ಇಂದು ಧರ್ಮಾಪುರ ಗಂಡಿ ನರಸಿಂಹಸ್ವಾಮಿ ಜಾತ್ರೆ
ಸಂಡೂರು: ಸಂಡೂರು ಪಟ್ಟಣದ ಧರ್ಮಾಪುರ ಗ್ರಾಮದ ಹತ್ತಿರವಿರುವ ಗಂಡಿ ನರಸಿಂಹಸ್ವಾಮಿ ದೇವಸ್ಥಾನ 17ನೇ ಶತಮಾನದ ಕಾಲಘಟ್ಟದಲ್ಲಿ ವಿಜಯನಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು ಭವ್ಯ ಇತಿಹಾಸ ಹೊಂದಿದೆ. ದೇವಸ್ಥಾನದಲ್ಲಿ ನರಸಿಂಹ ಸ್ವಾಮಿ ಮತ್ತು ಲಕ್ಷ್ಮೀ ದೇವರ ಮೂರ್ತಿಗಳು ಪೂಜಿಸಲ್ಪಡುತ್ತಿದ್ದು, ಸಾವಿರಾರು ಭಕ್ತರ ಸಂಕಷ್ಟಗಳನ್ನು ಬಗೆಹರಿಸುವ ಶಕ್ತಿಯ ತಾಣವಾಗಿದೆ. ಮಾ. 16ರಂದು ಸಂಜೆ 4 ಗಂಟೆಗೆ ನರಸಿಂಹಸ್ವಾಮಿ ಜಾತ್ರೆ ನಡೆಯಲಿದೆ.
ಕಂಡ ಕನಸುಗಳು ಅಂದುಕೊಂಡ ಆಸೆಗಳು ನೆರವೇರಲೆಂದು ವ್ಯಾಪಾರ, ಉದ್ಯೋಗ, ಕೃಷಿ ಮಾಡುವವರು, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರಲೆಂದು ವಿದ್ಯಾರ್ಥಿಗಳು, ಕಳೆದುಹೋದ ಮಗಳು, ತಪ್ಪಿಸಿಕೊಂಡ ಮಗನು ಬೇಗ ಮನೆ ಸೇರಲೆಂದು ಬೇಡಿಕೊಳ್ಳುವ ತಂದೆ-ತಾಯಂದಿರು. ಹೀಗೆ ನಾನಾ ಇಷ್ಟಾರ್ಥಗಳ ಈಡೇರಿಕೆಗಾಗಿ ನರಸಿಂಹ ಸ್ವಾಮಿ ದರ್ಶನಕ್ಕಾಗಿ ಮಂಗಳವಾರ ಮತ್ತು ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡುವವರು ನೂರಾರು ಸಂಖ್ಯೆಯಲ್ಲಿ ಕಾಣುತ್ತಾರೆ.
ದೇವರ ಹೆಸರಿನಲ್ಲಿ ಕುರಿ-ಕೋಳಿಗಳ ಮಾರಣಹೋಮ ನಡೆಯುವುದು ಜಾತ್ರೆಯಲ್ಲಿ ಸರ್ವೇ ಸಾಮಾನ್ಯ. ಕೇಳದ ದೇವರಿಗೆ ಪ್ರಾಣಿ ಬಲಿಕೊಟ್ಟು, ಹೊಟ್ಟೆ ಚಪಲಕ್ಕಾಗಿ ಸಾವಿರಾರು ಜೀವಿಗಳ ಪ್ರಾಣ ತೆಗೆಯುವ ಮನುಷ್ಯರು- ಜಾತ್ರೆಗಳು ಒಂದು ಕಡೆಯಾದರೆ ಈ ನರಸಿಂಹ ದೇವರ ಜಾತ್ರೆಯ ಆಚರಣೆ ವಿಶಿಷ್ಟ ಬಗೆಯದು. ಇಲ್ಲಿ ಪ್ರಾಣಿ ಬಲಿಯ ಬದಲಾಗಿ ಬೇಟೆ ಮರವನ್ನು ಬಲಿ ಕೊಡುವ ಅಪರೂಪದ ಆಚರಣೆ ಜಾರಿಯಲ್ಲಿದೆ. ಐದು ದಿನಗಳ ಕಾಲ ಉಪವಾಸವಿದ್ದ ಪೂಜಾರಿಯು ಬೊಮ್ಮಘಟ್ಟ ಹುಲಿಕುಂಟೇಶ್ವರನ ಕಂಕಣ ಕಟ್ಟಿಕೊಂಡು ಬಲಿಮರದ ಮೇಲೆ ಮಲಗಿ ಹೇಳಿಕಿ ನೀಡಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯುತ್ತದೆ.
ಎತ್ತಿನ ಗಾಡಿಗಳು, ಮೋಟಾರು ಬೈಕ್ಗಳು, ಟೆಂಪೋ- ಟ್ರ್ಯಾಕ್ಸ್ಗಳು, ಬಸ್ಸುಗಳ ಮೂಲಕ ವಿವಿಧ ಗ್ರಾಮಗಳ ಮತ್ತು ಪಕ್ಕದ ತಾಲೂಕಿನ ಸಾವಿರಾರು ಜನರು ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲ ಗಣಿ ಕಂಪನಿಯವರು ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬೇಕಾದ ಗಂಡಿ ನರಸಿಂಹ ದೇವಸ್ಥಾನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗು ಸ್ಥಳೀಯರದ್ದು, ಗಿರಿ ಶಿಖರದ ಮಧ್ಯೆ ನೆಲೆ ನಿಂತಿರುವ ನರಸಿಂಹ ಸ್ವಾಮಿಯ ದರ್ಶನಕ್ಕೆ ನೀವು ಬರ ಬಹುದು. ಕೂಡ್ಲಿಗಿ, ಹೊಸಪೇಟೆ, ಬಳ್ಳಾರಿಯಿಂದ ಬಸ್ಸಿನ ಸೌಲಭ್ಯ ಉಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

