ಬಳ್ಳಾರಿ

ಇಂದು ಯೋಗ ತರಬೇತಿ

Published On :

ಬಳ್ಳಾರಿ: ಶ್ರೀ ಸತ್ಯಸಾಯಿ ಧ್ಯಾನ ಮಂಡಳಿ ವತಿಯಿಂದ ನಗರದಲ್ಲಿ ಮಾ. 23ರಿಂದ 10 ದಿನಗಳ ಕಾಲ ಉಚಿತ ಧ್ಯಾನ, ವೈದ್ಯ ಯೋಗ ಶಿಕ್ಷಣ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ನಗರದ ಕಂಟೋನ್ಮೆಂಟ್ ಪ್ರದೇಶದ ಶ್ರೀಸಾಯಿ ಅಪಾರ್ಟ್‌ಮೆಂಟ್ ಸೆಲ್ಲಾರ್‌ನಲ್ಲಿ ಹಾಗೂ ಅನಂತಪುರ ರಸ್ತೆಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ. 23ರಿಂದ ಶಿಬಿರಗಳು ಪ್ರಾರಂಭವಾಗಲಿದ್ದು, ಪ್ರತಿದಿನ ಬೆಳಗ್ಗೆ 5ರಿಂದ 7.30ರ ವರೆಗೆ ಹಾಗೂ ಸಂಜೆ 6ರಿಂದ 8.30ರ ವರೆಗೆ ನಡೆಯಲಿವೆ. ಶಿಬಿರವನ್ನು ಪ್ರಸಾದ್ ಗುರೂಜಿ ನಡೆಸಿಕೊಡಲಿದ್ದಾರೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ದತ್ತಿ ಉಪನ್ಯಾಸ
ಬಳ್ಳಾರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಮಾ. 23ರಂದು ಭಾನುವಾರ ಬೆಳಗ್ಗೆ 10.30ಕ್ಕೆ 127ನೇ ಮಹಾಮನೆ ದತ್ತಿ ಕಾರ್ಯಕ್ರಮವನ್ನು ಸ್ಥಳೀಯ ಕೌಲ್‌ಬಜಾರ್‌ನ ಸಂತ ಜೋಸೆಫರ ಪ್ರೇಮಾಶ್ರಮದಲ್ಲಿ ಏರ್ಪಡಿಸಿದೆ. ವಿದ್ಯಾರ್ಥಿ ಜೀವನದ ಸಾರ್ಥಕತೆ ಎಂಬ ವಿಷಯದ ಕುರಿತು ಶಿಕ್ಷಕಿ ಡಾ.ಎ.ಎನ್. ಸಿದ್ದೇಶ್ವರಿ ಉಪನ್ಯಾಸ ನೀಡುವರು. ಸಂತ ಜೋಸೆಫರ ಪ್ರೇಮಾಶ್ರಮದ ವ್ಯವಸ್ಥಾಪಕಿ ಸಿಸ್ಟರ್ ಹೆಲನ್ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಗ್ರೇಸಿ ಎಂ.ಪಿ., ಅತಿಥಿಗಳಾಗಿ ಸಿಸ್ಟರ್ ಕಿತೇರಿಯಾ, ಸಿಸ್ಟರ್ ಫಾತಿಮಾ, ಸಿಸ್ಟರ್ ನ್ಯಾನ್ಸಿ, ಸಿಸ್ಟರ್ ದಿವ್ಯಾ ಪಾಲ್ಗೊಳ್ಳುವರು ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ ವಾರ್ಷಿಕ ಶಿಬಿರ
ಬಳ್ಳಾರಿ: ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಎ ಮತ್ತು ಬಿ ಘಟಕಗಳ ಸಹಯೋಗದಲ್ಲಿ ಮಾ. 23ರಿಂದ 29ರ ವರೆಗೆ ವಿಶೇಷ ವಾರ್ಷಿಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿಯ ಜಾಗೃತಿ ನಗರ (ಕೊಳಗೇರಿ)ದಲ್ಲಿ ಶಿಬಿರ ನಡೆಯಲಿದ್ದು, ಮಾ. 23ರಂದು ಸಂಜೆ 5ಕ್ಕೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಚ್. ರಾಮಕೃಷ್ಣ ಉದ್ಘಾಟಿಸಲಿದ್ದಾರೆ. ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಕ್ಷ-ಕಿರಣ ತಜ್ಞ ಡಾ. ಕೆ. ನಾಗರಾಜ ರಾವ್, ವಿ.ಎನ್. ಕನ್ಸ್‌ಟ್ರಕ್ಷನ್ ಲಿಮಿಟೆಡ್‌ನ ನಿರ್ದೇಶಕ ವಿ. ನಾರಾಯಣ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಐವರಿಗೆ ಪ್ರೋತ್ಸಾಹಧನ
