ಬಳ್ಳಾರಿ

ಹಣ, ಅಧಿಕಾರ ದುರುಪಯೋಗ ನನ್ನ ಸೋಲಿಗೆ ಕಾರಣ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 9
ಹಣ ಮತ್ತು ಅಧಿಕಾರದ ದುರುಪಯೋಗವೆ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸೋಲಿಗೆ ಕಾರಣವಾಗಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಹೇಳಿದರು.
ಅವರು ಭಾನುವಾರ ಲೋಕಸಭಾ ಚುನಾವಣೆ ನಿಮಿತ್ತ ನಗರದ ಮುನ್ಸಿಪಲ್ ಸೆಂಟ್ರನರಿ ಹಾಲ್ನಲ್ಲಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು,
ಮೋದಿ ಅಲೆ ಇಲ್ಲ: ಅಂದು ಅವರು ಅಧಿಕಾರಿಗಳು, ಹಣ ಬಳಸಿಕೊಂಡು ಗೆದ್ದಿದ್ದಾರೆ. ಇಂದು ನಾವೆಲ್ಲ ಒಟ್ಟಾಗಿ ಚುನಾವಣೆ ಎದುರಿಸುವ ಮೂಲಕ ಕಾಂಗ್ರೆಸ್ ಗೆಲವಿಗೆ ಶ್ರಮಿಸಬೇಕು. ಕೈ ಮತ್ತು ಬಾಯಿ ಶುದ್ಧ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ ಪರ ದೊಡ್ಡ ಅಲೆ ಇದೆ ಎಂದು ಹೇಳುತ್ತಿದ್ದಾರೆ, ರಾಜ್ಯದಲ್ಲಿ ಅವರ ಅಲೆ ಇಲ್ಲವಾಗಿದೆ. ಈ ಮೊದಲು ಕೇವಲ ದುರ್ಯೋಧನನಂತೆ ಮೋದಿ ಭಾಷಣ ಮಾಡುತ್ತಿದ್ದು, ಇದೀಗ ಮಾತು ಕಡಿಮೆಯಾಗಿದೆ. ಇಂತವರಿಂದ ದೇಶಕ್ಕೆ ಏನೂ ಆಗುವುದಿಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದು 9 ತಿಂಗಳು ಕಳೆದಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೇವೆ. ಸಿಎಂ ಆದ ಕೆಲ ಗಂಟೆಗಳಲ್ಲಿ ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿನ ಭರವಸೆಯಂತೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಕೇಂದ್ರ ಯುಪಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಯೋಜನೆ ಜಾರಿಗೆ ತಂದಿದೆ ಎಂದು ಕಾಂಗ್ರೆಸ್ನ ಸಾಧನೆಗಳನ್ನು ವಿವರಿಸಿದರು.
ಅಭಿವೃದ್ಧಿ ಅಜೆಂಡಾ ಇಲ್ಲ: ಬಿಜೆಪಿಯಲ್ಲಿ ರೈತರ ಅಭಿವೃದ್ಧಿ, ದೇಶದ ಸಮಗ್ರ ಅಭಿವೃದ್ಧಿ ಅಜೆಂಡಾ ಎಂಬುದೇ ಇಲ್ಲ, ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡಬೇಕೆಂಬ ಅಜೆಂಡಾ ಮಾತ್ರ ಇದೆ. ಅದನ್ನು ಯಾರೂ ಒಪ್ಪುವುದಿಲ್ಲ, ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಮರುಸ್ಥಾಪಿಸುವುದೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಳೆದ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ತಿಳಿಸಿದರು.  
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಲಾಡ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಜಿಲ್ಲಾ ನಗರ ಅಧ್ಯಕ್ಷ ಜೆ.ಎಸ್. ಆಂಜನೇಯಲು, ನಜೀರ್ಸಾಬ್, ವಿ.ಎನ್. ಗಿರಿಮಲ್ಲಪ್ಪ, ರಾಂಪ್ರಸಾದ್, ಎಚ್. ಅರ್ಜುನ,  ಅರುಣ್ಕುಮಾರ್, ವಿ.ಕೆ. ಬಸಪ್ಪ, ನಂದಿಹಳ್ಳಿ ಹಾಲಪ್ಪ, ಸದಾಶಿವಪ್ಪ, ಮಹೇಶ್ವರ ಸ್ವಾಮಿ, ಗೋನಾಳ್ ವಿರೂಪಾಕ್ಷಗೌಡ, ಕಲ್ಲುಕಂಬ ಪಂಪಾಪತಿ, ಹೊನ್ನೂರಪ್ಪ, ಕುಮಾರಸ್ವಾಮಿ ಇದ್ದರು.

