ಬಳ್ಳಾರಿ

ಬಿಸಿಲೂರಿನ ಬಂಡೆ ರಂಗನಾಥಸ್ವಾಮಿ ಜಾತ್ರೆ ಇಂದು

Published On :

ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಮಾ. 15
ತುಂಗಭದ್ರಾ ಜಲಾಶಯದ ಹಿನ್ನೀರಿನ ದಂಡೆಯ ಮೇಲಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಉತ್ತರ ತಂಬ್ರಹಳ್ಳಿ ಬಳಿಯ ಐತಿಹಾಸಿಕ ಶ್ರೀ ಬಂಡೆರಂಗನಾಥಸ್ವಾಮಿ ರಥೋತ್ಸವ ಹೋಳಿ ಹುಣ್ಣಿಮೆ ದಿನವಾದ ಮಾ. 16ರಂದು ಸಂಜೆ ಜರುಗಲಿದೆ.
ಬಯಲು ಸೀಮೆಯಲ್ಲಿಯೇ ಜರುಗುವ ಬಹುದೊಡ್ಡ ರಥೋತ್ಸವಗಳಲ್ಲೊಂದಾದ ಬಂಡೆ ರಂಗನಾಥಸ್ವಾಮಿ ತೇರಿಗೆ ತಾಲೂಕು ಸೇರಿದಂತೆ ಪಕ್ಕದ ಕೊಪ್ಪಳ, ಗದಗ, ದಾವಣಗೆರೆ ಜಿಲ್ಲೆ ಹಾಗೂ ನಾಡಿನ ವಿವಿಧ ಭಾಗಗಳಿಂದಲೂ ಹಲವು ದಶಕಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಹಕುಟುಂಬ ಸಮೇತರಾಗಿ ಬಂದು ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿಯಿಂದ ತೇರು ಎಳೆದು ರಂಗಪ್ಪಜ್ಜನಿಗೆ ತಮ್ಮ ಭಕ್ತಿ ಸಮರ್ಪಿಸುವುದು ನೋಡಲು ಎರಡು ಕಣ್ಣುಗಳು ಸಾಲವು.
ತಂಪನ್ನೆರೆವ ವಿವಿಧ ಬೆಳೆ: ತುಂಗಭದ್ರಾ ಜಲಾಶಯದ ಹಿನ್ನೀರಿನ ಜಲರಾಶಿಯ ದಂಡೆಯ ಮೇಲೆ ಶ್ರೀ ಬಂಡೆರಂಗನಾಥಸ್ವಾಮಿ ದೇವಸ್ಥಾನವಿದೆ. ತನ್ನೊಳಗಿನ ಐತಿಹಾಸಿಕ ಹಾಗೂ ಪ್ರಾಕೃತಿಕ ವಿಶೇಷತೆಗೆ ಈ ದೇವಸ್ಥಾನ ಹೆಸರಾಗಿದೆ. ಮುಖ್ಯವಾಗಿ ಜೂನ್‌ನಿಂದ ಫೆಬ್ರವರಿ ತನಕ ನಿಲ್ಲುವ ಜಲಾಶಯದ ಹಿನ್ನೀರು ಈ ದೇವಸ್ಥಾನಕ್ಕೆ ಪ್ರವಾಸಿ ತಾಣದ ಗೆಟಪ್ ನೀಡುತ್ತದೆ. ಆ ವೇಳೆ ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಸಹ ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹಿನ್ನೀರನ್ನು ಬಳಸಿಕೊಂಡು ದೇವಸ್ಥಾನ ಸುತ್ತಲೂ ವ್ಯಾಪಿಸಿರುವ  ಕಬ್ಬು, ಬತ್ತದ ಹಚ್ಚ ಹಸಿರಿನ ಗದ್ದೆಗಳು, ತೆಂಗಿನ ತೋಟಗಳು, ಶೇಂಗಾ, ಅಲಸಂದಿ ಹೊಲಗಳು ಈ ಬಿರು ಬಿಸಿಲಿನಲ್ಲಿ ದಣಿದು ಬರುವ ಭಕ್ತರ ಮನಸ್ಸಿಗೆ ತಂಪು ನೀಡುತ್ತವೆ.
