ಬಳ್ಳಾರಿ

ಶ್ರೀರಾಮುಲು ಸ್ಪರ್ಧೆಗೆ ವರಿಷ್ಠರ ಸಮ್ಮತಿ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 18
ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಸಂಬಂಧ ಗೊಂದಲ ಬಗೆಹರಿದಿದೆ. ಶ್ರೀರಾಮುಲು ಅಭ್ಯರ್ಥಿಯಾಗುವುದಕ್ಕೆ ಕೇಂದ್ರ ವರಿಷ್ಠರು ಸಮ್ಮತಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ನೇಮಿರಾಜ್ ನಾಯ್ಕ ಹೇಳಿದರು.
ಕೊಟ್ಟೂರು ಬಿಜೆಪಿ ಅಧ್ಯಕ್ಷ ಬೋರ್‌ವೆಲ್ ತಿಪ್ಪೇಸ್ವಾಮಿ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಸೇರಿದಂತೆ ಎಲ್ಲ ಬಿಜೆಪಿ ವರಿಷ್ಠರು ಶ್ರೀರಾಮುಲು ಸ್ಪರ್ಧೆಗೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಗೊಂದಲ ಇಲ್ಲ. ಚುನಾವಣೆಗೆ ಸಮರ್ಥ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸುವುದರಿಂದ ಪಕ್ಷದ ಎಲ್ಲ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಂಡಿದೆ. ಹೀಗಾಗಿ ಗೆಲವು ನಿರಾಯಾಸವಾಗಿ ಬಿಜೆಪಿಗೆ ದೊರಕುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ರಾಜ್ಯದೆಲ್ಲೆಡೆ ಭಾರತ ನಿರ್ಮಾಣ ಯಾತ್ರೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೇವಲ ಚುನಾವಣೆ ಕಾರಣಕ್ಕಾಗಿ ಈ ಘೋಷಣೆ ಮಾಡಿದ್ದು, ಜನತೆ ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್‌ನವರು ರಾಷ್ಟ್ರ ನಿರ್ನಾಮ ಮಾಡಲು ಅರ್ಹರೆ ಹೊರತು ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಿಲ್ಲ ಎಂಬುದನ್ನು ಈಗಾಗಲೆ ಜನತೆ ಅರಿತಿದ್ದಾರೆ.
ಚಿಕ್ಕಾಸು ತಂದಿಲ್ಲ: ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಶಾಸಕರಾದಾಗಿನಿಂದ ಕ್ಷೇತ್ರಕ್ಕೆ ಇದುವರೆಗೆ ಚಿಕ್ಕಾಸು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದ ಜನರನ್ನು ಸುಳ್ಳಿನಿಂದ ವಂಚಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ನಡೆಸಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ವಿವಿಧ ನೀರಾವರಿ ಯೋಜನೆಗಳಿಗೆ ಬಿಜೆಪಿ ಸರ್ಕಾರ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆ ಮಾಡಿದೆ. ಯೋಜನೆಗೆ ಚಾಲನೆ ದೊರಕುವ ಹಂತದಲ್ಲಿ ವಿಧಾನಸಭೆಗೆ ಚುನಾವಣೆಗೆ ದಿನಾಂಕ ನಿಗದಿಗೊಂಡಿತು. ಇದೀಗ ಶಾಸಕ ಭೀಮಾನಾಯ್ಕ ಈ ಯೋಜನೆಗಳಿಗೆ ತಾನೇ ಅನುದಾನ ತಂದಿರುವುದಾಗಿ ಘೋಷಿಸಿಕೊಳ್ಳುತ್ತಿರುವ ಬಗ್ಗೆ ಕ್ಷೇತ್ರದ ಜನತೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಶಾಸಕನಾಗಿದ್ದಾಗ ತಂದ ಅನುದಾನದ ವಿವರವನ್ನು ದಾಖಲೆ ಸಮೇತ ಭೀಮಾನಾಯ್ಕರೊಂದಿಗೆ ವೇದಿಕೆಯಲ್ಲಿ ಪ್ರದರ್ಶಿಸಲು ಸಿದ್ಧ. ತಮ್ಮ ಸವಾಲನ್ನು ಸ್ವೀಕರಿಸಿ ಶಾಸಕ ಭೀಮಾನಾಯ್ಕ ತಾವು ತಂದ ಅನುದಾನದ ವಿವರವನ್ನು ಜನತೆಗೆ ದಾಖಲೆ ಸಮೇತ ನೀಡಲು ಮುಂದಾಗಬೇಕು ಎಂದು ನೇಮಿರಾಜ್ ಸವಾಲು ಹಾಕಿದರು.
ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್. ತಿಂದಪ್ಪ, ಪಕ್ಷದ ಮುಖಂಡರಾದ ಪಿ. ಚನ್ನಬಸವನಗೌಡ, ಕೊಟ್ರೇಶ್ ಕಾಮಶೆಟ್ಟಿ, ಭರಮನಗೌಡ, ಬೋರ್‌ವೆಲ್ ತಿಪ್ಪೇಸ್ವಾಮಿ, ಖಾನಾವಳಿ ಶಿವಕುಮಾರ್, ಮಂಗಾಪುರ ವೀರೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.