂದಿಕೋಲು, ಹಲಗೆ, ಡೊಳ್ಳು ಸೇರಿದಂತೆ ವಿವಿಧ ಬಗೆಯ ವಾದ್ಯಗಳು ರಥೋತ್ಸವಕ್ಕೆ ಮೆರಗು ತಂದವು. ಸುಗ್ಗಿಯ ಕಾಲ ಮುಗಿದ ಬಳಿಕ ಬದುಕಿನಲ್ಲಿ ಬಿಡುವು ಮಾಡಿಕೊಂಡಾಗ ಆರಂಭವಾಗುವ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ರೈತರು, ಎಂಟು ಎತ್ತಿನ ಹಳಿ ಬಂಡಿ, ಸವಾರಿ ಕೋಲಿನ ಬಂಡಿಗಳಿಗೆ ಎತ್ತುಗಳನ್ನು ವಿವಿಧ ಬಗೆಯಲ್ಲಿ ಅಲಂಕಾರ ಮಾಡಿಕೊಂಡು ಬರುತ್ತಾರೆ. ಮಾ. 1ರಿಂದ 3 ದಿನ ನಡೆಯುವ ಜಾತ್ರೆಯಲ್ಲಿ ಭಕ್ತರು ವಿವಿಧ ಬಗೆಯ ಹರಕೆ ತೀರಿಸಿದರು.
ಹಾವೇರಿ, ರಾಣೆಬೆನ್ನೂರು, ಹುಬ್ಬಳ್ಳಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗದಗ, ಹೂವಿನಹಡಗಲಿ, ದಾವಣಗೆರೆ, ಹರಿಹರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸುಮಾರು 6 ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದು, ದೇವಸ್ಥಾನ ಮತ್ತು ರಥ ಬೀದಿಯಲ್ಲಿ ಭಕ್ತರ ದಂಡೇ ನೆರೆದಿತ್ತು. ಉತ್ತರ ಕರ್ನಾಟಕ ಭಕ್ತರನ್ನೇ ಹೆಚ್ಚು ಸೆಳೆದಿರುವ ಕುರುವತ್ತಿ ಬಸವೇಶ್ವರ ರಥೋತ್ಸವಕ್ಕೆ ಬಂದ ಭಕ್ತರೆಲ್ಲ ರಥಕ್ಕೆ ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ಜಾತ್ರೆ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ರಥೋತ್ಸವಕ್ಕೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಜಿಪಂ ಸದಸ್ಯ ವಸಂತ್, ತಾಪಂ ಇಒ ಡಾ. ರಂಗಪ್ಪ, ತಾಪಂ ಅಧ್ಯಕ್ಷೆ ಶಿಲ್ಪಾಸಿಂಗ್, ದೇವಸ್ಥಾನದ ಸಿಇಒ ಅರವಿಂದ ಸುತಗುಂಡಿ, ಪಿಡಿಒ ಸೋಮಶೇಖರ ಸಾಕ್ಷಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

