ಬಳ್ಳಾರಿ

ಬಿಕ್ಕಿ ಮರಡಿ ದುರುಗಮ್ಮ ಜಾತ್ರೆ ಇಂದು

Published On :

- ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮೇ 13
ಕೋಳಿಗಳನ್ನು ರಥಕ್ಕೆ ತೂರುವ ವಿಶಿಷ್ಟ ಸಂಪ್ರದಾಯ ಕೊಟ್ಟೂರಿನಲ್ಲಿ ಅಗಿ ಹುಣ್ಣಿಮೆಯ ದಿನವಾದ ಮೇ 14ರಂದು ನಡೆಯಲಿದೆ.
ಇಲ್ಲಿನ ಬಿಕ್ಕಿ ಮರಡಿ ದುರುಗಮ್ಮ ದೇವಿ ರಥೋತ್ಸವದ ಭಕ್ತರು ಜೀವಂತ ಕೋಳಿಗಳನ್ನು ತೂರಿ ದೇವಿಯನ್ನು ಸಂತೃಪ್ತಿಪಡಿಸುವ ಪರಂಪರೆ ಹಲವು ದಶಕಗಳಿಂದ ನಡೆಸಿಕೊಂಡು ಬಂದಿದ್ದಾರೆ.
ರಥೋತ್ಸವಕ್ಕೆ ಬಾಳೆಹಣ್ಣ, ಉತ್ತತ್ತಿ ತೂರುವುದು ಸಾಮಾನ್ಯ ಸಂಪ್ರದಾಯ. ಐತಿಹಾಸಿಕ ಪ್ರಸಿದ್ಧ ಕೊಟ್ಟೂರಿನಲ್ಲಿ ಇಂತಹ ವಿಶಿಷ್ಟ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ದೇವಿ ಜಾತ್ರೆಗಳಲ್ಲಿ ಕುರಿ, ಕೋಳಿ, ಬಲಿಕೊಡುವುದು ಸಾಮಾನ್ಯ. ಆದರೆ ಕೊಟ್ಟೂರಿನಲ್ಲಿ ಪ್ರಾಣಿ ಬಲಿಯಂತಹ ಹಿಂಸೆ ನಡೆಯದೇ ಜೀವಂತ ಕೋಳಿಗಳನ್ನೇ ರಥಕ್ಕೆ ತೂರಲಾಗುತ್ತದೆ.
ಪ್ರತಿ ವರ್ಷದ ಅಗಿ ಹುಣ್ಣಿಮೆಯ ದಿನ ಜರುಗುವ ಬಿಕ್ಕಿಮರಡಿ ದುರುಗಮ್ಮನ ಜಾತ್ರೆ ರಥೋತ್ಸವದಲ್ಲಿ ತೂರುವ ಕೋಳಿಗಳನ್ನು ಸಿಕ್ಕವರು ಖಂಡಿತಾ ಹತ್ಯೆಗೈಯ್ಯುವುದಿಲ್ಲ. ಬದಲಾಗಿ ಮನೆಗೊಯ್ದು ಸಾಕಿ ಸಲುಹಿ ಮತ್ತೇ ಮುಂದಿನ ವರ್ಷಕ್ಕೆ ಸಾಗುವ ರಥೋತ್ಸವಕ್ಕೆ ಈ ಕೋಳಿಗಳನ್ನೇ ತೂರುತ್ತಾ ಬರುತ್ತಾರೆ.
ಕೊಟ್ಟೂರಿನ ಕೆರೆಯ ದಿಬ್ಬದ ಮೇಲೆ ಈ ಬಿಕ್ಕಮರಡಿ ದುರುಗಮ್ಮನ ದೇವಿ ಜಾತ್ರೆ ಜರುಗುವುದು ಕೇವಲ 3 ತಾಸು ಮಾತ್ರ, ಸಂಜೆ 4 ರಿಂದ 7 ಗಂಟೆಯವರೆಗೆ ಜಾತ್ರೆ ನಡೆಯುತ್ತದೆ. ಇಷ್ಟೇ ಅವಧಿಯಲ್ಲಿ ಕೊಟ್ಟೂರು-ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಸೇರಿ ದೇವಿ ದುರುಗಮ್ಮಳ ರಥ ಎಳೆಯುತ್ತಾರೆ. ಹೀಗೆ ರಥ ಎಳೆಯುವಾಗ ಭಕ್ತರು ರಥದ ಮೇಲೆ ಜೀವಂತ ಕೋಳಿಗಳನ್ನು ತೂರುತ್ತಾರೆ.
