ಬಳ್ಳಾರಿ

ವೇಶ್ಯೆಯರ ನೋಡುವ ದೃಷ್ಟಿ ಬದಲಾಗಲಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 22
ವೇಶ್ಯಾವಾಟಿಕೆಯಲ್ಲಿ ತೊಡಗಿದವರನ್ನು ಕಳಂಕಿತರನ್ನಾಗಿ ನೋಡುವ ದೃಷ್ಟಿಕೋನ ಬದಲಾಗಬೇಕು. ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ಅಪರಾಧಿ ಎಂದು ಭಾವಿಸದೆ ಸಹಾನಭೂತಿಯಿಂದ ನೋಡುವಂತಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ್ ಅಭಿಪ್ರಾಯಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನದ ಆಶ್ರಯದಲ್ಲಿ ಸಂವೇದನಾ ಕಾರ್ಯಕ್ರಮದಡಿ, ನಿರ್ಲಕ್ಷಿತ ಮಹಿಳೆಯರ ಮೇಲಿನ ದೌರ್ಜನ್ಯ- ಕಾನೂನು ಮತ್ತು ಸಾಮಾಜಿಕ ದೃಷ್ಟಿಕೋನಗಳು ಎಂಬ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವೀಯ ನೆಲೆಯಲ್ಲಿ ಕಾಣಿ: ಕೊಲೆ ಮಾಡಿದವರು, ಭ್ರಷ್ಟಾಚಾರಿಗಳಿಗೆ, ಸಮಾಜದಲ್ಲಿ ಕಳಂಕವಿಲ್ಲ. ಈ ಆರೋಪಿಗಳು ಜೈಲಿನಿಂದ ಹೊರ ಬಂದಾಗ ವಿರೋಚಿತ ಸ್ವಾಗತ ನೀಡಲಾಗುತ್ತಿದೆ. ವೇಶ್ಯಾವಾಟಿಕೆ ನಡೆಸುವವರನ್ನು ಕಳಂಕಿತರನ್ನಾಗಿ ನೋಡಲಾಗುತ್ತಿದೆ. ವೇಶ್ಯೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.
ಯಾವುದೋ ಬಲವಂತಕ್ಕೆ ವೇಶ್ಯಾವಾಟಿಕೆಗೆ ನೂಕಲ್ಪಟ್ಟ ಮಹಿಳೆಯರು ಅಪರಾಧಿಗಳಲ್ಲ. ಪೊಲೀಸರು, ವಕೀಲರು ಹಾಗೂ ನ್ಯಾಯಾಧೀಶರು ಅಂತಹ ಮಹಿಳೆಯರನ್ನು ಮಾನವೀಯ ನೆಲೆಯಲ್ಲಿ ನೋಡಬೇಕು ಎಂದು ನ್ಯಾಯವಾದಿಗಳಿಗೆ ಕಿವಿಮಾತು ಹೇಳಿದರು.
ಮಹಿಳೆಗೆ ನ್ಯಾಯ ದೊರಕಿಸಿ: ಬಡತನ, ಅನಕ್ಷರತೆ, ಮನೆಯಲ್ಲಿ ಸರಿಯಾದ ವಾತಾವರಣ ಇಲ್ಲದೆ ಇರುವುದರಿಂದ ಕೆಲ ಮಹಿಳೆಯರು ವೇಶ್ಯೆವಾಟಿಕೆಗೆ ಬರಲು ಕಾರಣವಾದರೆ, ಮತ್ತೆ ಕೆಲವರು ಯಾರದೋ ಬಲವಂತಕ್ಕೆ ಮತ್ತು ಒತ್ತಡಕ್ಕೆ ಸಿಲುಕಿ, ಮೋಸದಿಂದ ಮತ್ತು ಸರಿಯಾದ ತಿಳಿವಳಿಕೆ ಇಲ್ಲದೆ ಈ ವೃತ್ತಿಗೆ ಒಳಗಾಗಿರಬಹುದು. ಆದರೆ ಇತ್ತೀಚಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಯರು ವೇಶ್ಯೆವಾಟಿಕೆ ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಂಡು ಗೌರವಯುತವಾಗಿ ಬದುಕು ನಡೆಸುವಂತೆ ಎಲ್ಲರೂ ಪ್ರೋತ್ಸಾಹಿಸಬೇಕು. ಇದು ಕಷ್ಟವಾದರೂ ಶಕ್ತಿ ಮೀರಿ ಪ್ರಯತ್ನಿಸಬೇಕು. ಇತ್ತೀಚಿಗೆ ವೇಶ್ಯಾವಾಟಿಕೆ ಎನ್ನುವುದು ಬೃಹತ್ ಉದ್ಯಮವಾಗಿ ರೂಪಗೊಂಡಿದ್ದು, ಇದರಲ್ಲಿ ಗೂಂಡಾಗಳು, ಮಾಫಿಯಾ ಎಲ್ಲವೂ ಇವೆ. ಈ ವ್ಯವಸ್ಥೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸುವ ಕೆಲಸ ನಡೆಯಬೇಕಿದೆ ಎಂದರು.
ಹೈಕೊರ್ಟ್ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಪ್ಪಳ ಪ್ರಧಾನ ಸತ್ರ ನ್ಯಾಯಾಧೀಶ ಶ್ರೀಕಾಂತ ಬಬ್ಬದಿ, ಬಳ್ಳಾರಿ ಜಿಲ್ಲಾ ನ್ಯಾಯಾಧೀಶ ವಿಶ್ವೇಶ್ವರ ಭಟ್, ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ, ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಪಾಟೀಲ್ ಸಿದ್ದಾರೆಡ್ಡಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕ ಮೋಹನ ಶ್ರೀಪಾದ ಸಂಕೊಳ್ಳಿ ಅತಿಥಿಗಳಾಗಿ ಭಾಗವಹಿಸಿದ್ದರು.
ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಸಂವೇದನಾ ಯೋಜನಾ ನಿರ್ದೇಶಕ ಡಾ. ಶ್ರೀನಾಥ್ ಮದ್ದೂರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಾಲಸುಬ್ರಹ್ಮಣ್ಯ ನಿರೂಪಿಸಿದರು. ಶಿಬಿರದಲ್ಲಿ ನ್ಯಾಯಾಧೀಶರು, ವಕೀಲರು, ನಿರ್ಲಕ್ಷಿತ ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.