ಕೊಟ್ಟೂರು: ಪಟ್ಟಣದಲ್ಲಿ ಪದವಿಪೂರ್ವ ಕಾಲೇಜಿನ ಪ. ಜಾತಿಯ ಐವರು ವಿದ್ಯಾರ್ಥಿಗಳು ಇನ್ ಆರ್ಡರ್ ಮೆರಿಟ್‌ನ ರು. 10 ಸಾವಿರ ಪ್ರೋತ್ಸಾಹಧನ ಪಡೆದಿದ್ದಾರೆ. ಐವರು ವಿದ್ಯಾರ್ಥಿಗಳು ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದರು. ಇದನ್ನು ಗಮನಿಸಿ ಸಮಾಜ ಕಲ್ಯಾಣ ಇಲಾಖೆ ಇನ್ ಆರ್ಡರ್ ಮೆರಿಟ್ ಆಧಾರದ ಯೋಜನೆಗೆ ಆಯ್ಕೆ ಮಾಡಿ ತಲಾ ರು. 10 ಸಾವಿರ ನಗದನ್ನು ನೀಡಿ ಪ್ರೋತ್ಸಾಹಿಸಿದೆ. ತೇಜಾನಾಯ್ಕ 564, ದೇವೇಂದ್ರನಾಯ್ಕ 537, ಹನುಮೇಶ್ ಎಸ್. 534, ಉಮೇಶ್ ನಾಯ್ಕ 532, ಲಕ್ಷ್ಮಿ ಜಿ. 525 ಅಂಕ ಪಡೆಯುವ ಮೂಲಕ ಸಾಧನೆ ತೋರಿ ಪ್ರೋತ್ಸಾಹಧನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಎಚ್.ಎನ್.  ವೀರಭದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರಿಂದ ಹಣ ದೋಚಿದ ಆಟೋ ಚಾಲಕ
ಬಳ್ಳಾರಿ: ಮೆಣಸಿನಕಾಯಿ ಮಾರಿಕೊಂಡು ಹೈದರಾಬಾದ್‌ಗೆ ತೆರಳುತ್ತಿದ್ದ ಇಬ್ಬರು ರೈತ ಸಹೋದರರಿಗೆ ಆಟೋ ಚಾಲಕ ಸೇರಿದಂತೆ ಇತರ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಓರ್ವ ರೈತನಿಗೆ ತಲೆಗೆ ರಾಡ್‌ನಿಂದ ಹೊಡೆದು ರು. 1 ಲಕ್ಷ ದೋಚಿಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಗರದ ಬೆಂಗಳೂರು ರಸ್ತೆಯಲ್ಲಿ ನಡೆದಿದೆ. ಹೈದರಾಬಾದ್‌ನ ಪರಮೇಶ್ವರ ರೆಡ್ಡಿ ಮತ್ತು ಜಗದೀಶ್ವರ ರೆಡ್ಡಿ ಸಹೋದರರೇ ಈ ಘಟನೆಗೆ ಒಳಗಾಗಿದ್ದಾರೆ. ಪರಮೇಶ್ವರ ರೆಡ್ಡಿ ತಲೆಗೆ ರಾಡ್‌ನಿಂದ ಹೊಡೆದು ಆತನ ಬಳಿ ಇದ್ದ ರು. 1 ಲಕ್ಷ ದೋಚಿಕೊಂಡು ಪರಾರಿಯಾಗಿದ್ದಾರೆ. ಇಬ್ಬರು ಬ್ಯಾಡಗಿಯಲ್ಲಿ ಮೆಣಸಿಕಾಯಿ ಮಾರಾಟ ಮಾಡಿ ಹರಿಹರದಿಂದ ಶುಕ್ರವಾರ ಸಂಜೆ ಬಳ್ಳಾರಿಗೆ ಬಸ್ಸಿನಲ್ಲಿ ಆಗಮಿಸಿದ್ದಾರೆ. ಜಗದೀಶ್ವರ ರೆಡ್ಡಿ ಬಳಿ ರು. 1.48 ಲಕ್ಷ, ಪರಮೇಶ್ವರ ರೆಡ್ಡಿ ಹತ್ತಿರ ರು. 