ಬಳ್ಳಾರಿ

ಧಾರ್ಮಿಕ ಪ್ರಜ್ಞೆ ಕೊರತೆ: ಮಾನವೀಯ ಮೌಲ್ಯ ಕುಸಿತ

Published On :

ಹಗರಿಬೊಮ್ಮನಹಳ್ಳಿ: ಧಾರ್ಮಿಕ ಪ್ರಜ್ಞೆ ಹಾಗೂ ಮನೋಭಾವನೆ ಕೊರತೆಯಿಂದಾಗಿ ಇವತ್ತು ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಜತೆಗೆ ಕೌಟುಂಬಿಕ ಕಲಹಗಳು ಹೆಚ್ಚಾಗಿ ಕುಟುಂಬ ವ್ಯವಸ್ಥೆಯೇ ಆಧೋಗತಿಯತ್ತ ಮುಖ ಮಾಡಿದೆ ಎಂದು ಹೊಸಪೇಟೆ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ವಿಷಾದ ವ್ಯಕ್ತಪಡಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿನ ಶ್ರೀರೇಣುಕಾ ಕಾಲೇಜು ಕ್ಯಾಂಪಸ್‌ನಲ್ಲಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕಗಳು ಹಾಗೂ ಶ್ರೀರೇಣುಕಾ ವಿದ್ಯಾಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯರ ಪ್ರಥಮ ಜಯಂತ್ಯುತ್ಸವ ಹಾಗೂ ಧರ್ಮಸಭೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಧಾರ್ಮಿಕ ಪ್ರಜ್ಞೆ ಇಲ್ಲದಿರುವುದರಿಂದಾಗಿ ಇವತ್ತು ಹಸೆಮಣೆ ಏರಿದ ಕೆಲವೆ ಗಂಟೆಗಳಲ್ಲಿಯೇ ನೂತನ ಸತಿ-ಪತಿಗಳ ವೈವಾಹಿಕ ಜೀವನ ಕೋರ್ಟ್ ಮೆಟ್ಟೀಲೇರುವಂಥ ಅಪರಾಧ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಗೆಳೆತನ, ಕುಟುಂಬ ಸಂಬಂಧಗಳು ಇವತ್ತು ಅರ್ಥ ಕಳೆದುಕೊಳ್ಳುತ್ತಿವೆ. ಇದಕ್ಕೆಲ್ಲ ನಮ್ಮಲ್ಲಿನ ಧಾರ್ಮಿಕ ಮನೋಭಾವ ಕೊರತೆಯೇ ಮೂಲ ಕಾರಣ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ನೀತಿ ಸಂಹಿತೆಯ ಬಿಸಿ ರೇಣುಕಾ ಜಯಂತಿಗೂ ಚೆನ್ನಾಗಿ ತಾಕಿತು. ನೀತಿಸಂಹಿತೆ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೇಣುಕಾ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಕೆಪಿಸಿಸಿ ಸದಸ್ಯ ಕೊಗಳಿ ಸಿದ್ದಲಿಂಗನಗೌಡ, ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಆರ್. ರಾಮನಗೌಡ, ಸಮಾಜದ ಹಿರಿಯ ಮುಖಂಡರಾದ ಎಚ್.ಎಂ. ವೀರಭದ್ರಯ್ಯ, ಕೆ. ಶಂಕರಗೌಡ, ಉಪ್ಪಿನತಾರನಾಥ, ಪಂಚಾಯ್ತಿ ಸದಸ್ಯರಾದ ಎಂಪಿಎಂ ಚನ್ನಮ್ಮ ಇತರ ಮುಖಂಡರು ಇದ್ದರು.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಮರಿಯಮ್ಮನಹಳ್ಳಿಯ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶ್ರೀ, ಹನಸಿ ಶಂಕರಲಿಂಗಸ್ವಾಮಿ, ಹಳೇಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠದ ಹಾಲಶಂಕರ ಶ್ರೀ, ಕೂಡ್ಲಿಗಿ ಹಿರೆಮಠದ ಪ್ರಶಾಂತಸಾಗರ ಶಿವಾಚಾರ್ಯ, ಹಂಪಾಸಾಗರ ಮಹಾದೇವತಾತ ಉಘಮಠದ ಸಿದ್ಧಲಿಂಗಸ್ವಾಮೀಜಿ, ವಲ್ಲಭಾಪುರ ಸುಭಾಶಚಂದ್ರಶಾಸ್ತ್ರಿಗಳು ಭಾಗವಹಿಸಿದ್ದರು.
ಉಪನ್ಯಾಸಕ ಜಿ.ಎಂ. ಚಂದ್ರಶೇಖರಯ್ಯ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಎಂಪಿಎಂ ಮಂಜುನಾಥ ಸ್ವಾಗತಿಸಿದರು. ರೇಣುಕಾ ಕಾಲೇಜಿನ ಪ್ರಾಂಶುಪಾಲರಾದ ಇಂದುಮತಿ ತಿಪ್ಪೇಸ್ವಾಮಿ ನಿರೂಪಿಸಿದರು. ಎಸ್.ಎಸ್. ಹಿರೇಮಠ, ಸಂಗಡಿಗರು ವಚನ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.