ರಥೋತ್ಸವಕ್ಕೆಂದೇ ದುರುಗಮ್ಮ ದೇವಿಯು ವಿಗ್ರಹವನ್ನು ಜಾತ್ರೆಯ ದಿನ ಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ. ಉಳಿದ ದಿನಗಳಲ್ಲಿ ಪಟ್ಟಣದ ಇನ್ನೊಂದು ಗುಡಿಯಲ್ಲಿ ಇಡಲಾಗುತ್ತದೆ. ದೇವಿ ರಥವನ್ನು ವೀಕ್ಷಿಸಲು ನವದಂಪತಿಗಳು ತಪ್ಪದೇ ಬರುವುದು ಈ ಭಾಗದಲ್ಲಿ ರೂಢಿಯಲ್ಲಿದೆ. ನವದಂಪತಿಗಳ ಪಾಲಿಗೆ ಈ ರಥೋತ್ಸವ ಅತ್ಯಂತ ಮಹತ್ವದ್ದು. ವಿವಾಹವಾದ ಹೊಸತರಲ್ಲಿ ಈ ರಥೋತ್ಸವದಲ್ಲಿ ಕಳಸವನ್ನು ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಬಹು ವರ್ಷಗಳಿಂದ ನಡೆದುಕೊಂಡು ಪದ್ಧತಿ.
ಜಾತ್ರೆಗೆ ಬಂದವರು ಕೆರೆ ದಂಡೆಯಲ್ಲಿ ತಾವು ತಂದ ಮಂಡಕ್ಕಿ, ಮೆಣಸಿನಕಾಯಿ ಮತ್ತಿತರ ತಿನಿಸುಗಳನ್ನು ತಿಂದು ಕತ್ತಲಾಗುವುದರೊಳಗೆ ವಾಪಸ್ ತೆರಳುತ್ತಾರೆ. ಕೇವಲ 2 ಗಂಟೆಗಳಲ್ಲಿ ಜಾತ್ರೆ ವೈಭವ ಮುಗಿದು ಹೋಗುತ್ತದೆ. ಜಾತ್ರಾ ಅವಧಿಯ ಮುಂಚೆ ಮತ್ತು ನಂತರ ಇಲ್ಲಿ ಯಾರೊಬ್ಬರು ಸುಳಿದಾಡುವುದಿಲ್ಲ. ರಥೋತ್ಸವದ ಮೂರು ದಿನ ದೇವಿಯ ಗುಡಿಯೊಳಗೆ ಯಾರೂ ಹೋಗುವುದಿಲ್ಲ. ಕಾರಣ ಹೋದವರು ರಕ್ತಕಾರಿ ಸಾಯುತ್ತಾರೆ ಎಂಬ ನಂಬಿಕೆ ಈಗಲೂ ಭಕ್ತರಲ್ಲಿದೆ. ದೇವಿಯನ್ನು ಪೂಜಿಸಿಕೊಂಡು ಬಂದಿರುವ ಪಟ್ಟಣದ ವಾಲ್ಮೀಕಿ ಜನಾಗಂದವರು ಈ ಬಗೆಯ ವಿವಿಧ ಬಗೆಯ ಸಾಂದರ್ಭಿಕ ಕಾರಣಗಳನ್ನು ನೀಡುತ್ತಾರೆ. ಒಟ್ಟಾರೆಯಾಗಿ ದೇವಿಯ ಜಾತ್ರಾ ಮಹೋತ್ಸವ ಹಲವು ಕಾರಣಕ್ಕಾಗಿ ವಿಶಿಷ್ಟ ರೀತಿಯಲ್ಲಿ ಭಕ್ತರನ್ನು ಆಕರ್ಷಿಸುವ ತಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.