ಕೈ ಕಡೆ ವಾಲಿದ ಹರ್ಷವರ್ಧನ: ಜೆಡಿಎಸ್‌ನಲ್ಲಿ ತಳಮಳ
ಕೊಟ್ಟೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ದೊರಕಿರುವ ಹಂತದಲ್ಲಿ ಜೆಡಿಎಸ್ ಶಾಸಕ ಎಸ್. ಭೀಮಾನಾಯ್ಕ ಮತ್ತು ಪ್ರಭಾವಿ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ನಡುವೆ ಮುನಿಸು ಉಂಟಾಗಿದ್ದು, ಹರ್ಷವರ್ಧನ್ ಕಾಂಗ್ರೆಸ್ ಮರು ಸೇರ್ಪಡೆಯಾಗಲು ಮುಂದಾಗಿದ್ದಾರೆ. ಇದು ಜೆಡಿಎಸ್‌ನಲ್ಲಿ ದೊಡ್ಡ ಮಟ್ಟದ ಕಂಪನಕ್ಕೆ ಕಾರಣವಾಗಿದೆ.
ಮಾರ್ಚ್ 3ರಂದು ನಡೆದ ಕೊಟ್ಟೂರು ಹರಿಹರ ರೈಲು ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಎಂ.ಎಂ.ಜೆ. ಹರ್ಷವರ್ಧನ್ ಪಾಲ್ಗೊಂಡಿದ್ದು ಶಾಸಕ ಎಸ್. ಭೀಮಾನಾಯ್ಕ ಮುನಿಸಿಗೆ ಪ್ರಮುಖ ಕಾರಣವಾಗಿದೆ. ಆ ಗಳಿಗೆಯಿಂದ ಇಬ್ಬರ ನಡುವಿನ ಮುನಿಸು ತಿಳಿಗೊಂಡಿಲ್ಲ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಜಿಲ್ಲಾ ಕಾಂಗ್ರೆಸ್ ಗ್ರಾಮೀಣಾಧ್ಯಕ್ಷ ಎಂ.ಪಿ. ರವೀಂದ್ರ, ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಅವರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿ ನಿರಂತರ ಸಂಪರ್ಕ ಬೆಳೆಸಿದ್ದಾರೆ. ಹರ್ಷವರ್ಧನ್ ಸಹ ಕಾಂಗ್ರೆಸ್ ಸೇರುವುದನ್ನು ಖಾತರಿಪಡಿಸಿದ್ದಾರೆ.
ಪ್ರಭಾವ: ಎಂ.ಎಂ.ಜೆ. ಹರ್ಷವರ್ಧನ್ ಕೊಟ್ಟೂರು ಭಾಗದಲ್ಲಿ ಪ್ರಬಲ ನಾಯಕ. ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಬೆಂಬಲಿಗ 20 ಜನರಿಗೆ ಕಾಂಗ್ರೆಸ್ ಪಡೆದು 14 ಜನರನ್ನು ಆಯ್ಕೆ ಮಾಡಲು ಶ್ರಮಿಸಿದ್ದರು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಧೋರಣೆಗೆ ಬೇಸತ್ತು ಮತ್ತು ಎಸ್. ಭೀಮಾನಾಯ್ಕ ಒತ್ತಾಯಕ್ಕೆ ಮಣಿದು ಜೆಡಿಎಸ್ ಸೇರಿದ್ದರು. ಚುನಾವಣೆಯಯಲ್ಲಿ ಭೀಮಾನಾಯ್ಕ ಗೆಲುವು ಸಾಧಿಸಲು ಪ್ರಮುಖ ಕಾರಣಕರ್ತರಾಗಿದ್ದರು. ಅಂದಿನಿಂದ ಶಾಸಕ ಭೀಮಾನಾಯ್ಕ ಮತ್ತು ಹರ್ಷವರ್ಧನ್ ಜೋಡಿ ಈ ಭಾಗದಲ್ಲಿ ಜನ ಜನಿತವಾಗಿತ್ತು.
ಯಾರ ಪಾಲು?: ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತದಲ್ಲಿ ಎಂ.ಎಂ.ಜೆ. ಹರ್ಷವರ್ಧನ್ ಬೆಂಬಲಿಗ ಸದಸ್ಯರ ಸಂಖ್ಯೆಯೇ ಹೆಚ್ಚಿದೆ. ಈ ಪೈಕಿ ಬಿಎಸ್‌ಆರ್‌ನಿಂದ ಚುನಾಯಿತರಾಗಿದ್ದ ಕುರುಬರ ನಾಗಪ್ಪ ಸಹ ಇದೀಗ ಹರ್ಷವರ್ಧನ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ವಾಸ್ತವ ಹೀಗಿದ್ದರೂ ಶಾಸಕ ಭೀಮಾನಾಯ್ಕ ಪಟ್ಟಣ ಪಂಚಾಯಿತಿ ಆಡಳಿತದ ಚುಕ್ಕಾಣಿ ಜೆಡಿಎಸ್‌ನದ್ದೇ ಎಂದು ಇತ್ತೀಚೆಗೆ ಹೇಳಿರುವುದು ಕುತೂಹಲ ಕೆರಳಿಸಿದೆ. 20 ಸದಸ್ಯ ಬಲದ ಕೊಟ್ಟೂರು ಪಪಂ ಆಡಳಿತದಲ್ಲಿ 13 ಸದಸ್ಯರು ಹರ್ಷವರ್ಧನ್ ನೇತೃತ್ವದ ಕಾಂಗ್ರೆಸ್‌ನಲ್ಲಿ ಗುರುಸಿಕೊಂಡಿದ್ದರೆ, 5 ಸದಸ್ಯರು ಸದ್ಯಕ್ಕೆ ಶಾಸಕ ಭೀಮಾನಾಯ್ಕ ನೇತೃತ್ವದ ಜೆಡಿಎಸ್‌ನಲ್ಲಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಒಟ್ಟಾರೆಯಾಗಿ ಕೊಟ್ಟೂರು ಭಾಗದಲ್ಲಿನ ಈ ದಿಢೀರ್ ಬೆಳವಣಿಗೆ ಸಂಚಲನಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವುದರಲ್ಲಿ ಸಂದೇಹವಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಶ್ರಮಿಸಲು ಈಗಾಗಲೇ ಸಂಪೂರ್ಣ ಒಲವು ತಳೆದಿರುವೆ. ನನ್ನ ಈ ತೀರ್ಮಾನಕ್ಕೆ ಪಪಂ ಬಹುತೇಕ ಸದಸ್ಯರಲ್ಲದೆ ಕೊಟ್ಟೂರು ಭಾಗದ ಗ್ರಾಪಂ, ತಾಪಂ ಸದಸ್ಯರು ಬೆಂಬಲ ವ್ಯಕ್ತಪಡಿಸಿ, ನನ್ನೊಂದಿಗೆ ಕಾಂಗ್ರೆಸ್ ಸೇರಲಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್‌ಗೆ ಬಹುಮತ ಬರುವುದು ಸಾಬೀತಾಗುತ್ತದೆ. ಶಾಸಕ ಭೀಮಾನಾಯ್ಕ ತಾವು ಕಾಂಗ್ರೆಸ್ ಸೇರುವುದಕ್ಕೆ ಪ್ರತಿಕ್ರಿಯಿಸಿ ಶುಭಕೋರಿರುವುದು ಸ್ವಾಗತಾರ್ಹ. ಜನತೆ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