ಮಂತ್ರಿಗಿರಿ ಸಿಗಲಿಲ್ಲ ಎಂಬ ನೋವಿದೆ: ಲಾಡ್
ಬಳ್ಳಾರಿ: ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ದುಃಖ ನನಗೂ ಇದೆ, ಆದರೆ ನನಗೆ ಸಚಿವ ಸ್ಥಾನ ಪಡೆಯುವ ಯೋಗವಿಲ್ಲ ಎಂದು ಸುಮ್ಮನಿದ್ದೇನೆ ಎಂದು ಬಳ್ಳಾರಿ ಶಾಸಕ ಅನಿಲ್ ಲಾಡ್ ಹೇಳಿದರು.
ಸಮಾವೇಶದಲ್ಲಿ ಮುಖಂಡರ ಬಗ್ಗೆ ಕಾರ್ಯಕರ್ತರ ಅಸಮಾಧಾನದ ಕುರಿತು ಮಾತನಾಡಿದ ಅವರು, ಎಲ್ಲರಿಗೂ ಅಸಮಾಧಾನ ಇರುತ್ತದೆ. ಅದರಂತೆ ನನಗೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ನೋವು ಇದೆ ಎಂದರು. ಏನು ಮಾಡುತ್ತೀರಿ ಎಂದು ಕಾರ್ಯಕರ್ತರು ಕೇಳುವುದು ತಪ್ಪು, ಕಾರ್ಯಕರ್ತರು ಸಮಸ್ಯೆ ಇದ್ದರೆ ಬಂದು ಕೇಳಬೇಕು, ಅವರ ಸಮಸ್ಯೆ ಗೊತ್ತಾಗಿ, ಪರಿಹಾರಕ್ಕೆ ಮುಂದಾಗುತ್ತೇವೆ. ಎಲ್ಲರಿಗೂ ನಾಮನಿರ್ದೇಶಿತ ಸದಸ್ಯರಾಗಬೇಕೆಂದರೆ ಹೇಗೆ ಸಾಧ್ಯ? ಅಲ್ಲದೆ ಮುಖಂಡರು ತಮ್ಮದೇಯಾದ ಹಿಂಬಾಲಕ ಪಡೆ ಹೊಂದಿರುತ್ತಾರೆ. ಅವರಿಗೆ ಆದ್ಯತೆ ಕೊಡುತ್ತಾರೆ. ಪಕ್ಷದ ಕಾರ್ಯಕರ್ತರು ಇನ್ನೊಬ್ಬರ ಮಾತು ಕೇಳಿ ಮಾತನಾಡುವುದಕ್ಕಿಂತ ಸ್ವತಃ ಯೋಚಿಸಿ ಮಾತನಾಡಬೇಕು ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ದೊಡ್ಡ ಪಕ್ಷದಲ್ಲಿ ಸಮಸ್ಯೆ ಇದ್ದೆ ಇರುತ್ತವೆ. ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಸಭೆಗಳನ್ನು ನಡೆಸಲಾಗುತ್ತದೆ. ಇದು ಜಗಳವಲ್ಲ, ಕಾರ್ಯಕರ್ತರು ಮುನಿಸು ಮಾತ್ರ, ಇದನ್ನು ಮಾಧ್ಯಮಗಳು ಅನ್ಯತಾ ಭಾವಿಸಬಾರದು ಎಂದರು. ಸಭೆಯಲ್ಲಿ ಮಾಜಿ ಸಚಿವ ದಿವಾಕರಬಾಬು, ಕೆ.ಸಿ. ಕೊಂಡಯ್ಯನವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಕುರಿತು ಸಚಿವ ಪರಮೇಶ್ವರ ನಾಯ್ಕರನ್ನು ಪ್ರಶ್ನಿಸಿದರೆ, ಅನ್ಯ ಕಾರ್ಯದ ನಿಮಿತ್ತ ಅವರು ಸಭೆಗೆ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.