ಕಾಂಗ್ರೆಸ್ ಬುಡಸಮೇತ ಕಿತ್ತೊಗೆದು ಮೋದಿ ಬೆಂಬಲಿಸಿ
ಹಗರಿಬೊಮ್ಮನಹಳ್ಳಿ: ಶ್ರೀರಾಮುಲು ಸ್ವಾಭಿಮಾನಕ್ಕಿಂತ ನರೇಂದ್ರ ಮೋದಿ ದೇಶದ ಪ್ರಧಾನಿ ಸ್ಥಾನ ಅಲಂಕರಿಸುವುದು ಬಹುಮುಖ್ಯ. ಈ ಅಂಶದ ಮೇಲೆ ಬಿಜೆಪಿ ಸೇರಿದ್ದೇನೆ ಹೊರತು ಬೇರೆ ಯಾವ ಆಸೆ, ಆಕಾಂಕ್ಷೆಗಳಿಗಾಗಿ ಅಲ್ಲ. ಭ್ರಷ್ಟ ಕಾಂಗ್ರೆಸ್ನ್ನು ಬುಡಸಮೇತ ಕಿತ್ತೊಗೆಸೆದು ದೇಶದಲ್ಲಿ ಬದಲಾವಣೆ ಶಕೆ ಆರಂಭಿಸಲು ಬಿಜೆಪಿಗೆ ಕೈಜೋಡಿಸಬೇಕೆಂದು ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಜನತೆಗೆ ಮನವಿ ಮಾಡಿದರು. ಹಗರಿಬೊಮ್ಮನಹಳ್ಳಿ ಪಟ್ಟಣದ ರೈಲ್ವೆ ಗೇಟ್ ಬಳಿಯ ಯುಕೆ ತೋಟದಲ್ಲಿ ಬಿಜೆಪಿ ಸಮಿತಿ ಶನಿವಾರ ರಾತ್ರಿ ಆಯೋಜಿಸಿದ್ದ ಭಾರತ ಗೆಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಮುಲು ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದಕ್ಕಿಂತಲೂ ಇಂದು ಕಾಂಗ್ರೆಸ್ ಅಳ್ವಿಕೆಯಲ್ಲಿ ದೇಶದ ಪರಿಸ್ಥಿತಿ ತೀರಾ ಕಳವಳಕಾರಿ ಹಂತಕ್ಕೆ ತಲುಪಿದೆ. ಕಾಂಗ್ರೆಸ್ನವರ ಮತ ರಾಜಕೀಯ, ದುರಾಡಳಿತದಿಂದಾಗಿ ಇವತ್ತು ರಾಷ್ಟ್ರ ಅನ್ಯ ರಾಷ್ಟ್ರಗಳಿಂದ ಸಾಕಷ್ಟು ಬೇದರಿಕೆಗೆ ನಿತ್ಯ ಗುರಿಯಾಗುತ್ತಿದೆ. ಪಕ್ಕದ ಚೀನಾ ನಮ್ಮ ನೆಲ ಅತಿಕ್ರಮಿಸಿದರೆ ಇತ್ತ ಪಾಕಿಸ್ತಾನ ಭಾರತೀಯ ಯೋಧರ ರುಂಡ ಕಡಿದು ಚೆಲ್ಲಾಡುವ ಮೂಲಕ ನಮ್ಮ ಮೇಲೆ ಅತಿಕ್ರಮಣ ಮಾಡುತ್ತಿದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ನಮ್ಮ ರಾಷ್ಟ್ರ ಕಾಪಾಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಹೀಗಾಗಿ ಇಂದು ನಮ್ಮ ದೇಶವನ್ನು ಸಮರ್ಥವಾಗಿ ಆಳಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಹೀಗಾಗಿ ನಾನು ಬಿಜೆಪಿ ಪರ ನಿಂತಿರುವೆ. ನೀವು ಸಹ ಈಚುನಾವಣೆಯಲ್ಲಿ ನನ್ನ ಪರ ಅಲ್ಲದ್ದಿದ್ದರೂ ದೇಶದ ಸಲುವಾಗಿಯಾದರೂ ಮೋದಿ ಬೆಂಬಲಿಸಲು ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಮತಯಾಚಿಸಿದರು. ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶ್ರೀರಾಮುಲು, ಇತ್ತ ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷದಿಂದಲೂ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಬದಲಿಗೆ ಹಿಂದಿನ ಸರ್ಕಾರ ಜಾರಿಗೊಳಿಸಿದ ಕಾರ್ಯಗಳಿಗೆ ಇಂದಿನ ಶಾಸಕರು, ಮಂತ್ರಿಗಳು ಅಡಿಗಲ್ಲು ಹಾಕುತ್ತಿದ್ದಾರೆ ಹೊರತು ಹೊಸ ಕೆಲಸಗಳು ಜಾರಿಗೊಂಡಿಲ್ಲ ಎಂದರು. ಇದಕ್ಕೂ ಮುನ್ನ ಹೂವಿನಹಡಗಲಿಯಿಂದ ಪಟ್ಟಣಕ್ಕೆ ಆಗಮಿಸಿದ ಶ್ರೀರಾಮುಲು ಅವರನ್ನು ಬಸವ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಅಲ್ಲಿಂದ ವೇದಿಕೆವರೆಗೆ ಪಾದಯಾತ್ರೆ ಮೂಲಕ ರಾಮುಲು ಸಾಗಿಬಂದರು. ಸುಮಾರು ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಸದರಾದ ಜೋಳದರಾಶಿ ಶಾಂತಾ, ಸಣ್ಣಫಕ್ಕಿರಪ್ಪ, ಎಂಎಲ್ಸಿ ಮೃತ್ಯುಂಜಯ ಜಿನಗಾ, ಹಿರಿಯ ಮುಖಂಡರಾದ ಗುತ್ತಿನೂರು ವಿರೂಪಾಕ್ಷಗೌಡ, ರಾಮಲಿಗಂಪ್ಪ, ಗೋನಾಳ ರಾಜಶೇಖರಗೌಡ, ಶ್ರೀನಿವಾಸ ವ್ಯಾಸ್, ಮಾತಾಗ್ಯಾಸ್ ಯರ್ರಿಸ್ವಾಮಿ, ಅಂಗಡಿ ಗವಿಸಿದ್ದಪ್ಪ, ಕಿನ್ನಾಳ ಸುಭಾಷ, ನರೆಗಲ್ ಕೊಟ್ರೇಶ್, ಡಿಶ್ ಮಂಜುನಾಥ, ಎ.ಕೆ. ರಾಮಣ್ಣ, ಸೆರೆಗಾರ ಹುಚ್ಚಪ್ಪ, ಭದ್ರವಾಡಿ ವಿನಾಯಕ, ಎಚ್. ಕೊಟ್ರೇಶ್, ಚನ್ನಬಸವನಗೌಡ ಇತರರು ಭಾಗವಹಿಸಿದ್ದರು. ಪಕ್ಷದ ತಾಲೂಕಾಧ್ಯಕ್ಷ ಕೆ. ರೋಹಿತ್ ಸ್ವಾಗತಿಸಿದರು. ತಾಪಂ ಮಾಜಿ ಅಧ್ಯಕ್ಷ ಪಿ. ಸೂರ್ಯಬಾಬು ನಿರೂಪಿಸಿದರು.
ಶ್ರೀರಾಮುಲು ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದಕ್ಕಿಂತ ಕಾಂಗ್ರೆಸ್ ಅಳ್ವಿಕೆಯಲ್ಲಿ ದೇಶದ ಪರಿಸ್ಥಿತಿ ಹದಗೆಟ್ಟಿದ್ದು, ಕಾಂಗ್ರೆಸ್ನವರ ಮತ ರಾಜಕೀಯ, ದುರಾಡಳಿತದಿಂದಾಗಿ ನಮ್ಮ ರಾಷ್ಟ್ರ ಅನ್ಯ ರಾಷ್ಟ್ರಗಳಿಂದ ಬೆದರಿಕೆಗೆ ನಿತ್ಯ ಗುರಿಯಾಗುತ್ತಿದೆ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ದೇಶವನ್ನು ಕಾಪಾಡಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಹೀಗಾಗಿ ದೇಶ ಸಮರ್ಥವಾಗಿ ಮುನ್ನಡೆಸಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ.
- ಬಿ. ಶ್ರೀರಾಮುಲು,
ಬಳ್ಳಾರಿ ಲೋಕಸಭಾ ಬಿಜೆಪಿ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

