ತೆರಿಗೆ ನಿರ್ಧರಣಾ ಪಟ್ಟಿಗೆ ಅಕ್ರಮ ಕಟ್ಟಡ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 4
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಕೃಷಿ ಭೂಮಿ, ಕಂದಾಯ ಭೂಮಿಯಲ್ಲಿನ ಕಟ್ಟಡಗಳು ಗ್ರಾಮ ಪಂಚಾಯಿತಿ ತೆರಿಗೆ ನಿರ್ಧರಣಾ ಪಟ್ಟಿಗೆ ಇದುವರೆಗೆ ಬರುತ್ತಿರಲಿಲ್ಲ. ಆದರೆ, ಇದೀಗ ಅಂತಹ ಕಟ್ಟಡಗಳನ್ನು ಗ್ರಾಪಂ ತೆರಿಗೆ ನಿರ್ಧಾರ ಪಟ್ಟಿಗೆ ತರುವ ಮೂಲಕ ಗ್ರಾಪಂ ಅಭಿವೃದ್ಧಿಗೆ ಹಾಗೂ ಆದಾಯ ಮೂಲ ಹೆಚ್ಚಿಸುವುದಕ್ಕೆ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳ ಮೂಲಕ ರಾಜ್ಯದ ಎಲ್ಲಾ ತಾಪಂಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಗ್ರಾಪಂ ಮಟ್ಟದಲ್ಲಿ, ಗ್ರಾಮಗಳಲ್ಲಿ ಇದೀಗ ಅದೆಷ್ಟು ಮನೆಗಳನ್ನು ಕಂದಾಯ ಭೂಮಿಯಲ್ಲಿ, ಕೃಷಿ ಭೂಮಿಯಲ್ಲಿ ಕಟ್ಟಿರುವುದರಿಂದ, ಸರ್ಕಾರ ತೆರಿಗೆ ನಿರ್ಧಾರ ಪಟ್ಟಿಯಲ್ಲಿ ಈ ಕಟ್ಟಡಗಳು, ನಿವೇಶನಗಳು ಗ್ರಾಪಂ ವ್ಯಾಪ್ತಿಯ ತೆರಿಗೆ ಪಟ್ಟಿಯಲ್ಲಿ ಸೇರುವುದಕ್ಕೆ ಬರುತ್ತಿರಲಿಲ್ಲ. ಇದಕ್ಕೆ ಕಾರಣ ಕಂದಾಯ ಭೂಮಿ ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸರ್ಕಾರದ ಆದೇಶ ಇತ್ತು. ಹೀಗಾಗಿ ಇಂತಹ ಭೂಮಿಗಳಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳು ಗ್ರಾಪಂ ತೆರಿಗೆ ಪಟ್ಟಿಯಿಂದ ಹೊರ ಇರುತ್ತಿದ್ದವು. ಇದು ಗ್ರಾಪಂ ಅಭಿವೃದ್ಧಿ ವಿಷಯದಲ್ಲಿ ಹಿನ್ನಡೆಯಾಗುವುದರೊಂದಿಗೆ, ಗ್ರಾಪಂಗಳ ಆದಾಯದ ಮೂಲಕ್ಕೆ ಧಕ್ಕೆಯಾಗುತ್ತಿತ್ತು.
ಸರಿಯಾಗಿ ಅನುಷ್ಠಾನಗೊಳ್ಳದ ಇ-ಸ್ವತ್ತು
ಇಂತಹ ವ್ಯವಸ್ಥೆ ತಪ್ಪಿಸಲು ಗ್ರಾಪಂ ಮಟ್ಟದ ಇ ಸ್ವತ್ತು ಅಸ್ತಿತ್ವಕ್ಕೆ ಬಂದಿತ್ತು. ಆದರೆ ಇ ಸ್ವತ್ತಿನ ಅಡಿ ಗ್ರಾಪಂನಲ್ಲಿ ಆಸ್ತಿ ನೋಂದಣಿಯಾಗಬೇಕೆಂದರೆ ಆಸ್ತಿಗೆ ಸಂಬಂಧಿಸಿದಂತೆ ಮೊಟೇಷನ್ ಹಾಗೂ ನೋಂದಣಿಯಾಗಿರಬೇಕಾಗುತ್ತದೆ. ಆದರೆ ಗ್ರಾಮೀಣ ಮಟ್ಟದಲ್ಲಿ ಇಂತಹ ಮೊಟೇಷನ್ ಆಗಿರದ, ನೋಂದಣಿಯಾಗಿರದ ಪೂರ್ವಿಕರ ಸಾಕಷ್ಟು ಆಸ್ತಿಗಳು ಇರುವ ಹಿನ್ನೆಲೆಯಲ್ಲಿ ಇ ಸ್ವತ್ತಿನ ಸರ್ಕಾರದ ಕಲ್ಪನೆ ಅಷ್ಟಾಗಿ ಸಕಾರಗೊಂಡಿಲ್ಲ. ಹಲವು ಕಟ್ಟಡ ಹಾಗೂ ಸ್ವತ್ತುಗಳು ಇ ಸ್ವತ್ತಿಗೆ ಸೇರ್ಪಡೆಯಾಗದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ತೆರಿಗೆ ನಿರ್ಧಾರ ಪಟ್ಟಿಯಲ್ಲಿ ಗ್ರಾಮಾಂತರದ ಕಂದಾಯ ಭೂಮಿಯಲ್ಲಿ ಕಟ್ಟಿರುವ ಕಟ್ಟಡಗಳನ್ನು ಸೇರ್ಪಡೆ ಮಾಡಲು ಹೊಸ ನಿರ್ಧಾರ ತೆಗೆದುಕೊಂಡಿದೆ.