ಪ್ರವಾಸಿ ತಾಣ: ಇತ್ತೀಚೆಗೆ ಕೋಟಿ ರು. ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬೆಟ್ಟದ ಮೇಲೆ ಹೋಗಲು ಕಾಂಕ್ರೀಟ್ ರಸ್ತೆ, ಗುಡ್ಡದಲ್ಲಿರುವ ನೀರಿನ ಹೊಂಡದ ಸುತ್ತಲೂ ರಕ್ಷಣಾ ಹಿಡಿಕೆ, ಐತಿಹಾಸಿಕ ತಂಗಾಳಿ ಗೋಪುರ, ದೇವಸ್ಥಾನದ ದುರಸ್ತಿ ಕಾರ್ಯಗಳು, ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ಬಂಡೆ ರಂಗಪ್ಪನ ದೇವಾಲಯ ಸುತ್ತ ಸುಂದರ ಪ್ರವಾಸಿ ತಾಣದ ಮೆರಗು ತರಿಸಿವೆ.
ಇತಿಹಾಸ: ತಾಲೂಕು ಕೇಂದ್ರಸ್ಥಾನದಿಂದ ಸುಮಾರು 19 ಕಿ.ಮೀ. ದೂರದಲ್ಲಿ ಬಂಡೆರಂಗಪ್ಪನ ಗುಡ್ಡವಿದೆ. ಸುಮಾರು ಆರುನೂರು ವರ್ಷಗಳ ಹಿಂದೆ ಹರಪನಹಳ್ಳಿ ಪಾಳೆಗಾರರ ಆಳ್ವಿಕೆಯಲ್ಲಿ ನಿರ್ಮಿಸಿರುವ ಸುಂದರ ಕೆತ್ತನೆಯ ಇತಿಹಾಸ ಪ್ರಸಿದ್ಧ ಶ್ರೀಬಂಡೆರಂಗನಾಥಸ್ವಾಮಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಬೆಟ್ಟದ ಮೇಲೆ, ಕೆಳಗಡೆ ಇರುವ ಐತಿಹಾಸಿಕ ಕುರುಹುಗಳು ಈ ಪ್ರದೇಶವನ್ನು ಪಾಳೆಗಾರರು ಅಳ್ವಿಕೆ ಮಾಡಿದ್ದರು ಎಂಬುವುದನ್ನು ನೆನಪಿಸುತ್ತವೆ.
ಹರಪನಹಳ್ಳಿ ಪಾಳೆಗಾರರಿಂದ ಈ ಪ್ರದೇಶದ ಉಸ್ತುವಾರಿಗೆ ನೇಮಕಗೊಂಡಿದ್ದ ದಳಪತಿ ಓಬಳನಾಯಕನ ಕನಸಿನಲ್ಲಿ ಬಂಡೆಯೊಂದರಲ್ಲಿ ರಂಗನಾಥಸ್ವಾಮಿ ಇರುವುದನ್ನು ಕಂಡಿದ್ದನಂತೆ. ಆ ಪ್ರಕಾರ ವಿಗ್ರಹ ಪತ್ತೆ ಹಚ್ಚಿ, ಬೆಟ್ಟದ ಮೇಲೆ ಸುಂದರ ದೇವಸ್ಥಾನ ಕಟ್ಟಿಸಿ ಅಲ್ಲಿಯೇ ರಂಗನಾಥನನ್ನು ಪ್ರತಿಷ್ಠಾಪಿಸಿದನೆಂಂಬ ಸ್ಥಳೀಯ ಐತಿಹ್ಯವಿದೆ. ಬಂಡೆಯಲ್ಲಿ ಮೂಡಿದ ಕಾರಣಕ್ಕೆ ಸ್ಥಳಿಯರು ಬಂಡೆ ರಂಗಪ್ಪ ದೇವಸ್ಥಾನ ಎನ್ನುತ್ತಾರೆ. ಪಕ್ಕದಲ್ಲಿಯೇ ಲಕ್ಷ್ಮಿ ದೇವಸ್ಥಾನವಿದೆ. ಬೆಟ್ಟದ ಮೇಲೆ ವಿಜಯನಗರ ಆರಸರ ಕಾಲದ ವಾಸ್ತುಶಿಲ್ಪ ಶೈಲಿಯಿಂದ ಕಟ್ಟಿರುವ ಒಂದು ಸುಂದರ ಗೋಪುರವಿದೆ. ಸದಾಕಾಲ ಈ ಗೋಪುರದಲ್ಲಿ ತಂಗಾಳಿ ಬೀಸುತ್ತಿರುತ್ತದೆ.
