ರೇಲ್ವೆ ಇಲಾಖೆಗೆ ರು. 1500 ಕೋಟಿ ಲಾಭ: ಖರ್ಗೆ
ಕೊಟ್ಟೂರು: ರೇಲ್ವೆ ಇಲಾಖೆ ಪ್ರಸ್ತುತ ಸಾಲಿನಲ್ಲಿ ರು. 1500 ಕೋಟಿ ಲಾಭಗಳಿಸಿದೆ. ಕಳೆದ ವರ್ಷ ರು. 350 ಕೋಟಿ ನಷ್ಟದಲ್ಲಿತ್ತು. ಈ ತೆರನಾದ ನಷ್ಟವನ್ನು ತುಂಬಿ ಲಾಭತಂದುಕೊಡುವ ಮಹತ್ವದ ಸಾಧನೆ ಮಾಡಲಾಗಿದೆ. ಈ ವರ್ಷ ರು. 7000 ಕೋಟಿ ಗುರಿಯನ್ನಾಗಿರಿಸಿಕೊಂಡು ರೇಲ್ವೆಯನ್ನು ಲಾಭದಾಯಕ ಖಾತೆಯನ್ನಾಗಿಸುವತ್ತ ಮುನ್ನೆಡೆದಿದ್ದೇವೆ ಎಂದು ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೊಟ್ಟೂರಿನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದು ರೇಲ್ವೆ ಇಲಾಖೆ ಧ್ಯೇಯವಾಗಿದೆ. ಪ್ರಯಾಣಿಕರ ಮೇಲೆ ಯಾವುದೇ ಬಗೆಯ ಅತಿಯಾದ ಭಾರ ಬೀಳಬಾರದೆಂಬ ಕಾರಣಕ್ಕಾಗಿ ಪ್ರಯಾಣ ದರ ಹೆಚ್ಚಿಸದೇ ಅತ್ಯುತ್ತಮ ಸೇವೆ ಕಲ್ಪಿಸಿಕೊಡುತ್ತಿದ್ದೇವೆ. ಈ ಸಲದ ರೇಲ್ವೆ ಬಜೆಟ್ಗೆ ರಾಷ್ಟ್ರದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಸ್ವಪಕ್ಷದವರಲ್ಲದೇ ವಿರೋಧ ಪಕ್ಷದವರು, ವಿವಿಧ ವಲಯಗಳು ಮತ್ತು ಮಾಧ್ಯಮ ರಂಗದಲ್ಲೂ ತಾವು ಮಂಡಿಸಿದ ಬಜೆಟ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದು ಇಲಾಖೆ ಮತ್ತಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಹುಮ್ಮಸ್ಸು ತಂದಿದೆ ಎಂದರು.
ರೇಲ್ವೆ ಇಲಾಖೆಯಲ್ಲಿ ಸದಾ ಶಿಸ್ತನ್ನು ಅದರಲ್ಲೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನತ್ತ ಹಲವು ಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಚಿಕ್ಕಮಗಳೂರು-ಕಡೂರು, ಚಿಕ್ಕಮಗಳೂರು-ಸಕಲೇಶಪುರ ಮಾರ್ಗಗಳ ರಚನೆಗೆ ವಿವಿಧ ಬಗೆಯ ಅನುದಾನ ತೆಗೆದಿರಿಸುವ ಮೂಲಕ ನೂತನ ಮಾರ್ಗಗಳ ರಚನೆಗೆ ಒತ್ತು ನೀಡಲಾಗಿದೆ ಎಂದರು. ಹುಬ್ಬಳ್ಳಿ-ಬೆಳಗಾವಿ ನೂತನ ರೈಲು ಮಾರ್ಗ ರಚನೆಗೆ ಸರ್ವೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯ ಮುಗಿದ ತಕ್ಷಣವೇ ಅನುದಾನ ಬಳಕೆ ಮಾಡಲು ತ್ವರಿತ ಕ್ರಮಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಈ ಹಿಂದೆ 2100 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ರೇಲ್ವೆ ಯೋಜನೆ ಜಾರಿಯಲ್ಲಿತ್ತು. ಇದೀಗ ಇದರ ಪ್ರಮಾಣ 4800 ಕಿ.ಮೀ.ಗೆ ವಿಸ್ತರಿಸಿದೆ. ರಾಜ್ಯದಮಟ್ಟಿಗೆ ಇದೊಂದು ಸಾಧನೆಯ ವಿಷಯ. ರು. 23 ಸಾವಿರ ಕೋಟಿ ವೆಚ್ಚದಲ್ಲಿಯೇ ರಾಜ್ಯದ ಎರಡು ಪ್ರದೇಶಗಳಲ್ಲಿ ಬೋಗಿಗಳ ನಿರ್ಮಾಣದ ಕಾರ್ಖಾನೆಗಳನ್ನು ತಯಾರಿಸಲು ಮುಂದಾಗಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಿರಾಕರಣೆ: ಬೆಂಗಳೂರಿನಲ್ಲಿ ಭಾನುವಾರ ನಡೆದ ಚಲುವಾದಿ ಸಮಾವೇಶದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರೇಲ್ವೆ ಸಾಧನೆ ಹೊರತುಪಡಿಸಿ ರಾಜಕೀಯದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು. ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ, ಶಾಮನೂರು ಶಿವಶಂಕ್ರಪ್ಪ ಖರ್ಗೆ ಅವರೊಂದಿಗೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

