ಬಳ್ಳಾರಿ

ಶಾಸಕರಿಂದ ಆಸ್ಪತ್ರೆ ದಿಢೀರ್ ಪರಿಶೀಲನೆ

Published On :

ಹಗರಿಬೊಮ್ಮನಹಳ್ಳಿ: ಶಸ್ತ್ರಚಿಕಿತ್ಸಾ ಹೆರಿಗೆಗೆ (ಸಿಜೆರಿಯನ್) ಬಂದವರನ್ನು ದೂರದ ದಾವಣಗೆರೆ, ಹೊಸಪೇಟೆಗೆ ಸಾಗಹಾಕುವ ವಿಚಾರವಾಗಿ ಸೋಮವಾರ ರಾತ್ರಿ ಶಾಸಕ ಎಸ್. ಭೀಮಾನಾಯ್ಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಕಾಶ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು
ಅವರು ಸರ್ಕಾರಿ ಆಸ್ಪತ್ರೆಗೆ ರಾತ್ರಿ ದಿಢೀರ್ ಭೇಟಿ ನೀಡಿ ಅಲ್ಲಿನ ಗರ್ಭಿಣಿಯರ ಆರೋಗ್ಯ ವಿಚಾರಿಸಿದರು. ಆಗ ಸಾರ್ವಜನಿಕರ ದೂರು ಆಲಿಸಿದ ಭೀಮಾನಾಯ್ಕ ವೈದ್ಯರನ್ನು ತರಾಟೆಗೆ ತೆಗೆದುಕೊಂಡು, ಹಳ್ಳಿಗಾಡಿನ ಗರ್ಭಿಣಿಯರ ಸುಸೂತ್ರ ಹೆರಿಗೆಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ನೀವು ಮಾತ್ರ ಶಸ್ತ್ರಚಿಕಿತ್ಸೆ ಅಗತ್ಯವಿರುವ ಪ್ರಕರಣಗಳನ್ನು ಹೊರ ಕಳುಹಿಸಿ ಗ್ರಾಮೀಣ ಜನರಿಗೆ ಹೆರಿಗೆ ಭಾರವಾಗುವಂತೆ ಮಾಡುತ್ತಿದ್ದೀರಿ, ಇಂತಹ ಪದ್ಧತಿ ಕೈ ಬಿಡಬೇಕು, ಇಲ್ಲದಿದ್ದರೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಲ್ಲಿ ತಜ್ಞ ವೈದ್ಯರಿಲ್ಲ, ಒಂದು ವೇಳೆ ನಾವು ರಿಸ್ಕ್ ತೆಗೆದುಕೊಂಡು ಹೆರಿಗೆ ಮಾಡಿಸುವ ಸಮಯದಲ್ಲಿ ಏನಾದರೂ ಪ್ರಾಣಾಪಾಯವಾದರೆ ಜನರು ಪ್ರತಿಭಟನೆ ಮಾಡುತ್ತಾರೆ. ಅದಕ್ಕಾಗಿ ರಿಸ್ಕ್ ನಮಗ್ಯಾಕೆ ಎಂದು ಹೊರಗೆ ಕಳುಹಿಸುತ್ತೇವೆ ಎಂದು ವೈದ್ಯಾಧಿಕಾರಿ ಪ್ರಕಾಶ ರೆಡ್ಡಿ ತಿಳಿಸಿದಾಗ, ಜನ ಪ್ರತಿಭಟನೆ ಮಾಡ್ತಾರೆ ಅಂತಾ ಆಸ್ಪತ್ರೆ ಮುಚ್ಚಿ ಬಿಡಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಸಿಜರಿನ್ ಆಗುತ್ತಿಲ್ಲ ಎಂದರೆ ರಕ್ತ ಇತರ ಸಾಮಗ್ರಿಗಳಿಗೆ ನೀಡಿದ ಅನುದಾನ ಎಲ್ಲಿಗೆ ಹೋಯ್ತು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಟಿಎಚ್‌ಒ ಚೇಂಬರ್ ನೀಡ್ತಿಲ್ಲ: ನಾನು ತಾಲೂಕು ವೈದ್ಯಾಧಿಕಾರಿಯಾಗಿ ಇಲ್ಲಿಗೆ ಬಂದು ಏಳೆಂಟು ತಿಂಗಳಾದರೂ ಮುಖ್ಯ ವೈದ್ಯಾಧಿಕಾರಿಗಳು ಚೇಂಬರ್ ನೀಡಿಲ್ಲ. ತಾಲೂಕು ವೈದ್ಯಾಧಿಕಾರಿಗಳ ಕಚೇರಿಗೆ ಸಂಬಂಧಿಸಿದ ಯಾವುದೆ ಪೀಠೋಪಕರಣಗಳನ್ನು ನೀಡುತ್ತಿಲ್ಲ. ಇದರಿಂದಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ, ಸುಗಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಸುಲೋಚನಾ ಅವರು ತಮ್ಮ ಅಸಹಾಯಕತೆಯನ್ನು ಶಾಸಕರ ಎದುರು ಹೇಳಿಕೊಂಡರು.
ಪ್ರಭಾರಿ ತಾಲೂಕು ವೈದ್ಯಾಧಿಕಾರಿಯಾಗಿದ್ದ ವೇಳೆ ಉಪಯೋಗಿಸುತ್ತಿದ್ದ ಕಚೇರಿ ಹಾಗೂ ಆ ಕಚೇರಿಯಲ್ಲಿನ ಪೀಠೋಪಕರಣಗಳನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ನೀಡಿ ಎಂದು ಶಾಸಕರು ಸೂಚಿಸಿದರು. ತಾಲೂಕಿನ ಆರೋಗ್ಯ ಇಲಾಖೆ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಬೇಕಿದ್ದು, ಮಾ. 5ರಂದು ಎಲ್ಲ ವೈದ್ಯಾಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ, ಆ ಸಭೆಗೆ ಎಲ್ಲರನ್ನು ಆಹ್ವಾನಿಸಬೇಕೆಂದು ಸೂಚಿಸಿದರು.
ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಚಿಂತ್ರಪಳ್ಳಿ ದೇವೇಂದ್ರಪ್ಪ, ಎಚ್.ಎಂ. ಚೋಳರಾಜ, ಹನುಮನಹಳ್ಳಿ ಗಾಳೆಪ್ಪ, ಎಂಜೇಪ್ಪ, ಜಿಲ್ಲಾ ವೈದ್ಯಾಧಿಕಾರಿ ಮಾಧವರಾವ್ ಪಾಟೀಲ್ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.