ಬಳ್ಳಾರಿ

ಜೆಸ್ಕಾಂ ಚೆಲ್ಲಾಟ: ನೀರಿಗಾಗಿ ನಾಗರಿಕರ ಪರದಾಟ

Published On :

ಕಡುಬೇಸಿಗೆ ಬರುವ ಮುನ್ನವೇ ಕೊಟ್ಟೂರಿನ ಜನರಿಗೆ ಕುಡಿವ ನೀರಿನ ಅಭಾವದ ಬಿಸಿ ಮುಟ್ಟಲಾರಂಭಿಸಿದೆ. ನೀರು ಲಭ್ಯವಿದ್ದರೂ ಜೆಸ್ಕಾಂ ಇಲಾಖೆಯ ಮಂಕುಬೂದಿ ಎರಚುವ ನೀತಿಯಿಂದಾಗಿ ನೀರು ಪಡೆಯಲು ಪಟ್ಟಣಿಗರು ಹರಸಾಹಸ ಪಡುವಂತಾಗಿದೆ.
ಶ್ರೀ ಗುರುಕೊಟ್ಟೂರೇಶ್ವರ ಜಾತ್ರಾ ಮಹೋತ್ಸವ ಸಮಯದಲ್ಲಿ ಮತ್ತು ಈಗಲೂ ಜೆಸ್ಕಾಂ ಕೊಟ್ಟೂರಿನ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ 24 ತಾಸು ವಿದ್ಯುತ್ ಸರಬರಾಜು ಮಾಡಿದ್ದ ಬಗ್ಗೆ ಲಾಗ್ ಬುಕ್‌ನಲ್ಲಿ ನಮೂದಿಸಿ ಕೂಡ್ಲಿಗಿ ತಾಲೂಕು ಆಡಳಿತ ಮತ್ತು ಕೊಟ್ಟೂರು ಸ್ಥಳೀಯ ಪಟ್ಟಣ ಪಂಚಾಯಿತಿಯನ್ನು ಯಾಮಾರಿಸಿದೆ. ಸತತ ವಿದ್ಯುತ್ ವ್ಯತ್ಯಯದಿಂದಾಗಿ ಕುಡಿಯುವ ನೀರಿನ ತೊಂದರೆ ಅಧಿಕವಾಗಿದೆ. ಆದರೂ ಯಾರೊಬ್ಬರೂ ಏನನ್ನೂ ಮಾಡದೆ ಮೌನವಹಿಸುವಂತಾಗಿದೆ.
ಹಿನ್ನೀರು ಪೂರೈಕೆ: ಕೊಟ್ಟೂರಿಗೆ ತುಂಗಭದ್ರಾ ನದಿ ಹಿನ್ನೀರಿನ ಸ್ಥಳವಾದ ಬನ್ನಿಗೋಳ ಜಾಕ್‌ವೆಲ್‌ನಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಈ ಜಾಕ್‌ವೆಲ್‌ಗೆ ನಿರಂತರ 18 ರಿಂದ 24 ತಾಸು ವಿದ್ಯುತ್ ಸರಬರಾಜು ಮಾಡಬೇಕು. ಆದರೆ ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ನಿತ್ಯ 5-6 ತಾಸು ವಿದ್ಯುತ್ ನಿಲುಗಡೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಪಪಂ ಮುಖ್ಯಾಧಿಕಾರಿ ಹನುಮಂತಮ್ಮನವರ.
ಪಟ್ಟಣ ಸದ್ಯ 35 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇಲ್ಲಿನ ಜನರ ಅಗತ್ಯಕ್ಕೆ ಅನುಗುಣವಾಗಿ ನೀರು ಸರಬರಾಜು ಮಾಡಲು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ 10 ಲಕ್ಷ ಮತ್ತು 5 ಲಕ್ಷ ಲೀಟರ್‌ಗಳ ಸಾಮರ್ಥ್ಯವುಳ್ಳ ಎರಡು ಓವರ್ ಹೆಡ್‌ಟ್ಯಾಂಕ್ ನಿರ್ಮಿಸಿ ಜನತೆಗೆ ನೀರು ಸರಬರಾಜು ಮಾಡುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ಓವರ್ ಹೆಡ್ ಟ್ಯಾಂಕ್‌ನಿಂದ ಪಟ್ಟಣದ ವಿವಿಧ ಪ್ರದೇಶಗಳಿಗೆ ನೀರು ಪೂರೈಸಲು ಕನಿಷ್ಠ ಮೂರುವರೆ ಮೀಟರ್ ನೀರು ಸಂಗ್ರಹಿಸಬೇಕು. ಆದರೆ 15 ದಿನಗಳಿಂದ ಒಂದೂವರೆ ಮತ್ತು 2 ಮೀಟರ್ ಒಳಗೆ ನೀರು ಸಂಗ್ರಹವಾಗುತ್ತಿದೆ. ಇದಕ್ಕೆ ಕಾರಣ ಸತತ ವಿದ್ಯುತ್ ನಿಲುಗಡೆ.
ಪತ್ರ ಬರೆಯುತ್ತೇವೆ: ಬನ್ನಿಗೋಳ ಜಾಕ್‌ವೆಲ್‌ಗೆ ನಿಗದಿತ ಪ್ರಮಾಣದ ವಿದ್ಯುತ್ ಸರಬರಾಜಾಗುತ್ತಿಲ್ಲ. ಜೆಸ್ಕಾಂ ಸರಬರಾಜು ಮಾಡಿರುವ ವಿದ್ಯುತ್ ಪ್ರಮಾಣವನ್ನು ಲಾಗ್ ಬುಕ್‌ನಲ್ಲಿ ನಮೂದಿಸಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮುಂದಿನ ಸೋಮವಾರ ಮತ್ತು ಮಂಗಳವಾರ ಪತ್ರ ಬರೆದು ಪರಿಸ್ಥಿತಿ ವಿವರಿಸುತ್ತೇವೆ ಎನ್ನುತ್ತಾರೆ ಸಹಾಯಕ ಎಂಜಿನಿಯರ್ ಪ್ರಕಾಶ್.
ಕುಡಿಯುವ ನೀರಿನ ತೊಂದರೆಯನ್ನು ಮನಗಂಡು ಕೂಡ್ಲಿಗಿ ತಾಲೂಕು ಆಡಳಿತ ಜೆಸ್ಕಾಂ ಹಿರಿಯ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡಿದರೂ ಜೆಸ್ಕಾಂ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸುವಂತೆ ಸೂಚಿಸಿದ್ದಾರೆ. ಆಗಲೂ ಜೆಸ್ಕಾಂ ಯಾಮಾರಿಸುವ ಕೆಲಸ ಮಾಡಿದೆ.
ಬನ್ನಿಗೋಳ ಜಾಕ್‌ವೆಲ್‌ಗೆ 24 ತಾಸು ವಿದ್ಯುತ್ ನೀಡಿದ್ದೇವೆ. ಈ ಸಂಬಂಧ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಅಧಿಕಾರಿ ಸಂಪರ್ಕಿಸಿ ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುವೆ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು ಜೆಸ್ಕಾಂ ಹೊಸಪೇಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಗದೀಶ.

-------

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.