ಬಳ್ಳಾರಿ

ನೇಮಿರಾಜ್ ಜತೆಗೆ ಬಹಿರಂಗ ಚರ್ಚೆಗೆ ಸಿದ್ಧ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 20
ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ ದೊಡ್ಡ ವಂಚಕ. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನೀರಾವರಿ ಯೋಜನೆ, ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಯಾರ ಅವಧಿಯಲ್ಲಿ ಸರ್ಕಾರದ ಅನುದಾನ ದೊರಕಿದೆ ಎಂಬ ಬಗ್ಗೆ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಯಾವುದೇ ಕ್ಷಣದಲ್ಲೂ ತಾವು ಸಿದ್ಧ. ನೇಮಿರಾಜ್ ಹೇಳುವ ಸ್ಥಳ ಮತ್ತು ಅವಧಿಯಲ್ಲಿ ಚರ್ಚೆಗೆ ಬರುವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಪಂಥಾಹ್ವಾನ ನೀಡಿದರು.
ಪಟ್ಟಣದ ಹಿರಿಯ ವರ್ತಕ ಕೆ.ಎನ್. ಶಿವಕುಮಾರಗೌಡ ನಿವಾಸದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲ್ವಿ ಜಲಾಶಯಕ್ಕೆ ನೀರು ತರುವ ಕುರಿತು ರಾಜಕೀಯ ಲಾಭ ಮಾಡಿಕೊಳ್ಳುವ ಕಾರ್ಯದಲ್ಲಿ ದೆಹಲಿಯಿಂದ ಹಗರಿಬೊಮ್ಮನಹಳ್ಳಿವರೆಗೆ ಕೆಲವರು ಮುಂದಾಗಿದ್ದಾರೆ. ಆದರೆ ವಾಸ್ತವದಲ್ಲಿ ಈ ಜಲಾಶಯಕ್ಕೆ ನೀರು ತರುವ ಪ್ರಯತ್ನ ಮತ್ತು ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವ ಪ್ರಯತ್ನದಲ್ಲಿ ತಮ್ಮಿಂದ ಸದ್ದಿಲ್ಲದೆ ಕಾರ್ಯ ನಡೆದಿದೆ ಎಂದರು.
ವಂಚನೆಗೈದ ನೇಮಿರಾಜ್: ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಅಗತ್ಯ ನನಗೆ ಖಂಡಿತ ಇಲ್ಲ. ಮಾಜಿ ಶಾಸಕ ನೇಮಿರಾಜ್ ನಾಯ್ಕ ಕ್ಷೇತ್ರದ ಸ್ವಾಮೀಜಿಗಳು ಸೇರಿದಂತೆ ಹಲವರನ್ನು ತಪ್ಪುದಾರಿಗೆಳೆದು ಭಾರಿ ಪ್ರಮಾಣದಲ್ಲಿ ನೀರಾವರಿ ಯೋಜನೆ ಜಾರಿಗೆ ತರಲು ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ವಂಚನೆಗೈದಿದ್ದಾರೆ. ಈ ಕಾರಣಕ್ಕಾಗಿಯೆ ಕ್ಷೇತ್ರದ ಜನ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ತಾವು ಚಿಕ್ಕಾಸು ಅನುದಾನ ತಂದಿಲ್ಲ ಎಂದು ಟೀಕಿಸಿರುವ ಅವರಿಗೆ ತಾವು ದಾಖಲೆ ಸಮೇತ ಚರ್ಚೆಗೆ ಬರಲು ಸಿದ್ಧ ಎಂದು ಹೇಳಿದರು.
ಶ್ರೀರಾಮುಲುಗೆ ಬೆಂಬಲ: ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಭರಪೂರ ಪ್ರಯತ್ನ ನಡೆದಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಯ ಹೆಸರು ಪ್ರಕಟಗೊಳ್ಳುತ್ತದೆ ಎಂದ ಅವರು, ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಸ್ಪರ್ಧಿಸಿರುವುದು ಇನ್ನು ಖಾತರಿಯಾಗಿಲ್ಲ. ಇದನ್ನೆ ಬಂಡವಾಳವಾಗಿಸಿಕೊಂಡು ಬಿಜೆಪಿಯವರು ಬೀಗತೊಡಗಿದ್ದಾರೆ. ಜೆಡಿಎಸ್‌ಗೆ ಶ್ರೀರಾಮುಲು ಬಂದರೆ ಅವರು ಅಭ್ಯರ್ಥಿಯಾಗಲು ತಮ್ಮ ಬೆಂಬಲ ಖಂಡಿತ ಇದೆ. ಜೆಡಿಎಸ್ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದರೆ ಅವರ ಜಯಕ್ಕೆ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎಂದರು.
ಕೊಟ್ಟೂರು ಪಪಂ ಆಡಳಿತ ಜೆಡಿಎಸ್ ತೆಕ್ಕೆಯಲ್ಲಿಯೆ ಇದೆ. ಪಕ್ಷದಲ್ಲಿದ್ದ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರ ರಾಜಕೀಯ ಬದುಕು ಉತ್ತಮಗೊಳ್ಳಲಿ ಎಂದು ಹೇಳಿದ ಭೀಮಾನಾಯ್ಕ, ಪಪಂನ 20 ಸದಸ್ಯರು ಜೆಡಿಎಸ್‌ನಲ್ಲೆ ಇರಲು ಸಮ್ಮತಿಸಿದ್ದಾರೆ. ಪ್ರತಿ ಸದಸ್ಯ ತಮ್ಮ ಸಂಪರ್ಕದಲ್ಲಿದ್ದಾರೆ. ಕೊಟ್ಟೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಹಿಂದೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಮುಂದೆಯೂ ಬರಲಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕಂದಗಲ್ಲು ನೀಲಕಂಠಪ್ಪ, ಕುರಿ ಶಿವಮೂರ್ತಿ, ಕೆ.ಎನ್. ಕೊಟ್ರೇಶ್, ಪಪಂ ಸದಸ್ಯ ಬುಗ್ಗಳ್ಳಿ ಕೊಟ್ರೇಶ್, ಸೋಡಾ ಗುರುಬಸವರಾಜ್, ಗೂಳಿ ಮಲ್ಲಿಕಾರ್ಜುನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.