ಬಳ್ಳಾರಿ

ಎಸ್ಸೆಸ್ಸೆಲ್ಸಿ: ಒಂದು ಸ್ಥಾನ ಏರಿಕೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 13
ಕಳೆದ ಬಾರಿಗಿಂತ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಕೊಂಚ ಪ್ರಗತಿ ಸಾಧಿಸಿದೆ. ಶೇ. 80.55ರಷ್ಟು ಫಲಿತಾಂಶ ಪಡೆದಿದೆ. 2013ರಲ್ಲಿ 77.91ರಷ್ಟು ಫಲಿತಾಂಶವನ್ನು ಪಡೆದಿದ್ದು, 32ನೇ ಸ್ಥಾನದಲ್ಲಿತ್ತು. ಈ ಬಾರಿ 31ನೇ ಸ್ಥಾನವನ್ನು ಪಡೆದಿದೆ.
ಜಿಲ್ಲೆಯಲ್ಲಿ 8120 ವಿದ್ಯಾರ್ಥಿಗಳು, ಪರೀಕ್ಷೆ ಬರೆದಿದ್ದು, ಅದರಲ್ಲಿ  7112 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಬಾಲಕರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿ 3882 ಬಾಲಕರು ಹಾಗೂ 3230 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯ ತಾಲೂಕುಗಳ ಫಲಿತಾಂಶಕ್ಕೆ ಹೋಲಿಕೆ ಮಾಡಿಕೊಂಡರೆ ಕೂಡ್ಲಿಗಿ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ. 89.23ರಷ್ಟು ಫಲಿತಾಂಶ ಪಡೆದಿದ್ದು, ಸಂಡೂರು  ಶೇ. 86.35, ಹಗರಿಬೊಮ್ಮನಹಳ್ಳಿ ಶೇ. 83.03, ಬಳ್ಳಾರಿ ಪಶ್ಚಿಮ ಶೇ. 82.26, ಸಿರುಗುಪ್ಪ ಶೇ. 75.33, ಹೊಸಪೇಟೆ ಶೇ. 74.09, ಬಳ್ಳಾರಿ ಪೂರ್ವ ವಲಯ ಶೇ. 68.59ರಷ್ಟು ಫಲಿತಾಂಶ ಬಂದಿದೆ. ಬಳ್ಳಾರಿ ಪೂರ್ವ ವಲಯ ಅತ್ಯಂತ ಕಡಿಮೆ ಫಲಿತಾಂಶ ಪಡೆದಿದೆ.
ಬಳ್ಳಾರಿಯ ಬಾಲಭಾರತಿ ಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಅನುರಾಧಾ 618 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹೊಸಪೇಟೆ ದೀಪಾಯನ ಶಾಲೆಯ ಎಚ್. ತನುಜಾ ಅವರು 606 ಅಂಕಗಳನ್ನು ಪಡೆದಿದ್ದರೆ, ಬಳ್ಳಾರಿ ಬೆಸ್ಟ್ ಶಾಲೆಯ ಎಚ್.ಎನ್. ಶಿವಶರಣ 605, ಸಿರುಗುಪ್ಪ ಎಸ್‌ಇಎಸ್ ಶಾಲೆಯ ಎಚ್. ಅಕ್ಷತಾ ಜೈನ್ 600 ಅಂಕಗಳನ್ನು ಪಡೆದಿದ್ದಾರೆ. ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಶಾಲೆಯ ಸಚಿನ್ 574, ಬಳ್ಳಾರಿ ಸಂತ ಜೋಸಫ್ ಶಾಲೆಯ ಮೇಘನಾ 569 ಅಂಕಗಳನ್ನು ಪಡೆದಿದ್ದಾರೆ. ಸರ್ಕಾರಿ ಶಾಲೆಯ ಫಲಿತಾಂಶದ ಕಡೆಗೆ ನೋಡಿದರೆ, ಸಿರುಗುಪ್ಪ ತಾಲೂಕು ಕರೂರು ಶಾಲೆಯ ಬಿ. ಅನಿಲ್ ಕುಮಾರ್ 579, ಹಚ್ಚೊಳ್ಳಿ ಪ್ರೌಢಶಾಲೆಯ ಎಸ್.ಕೆ. ರಾಮಚಂದ್ರ 579, ಮರಿಯಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಮೀರ್ ಬಾಷಾ 552 ಅಂಕಗಳನ್ನು ಪಡೆದು ಅತಿ ಹೆಚ್ಚು ಅಂಕ ಪಡೆದ ಪಟ್ಟಿಯಲ್ಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೀರಣ್ಣ ಮತ್ತಿಕಟ್ಟಿ ತಿಳಿಸಿದ್ದಾರೆ.

ಹ.ಬೊ.ಹಳ್ಳಿ: ಶೇ. 83 ಫಲಿತಾಂಶ
ಹಗರಿಬೊಮ್ಮನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿಗೆ ಶೇ. 83.3 ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮನಗೌಡ ತಿಳಿಸಿದ್ದಾರೆ.
2186ರಲ್ಲಿ 1821 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪಟ್ಟಣದ ಕ್ರಿಸ್ತ ಶರಣ ವಿದ್ಯಾಪೀಠದ ಉಡೇದ್ ಪ್ರವೀಣಕುಮಾರ 589 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಪಡೆದಿದ್ದಾನೆ ಎಂದು ಅವರು ತಿಳಿಸಿದರು.
ಎರಡು ಸರ್ಕಾರಿ ಸೇರಿದಂತೆ ಎಂಟು ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ. ತಾಲೂಕಿನ ಗದ್ದಿಕೆರಿ ಸರ್ಕಾರಿ ಪ್ರೌಢಶಾಲೆ, ವರಲಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಸರ್ಕಾರಿ ವಸತಿ ಶಾಲೆ ಹಾಗೂ ಅನುದಾನರಹಿತ ಪಟ್ಟಣದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೋಬಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಡಾ. ಬಿ.ಆರ್. ಅಂಬೇಡ್ಕರ್ ಆಂಗ್ಲ ಮಾಧ್ಯಮ ಶಾಲೆ, ಪ್ರಸಿದ್ಧಿ ಶಾಲೆ, ಕ್ರಿಸ್ತ ಶರಣ ವಿದ್ಯಾಪೀಠ ಹಾಗೂ ತಾಲೂಕಿನ ಶ್ರೀಗುರು ಚರಂತೇಶ್ವರ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಕಂಡ ತಾಲೂಕಿನ ಶಾಲೆಗಳಾಗಿವೆ. ಹಳೇಹಗರಿಬೊಮ್ಮನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆ ಅತ್ಯಂತ ಕಡಿಮೆ ಫಲಿತಾಂಶ ಪಡೆದ (ಶೇ. 25)ಶಾಲೆಯಾಗಿದೆ ಎಂದು ರಾಮನಗೌಡ ತಿಳಿಸಿದರು.
589 ಅಂಕ (ಶೇ.94.24)ಗಳಿಂದ ತಾಲೂಕಿಗೆ ಪ್ರಥಮ ಸ್ಥಾನಗಳಿಸಿರುವ ಕ್ರಿಸ್ತ ಶರಣ ವಿದ್ಯಾಪೀಠದ ಹುಡೇದ್ ಪ್ರವೀಣಕುಮಾರ ಹಾಗೂ ಶೇ. 100 ಫಲಿತಾಂಶ ತಂದಿರುವ ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕರು ಹಾಗೂ ಉತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆವಿಎಂ ನಾಗಭೂಷಣ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಜೊತೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.