1 ಲಕ್ಷ ಇತ್ತು. ಇಬ್ಬರು ಬಳ್ಳಾರಿಯಲ್ಲಿ ಇಳಿದು ಊಟ ಮಾಡಿ ನಗರದ ರಾಯಲ್ ಸರ್ಕಲ್‌ನಲ್ಲಿ ಆಟೋ ಹತ್ತಿ ಹೊಸ ಬಸ್ ನಿಲ್ದಾಣಕ್ಕೆ ಹೋಗಲು ಹೇಳಿದ್ದಾರೆ. ಬಳ್ಳಾರಿಗೆ ಹೊಸಬರಾದ ಇಬ್ಬರನ್ನು ಬೆಂಗಳೂರು ರಸ್ತೆಯ ಬೈಪಾಸ್ ಕಡೆಗೆ ಕರೆದೊಯ್ದ ಆಟೋ ಚಾಲಕ, ತನ್ನ ಇಬ್ಬರು ಸ್ನೇಹಿತರನ್ನು ಕರೆಸಿದ್ದಾನೆ. ಊರ ಹೊರಗೆ ಆಟೋ ಹೋದ ಕಾರಣ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಆಟೋ ಚಾಲಕನನ್ನು ರೈತರು ಪ್ರಶ್ನೆ ಮಾಡಿದಾಗ, ಆಟೋ ನಿಲ್ಲಿಸಿದಾಕ್ಷಣ ಆಟೋ ಚಾಲಕ, ಸ್ನೇಹಿತರು ಇಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಈ ಕೃತ್ಯ ಎಸಗಿದ್ದಾರೆ. ಜಗದೀಶ್ವರ ರೆಡ್ಡಿ ಕಣ್ಣಿಗೆ ಸ್ವಲ್ಪ ಖಾರದಪುಡಿ ಬಿದ್ದಿದ್ದರಿಂದ ತಪ್ಪಿಸಿಕೊಂಡು ಬಳ್ಳಾರಿ ಕಡೆಗೆ ಓಡಿ ಹೋಗಿದ್ದಾನೆ. ಆದರೆ ಪರಮೇಶ್ವರ ರೆಡ್ಡಿ ತಲೆಗೆ ದುಷ್ಕರ್ಮಿಗಳು ರಾಡ್‌ನಿಂದ ಹೊಡೆದು, ಆತನ ಬಳಿ ಇದ್ದ ರು. 1 ಲಕ್ಷ ದೋಚಿದ್ದಾರೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದ ಜಗದೀಶ್ವರ ರೆಡ್ಡಿ ರೇಲ್ವೆ ನಿಲ್ದಾಣದಲ್ಲಿ ಮಲಗಿಕೊಂಡು, ಬೆಳಗ್ಗೆ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪರಮೇಶ್ವರ ರೆಡ್ಡಿಗೆ ಏನಾಗಿದೆ ಎಂಬುದು ತಿಳಿದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹಲಕುಂದಿ ಬಳಿ ಪರಮೇಶ್ವರ ರೆಡ್ಡಿ ಗಾಯಗೊಂಡು ಬಿದ್ದಿದ್ದರಿಂದ ಸಾರ್ವಜನಿಕ ವಿಮ್ಸ್‌ಗೆ ದಾಖಲು ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಧಿನಗರ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಕಾಲುವೆಯಲ್ಲಿ ಶವ ಪತ್ತೆ
ಹೊಸಪೇಟೆ: ಕೈಗಳನ್ನು ಕಟ್ಟಿ ಕಾಲುವೆಯಲ್ಲಿ ಬಿಸಾಕಿರುವ ಬಾಲಕಿ ಮೃತದೇಹ ತಾಲೂಕಿನ ಕಂಪ್ಲಿಯ ಎಲ್‌ಎಲ್‌ಸಿ ಕಾಲುವೆಯ ನಾರಿಹಳ್ಳಿಯ ರೆಗ್ಯುಲೇಟರ್ ಬಳಿ ಶನಿವಾರ ಪತ್ತೆಯಾಗಿದೆ. ತಾಲೂಕಿನ ವೆಂಕಟಾಪುರ ಗ್ರಾಮದ ಬಸಾಪುರ ತಿಪ್ಪಣ್ಣ ಅವರ ಪುತ್ರಿ ಸಂಗೀತಾ (11) ಮೃತಳು. ಬಾಲಕಿ ಕೈಗಳನ್ನು ಕಟ್ಟಿಹಾಕಿ ಕಾಲುವೆಯಲ್ಲಿ ಎಸೆದಿರುವುದರಿಂದ ಕೊಲೆ ಪ್ರಕರಣ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ನಿಂದ ಬಿದ್ದು ಸಾವು
ಹೊಸಪೇಟೆ: ಬೈಕ್‌ನಿಂದ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಮಲಾಪುರ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಪಾಪಿನಾಯಕನಹಳ್ಳಿ ಗ್ರಾಮದ ಅಂಜಿನಿ (21) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಪಾಪಿನಾಯಕನಹಳ್ಳಿಯಿಂದ ಕಮಲಾಪುರಕ್ಕೆ ಹೋಗುವಾಗ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.