ಬೆಟ್ಟದ ಮೇಲೆ ಅನೇಕ ಸಣ್ಣಪುಟ್ಟ ಗುಹೆಗಳಿವೆ. ನೀರಿನ ಹೊಂಡವಿದೆ. ಬೆಟ್ಟ ಹತ್ತಲು ಮೆಟ್ಟಿಲುಗಳಿವೆ. ಬೆಟ್ಟದ ಕೆಳಗಡೆ ಓಬಳನಾಯಕ ಕಟ್ಟಿಸಿದ ಸುಂದರ ಬಾವಿಯಿದೆ. ಬಾವಿಯ ಮುಖಮಂಟಪ ಹಾಗೂ ಸುತ್ತಲೂ ಕೆತ್ತಿರುವ ಉಬ್ಬುಚಿತ್ರಗಳು ಅತ್ಯಾಕರ್ಷಕವಾಗಿವೆ. ಆದರೆ, ಸರಿಯಾದ ನಿರ್ವಹಣೆಯಿಲ್ಲದ ನಿಮಿತ್ತ ಬಾವಿಯಲ್ಲಿ ಮುಳ್ಳಿನ ಗಿಡಗಳು ಬೆಳೆದು ಬಾವಿಯ ಸುಂದರತೆ ಹಾಳುಗೆಡವಿದೆ.
ರಥೋತ್ಸವದ ನೆಪದಲ್ಲಿ ಒಮ್ಮೆ ಇಲ್ಲಿಗೆ ಸಹಕುಟುಂಬ ಸಮೇತರಾಗಿ ಭೇಟಿ ನೀಡಿದರೆ ನಮ್ಮ ಮಧ್ಯದಲ್ಲಿ ಬೆಳಕುಕಾಣದೇ ಇರುವಂಥ ಒಂದು ಸುಂದರ ಐತಿಹಾಸಿಕ ತಾಣದ ಪರಿಚಯ ಮಾಡಿಕೊಳ್ಳುವ ಅವಕಾಶ ನಿಮ್ಮದಾಗುತ್ತದೆ.
ಮಾರ್ಗ: ಹಗರಿಬೊಮ್ಮನಹಳ್ಳಿಯಿಂದ ತಂಬ್ರಹಳ್ಳಿ 14 ಕಿ.ಮೀ. ದೂರದಲ್ಲಿದೆ. ಸಾರಿಗೆ ಬಸ್ ಹಾಗೂ ಖಾಸಗಿ ಆಟೋ ವಾಹನಗಳಿವೆ. ತಂಬ್ರಹಳ್ಳಿಯಿಂದ 3ಕಿ.ಮೀ. ದೂರದ ಉತ್ತರ ತಂಬ್ರಹಳ್ಳಿಗೆ ಬಸ್, ಖಾಸಗಿ ವಾಹನ ಸೌಲಭ್ಯ ಉಂಟು. ಅಲ್ಲಿಂದ ರಂಗಪ್ಪನಗುಡ್ಡ 2 ಕಿ.ಮೀ. ನಡೆದುಕೊಂಡು ಹೋಗಬಹುದು. ಇಲ್ಲದಿದ್ದರೆ ತಂಬ್ರಹಳ್ಳಿಯಿಂದಲೇ ಖಾಸಗಿ ವಾಹನಗಳಲ್ಲಿ ಹೋಗಬಹುದು.
- ಹುಳ್ಳಿಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.