ಸ್ವತ್ತುಗಳ ಪಟ್ಟಿಯಲ್ಲಿ ಸೇರಿಸಲು ಸುತ್ತೋಲೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಪಂ ವ್ಯಾಪ್ತಿಯಲ್ಲಿನ ಕ್ರಮಬದ್ಧವಲ್ಲದ ಆಸ್ತಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನಮೂನೆ 11ಬಿ (ತೆರಿಗೆ ನಿರ್ಧರಣಾ ಪಟ್ಟಿ) ನಿರ್ವಹಿಸಲು ಹಾಗೂ ಕ್ರಮಬದ್ಧ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾಪಂಗಳು ಈ ಹಿಂದೆ ವಿತರಿಸುತ್ತಿದ್ದ ನಮೂನೆ 11ಕ್ಕೆ ಬದಲಾಗಿ 11ಎ ಎಂದು ನಮೂನೆಯನ್ನು ಪ್ರತಿಷ್ಠಾಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್ ರಾಜ್(ಗ್ರಾಪಂಗಳ ಅಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯಂತೆ ಕ್ರಮವಹಿಸಬೇಕು ಎಂದು ಸುತ್ತೂಲೆಯನ್ನೂ ಸರ್ಕಾರ ಹೊರಡಿಸಿದ್ದಾರೆ. ತೆರಿಗೆ ವ್ಯಾಪ್ತಿಗೆ ಗ್ರಾಮಾಂತರ ಪ್ರದೇಶದಲ್ಲಿ ಕಂದಾಯ ಭೂಮಿ, ಕೃಷಿ ಭೂಮಿಯಲ್ಲಿರುವ ಸ್ವತ್ತುಗಳು ಒಳಪಡುವುದರಿಂದ ಗ್ರಾಪಂಗಳಿಗೆ ಅಲ್ಲಿನ ಅಭಿವೃದ್ಧಿಗೆ ಸಹಕಾರವಾಗುವುದರೊಂದಿಗೆ, ಗ್ರಾಪಂಗಳಿಗೆ ತೆರಿಗೆ ರೂಪದಲ್ಲಿ ಹಣ ಬರಲು ಕಾರಣವಾಗುತ್ತದೆ.
ಕರ್ನಾಟಕ ಪಂಚಾಯತ್ ರಾಜ್ ನಿಯಮಕ್ಕೆ ತಿದ್ದುಪಡಿ
ಸರ್ಕಾರ ಕರ್ನಾಟಕ ಪಂಚಾಯತ್ ರಾಜ್ (ಗ್ರಾಪಂಗಳ ಅಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಿಯಮ 30ರಲ್ಲಿ ನಮೂನೆ 11 ಬದಲಾಗಿ, 11ಎ ಎಂಬುದನ್ನು ತೋರಿಸಬೇಕು. ಇನ್ನು ಸರ್ಕಾರಿ ಜಮೀನಿನಲ್ಲಿ, ಸ್ಥಳೀಯ ಸ್ವತ್ತಿನಲ್ಲಿ, ಸರ್ಕಾರಿ ಸ್ವಾಮ್ಯದ ಶಾಸನಬದ್ಧ ನಿಕಾಯ ಅಥವಾ ಸಂಸ್ಥೆಗಳ ಸ್ವತ್ತಿನಲ್ಲಿ ಹೊರತುಪಡಿಸಿ, ಇನ್ನುಳಿದ ಖಾಲಿ ಜಮೀನುಗಳು, ಕಟ್ಟಡಗಳು, ಕಟ್ಟಡಗಳ ಮತ್ತು ಸ್ಥಳವನ್ನು ಒಳಗೊಂಡಂತೆ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿತವಾಗಿರುವ ಕಟ್ಟಡಗಳಿಗೆ ಅಥವಾ ಅನಧಿಕೃತ ಬಡಾವಣೆಗಳು ಪೂರ್ಣಗೊಂಡಿರುವ ಬಗ್ಗೆ ದಾಖಲೆಗಳಿಲ್ಲದೆ ಅನುಭವಿಸುತ್ತಿರುವ ಕಟ್ಟಡಗಳ ಮೇಲಿನ ತೆರಿಗೆ ನಿರ್ಧರಿಸಲು ಪ್ರತ್ಯೇಕ ನಿಗದಿತ ನಮೂನೆ 11ಬಿ ಅನ್ನು ಗ್ರಾಪಂಗಳು ನಿರ್ವಹಿಸತಕ್ಕದ್ದು ಎಂದು ತಿದ್ದುಪಡಿಯ ನಿಯಮದಲ್ಲಿ ಹೇಳಲಾಗಿದೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

