ಪ್ರತಿಭಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟನೆ
ಬಳ್ಳಾರಿ: ದೇಶದ ಭಾವಿ ಪ್ರಜೆಗಳು, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ನಾಗರಿಕರಾಗಬೇಕೆಂದು ಕೊಳ್ಳೇಗಾಲ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಿ. ಮಹಾದೇವ ಹೇಳಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯಪಾನ, ತಂಬಾಕು, ಗುಟ್ಕಾ ಇನ್ನಿತರ ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು. ವಿಎಸ್ಕೆ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಲ್.ಆರ್. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಕುರುಗೋಡು ಕಾಲೇಜಿನ ಪ್ರಾಚಾರ್ಯ ಜಿ.ಆರ್. ವೆಂಕಟೇಶುಲು, ರುಕ್ಮಿಣಮ್ಮ ಚೆಂಗಾರೆಡ್ಡಿ, ಪ್ರಾಚಾರ್ಯ ಬಿ. ಪ್ರಕಾಶ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಪ್ರೊ. ಡಿ. ಗಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಬಿ. ನಾಗರಾಜ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಪ್ರೊ. ಡಿ. ಇಂದಿರಾ ಉಪಸ್ಥಿತರಿದ್ದರು.
ಬೇಸಿಗೆ: ರಂಗಭಾರತಿ ಉದ್ಯಾನ ಆಸರೆ
ಹೂವಿನಹಡಗಲಿ: ಪಟ್ಟಣದಲ್ಲಿ ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ತುತ್ತಾದ ಜನರಿಗೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಆಸೆಯದಂತೆ ಪಟ್ಟಣದಲ್ಲಿ ನಿರ್ಮಿಸಿರುವ ರಂಗಭಾರತಿ ಉದ್ಯಾನ ಆಸರೆಯವಾಗಿದೆ.
ಬಿಸಿಲು ನಾಡು ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗ ಕೊನೆ ತಾಲೂಕು ಹೂವಿನಹಡಗಲಿ ಜನತೆಗೆ ಬೇಸಿಗೆಯಲ್ಲಿ ನೆರಳು ಇಲ್ಲದೇ ಬಿಸಿಲಿನಿಂದ ಮುಕ್ತವಾಗಿಲ್ಲ. ಉದ್ಯಾನಗಳು ನಗರ ಪ್ರದೇಶಗಳ ಜನತೆಗೆ ರಂಗಭಾರತಿ ಪರಿಶುದ್ಧ ಗಾಳಿ ನೀಡುವ ತಾಣವಾಗಿವೆ.
ಬರ ಪರಿಹಾರ ನಿಧಿಯಲ್ಲಿ ನಿರ್ಮಾಣ
ಹೌದು, ಹೂವಿನಹಡಗಲಿ-ಮಂಡ್ಯ ರಾಜ್ಯ ಹೆದ್ದಾರಿ ಹರಪನಹಳ್ಳಿ ರಸ್ತೆ ಮಾರ್ಗದಲ್ಲಿ ರಂಗಭಾರತಿ ಉದ್ಯಾನವನ್ನು ಮಾಜಿ ಡಿಸಿಎಂ ಎಂ.ಪಿ. ಪ್ರಕಾಶ ಆಸೆಯಂತೆ 2006-07ರಲ್ಲಿ ಜಿಲ್ಲಾಧಿಕಾರಿಗಳ ಬರ ಪರಿಹಾರ ನಿಧಿಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ನಿರ್ಮಾಣ ಮಾಡಿದೆ.
ಹಳ್ಳದ ದಂಡೆಯ ಮೇಲಿರುವ ಜಮೀನು ನೀರು ಹರಿದು ಹಾಳಾಗಿ ಹೋಗುತ್ತದೆ, ಇಲ್ಲೊಂದು ಸುಂದರ ಉದ್ಯಾನ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ನೀರು ಹರುವಿಗೆ ಮಣ್ಣು ಸವೆತ ತಡೆಗಟ್ಟಲು ಬಿದಿರು ಗಿಡಗಳನ್ನು ನೆಡಲಾಗಿದೆ.
ವಿದ್ಯಾಭ್ಯಾಸಕ್ಕೆ ಉದ್ಯಾನ ಸಹಕಾರಿ:
ಪಟ್ಟಣದಲ್ಲಿ ಈಗಾಗಲೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಸಾಕಷ್ಟು ನಾನಾ ವಿದ್ಯಾಸಂಸ್ಥೆಗಳು ಶಾಲಾ-ಕಾಲೇಜುಗಳನ್ನು ತೆರೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಮಧ್ಯಾಹ್ನ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಕುಳಿತು ವಿದ್ಯಾಭ್ಯಾಸ ಹಾಗೂ ಊಟ ಮಾಡಲು ಉದ್ಯಾನ ಸಹಕಾರಿಯಾಗಿದೆ.
ಸಂಜೆ ಹೊತ್ತು ತುಸು ನೆಮ್ಮದಿ, ಶಾಂತಿಯಿಂದ ಇರಲು ರಂಗಭಾರತಿಯ ಉದ್ಯಾನದಲ್ಲಿನ ಹಸಿರು ವನ ಕೈ ಬೀಸಿ ಕರೆಯುತ್ತಿದೆ. ಇದರಿಂದ ನಿವೃತ್ತ ನೌಕರರು, ವಿದ್ಯಾರ್ಥಿ ಯುವ ಜನಾಂಗ, ಪ್ರಯಾಣಿಕರು, ಸಾರ್ವಜನಿಕರು ಬಂದು ಈ ಸುಂದರ ಪರಿಸರದಲ್ಲಿ ಕಾಲ ಕಳೆಯುತ್ತಾರೆ.
ಉದ್ಯಾನದಲ್ಲಿ ಸಿಮೆಂಟ್ನಿಂದ ನಾನಾ ರೀತಿಯ ಗೊಂಬೆಗಳು ಸ್ವಾಗತಿಸುತ್ತಿವೆ. ಕೆಲವು ಧಾರ್ಮಿಕ ಭಾವನೆ ಮೂಡಿಸುತ್ತಿವೆ. ನಾನಾ ರೀತಿಯ ಪ್ರಾಣಿಗಳನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ನೋಡುತ್ತಾ ಖುಷಿ, ಸಂತೋಷಪಡುತ್ತಾ ಕಾಲ ಕಳೆಯುತ್ತಾರೆ. ಪುರಸಭೆಯು ಇದರ ನಿರ್ವಹಣೆ ಮಾಡುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಬಿಸಿಲನ ತಾಪದಿಂದ ಮುಕ್ತರಾಗಿ ಶಾಂತಿ, ನೆಮ್ಮದಿಯಿಂದ ಇರಲು ರಂಗಭಾರತಿ ಉದ್ಯಾನಕ್ಕೆ ನೀವು ಬನ್ನಿ, ಆನಂದ ಪಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

