ಸ್ವಾಭಿಮಾನಿ ಗೆಲವು ರಾಜಕೀಯ ಭವಿಷ್ಯಕ್ಕೆ ನಾಂದಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 16
ಅಕ್ರಮ ಗಣಿಗಾರಿಕೆ ಕುರಿತಾಗಿ ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಸಚಿವಸ್ಥಾನ ಕಳೆದುಕೊಂಡು, ಮುನಿಸಿಕೊಂಡು ಸ್ವಾಭಿಮಾನಿಯ ನೆಪದಲ್ಲಿ ಬಿಜೆಪಿ ತೊರೆದು, ಪ್ರಾದೇಶಿಕ ಪಕ್ಷ ಹುಟ್ಟು ಹಾಕಿ ಕೈ ಸುಟ್ಟುಕೊಂಡಿದ್ದ ಶ್ರೀರಾಮುಲಿಗೆ ನಿಜಕ್ಕೂ ಈ ಚುನಾವಣೆಯ ಗೆಲವು ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿದೆ.
ಬಿಎಸ್ಆರ್ ಪಕ್ಷದ ಶಾಸಕನಿದ್ದರೂ, ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹೊರಟಿದ್ದ ಶ್ರೀರಾಮುಲಿಗೆ ಚುನಾವಣೆಯ ಗೆಲವು ದೊಡ್ಡ ನಿಟ್ಟುಸಿರು ಬಿಟ್ಟಂತಾಗಿದೆ. ಇನ್ನು ಕೇಂದ್ರದಲ್ಲಿ ಎನ್ಡಿಎಗೆ ಬಹುಮತ ಸಿಕ್ಕಿರುವುದರಿಂದ ಬಿಎಸ್ಆರ್ ತೊರೆದು, ಬಿಜೆಪಿಗೆ ಸೇರಿದ್ದಕ್ಕೂ ಸಾರ್ಥಕವಾಯಿತು ಎನ್ನುವ ಭಾವನೆ ಅವರದ್ಧಾಗಿದೆ.
ಎನ್ಡಿಎ ಸರ್ಕಾರವು ಅಧಿಕಾರಕ್ಕೆ ಬಂದಿರುವುದು ಆಪ್ತಮಿತ್ರನ ಸಂಕಷ್ಟಕ್ಕೆ ನೆರವಾಗುವ ಆಸೆ ಚಿಗುರೊಡೆದಿದೆ. ಸಚಿವ ಸ್ಥಾನದ ಅಧಿಕಾರ ಅನುಭವಿಸಿದ್ದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪಾಳಯಕ್ಕೆ ದಿಢೀರ್ನೆ ಅಧಿಕಾರಿ ಹೋಗಿದ್ದು, ನುಂಗಲಾರದ ತುತ್ತಾಗಿದ್ದು, ಇದರಿಂದಾಗಿಯೇ ಅವರು ಅಕ್ರಮ ಗಣಿಗಾರಿಕೆ ಆರೋಪ, ಸಿಬಿಐ ತನಿಖೆ, ಲೋಕಾಯುಕ್ತ ತನಿಖೆಗಳು ಬೆನ್ನಟ್ಟಿ ಸೋತು ಸೊರಗುವಂತೆ ಮಾಡಿತ್ತು. ಇಂತಹ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅದರಲ್ಲೂ ಬಳ್ಳಾರಿಯ ಕ್ಷೇತ್ರದಲ್ಲಿ ಶ್ರೀರಾಮುಲು ಗೆಲುವು ಸಾಧಿಸಿರುವುದು ಕೇವಲ ಶ್ರೀರಾಮುಲು ಗೆಲುವಲ್ಲ, ಅದು ರೆಡ್ಡಿ ಸಹೋದರರು ಗೆಲವು.
ಸಿಎಂ ಪ್ರಯತ್ನ ಫಲಿಸಲಿಲ್ಲ: ಶತಾಯಗತಾಯವಾಗಿ ಶ್ರೀರಾಮುಲು ಅವರನ್ನು ಸೋಲಿಸುವ ಮೂಲಕ ಅವರ ರಾಜಕೀಯ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಬೇಕೆಂಬ ಕಾಂಗ್ರೆಸ್ ನಿರೀಕ್ಷೆ ಹುಸಿಗೊಂಡಿದೆ. ಈ ಬಾರಿ ಶ್ರೀರಾಮುಲು ಅವರನ್ನು ಸೋಲಿಸಿದರೆ ಮುಂದಿನ ಕೆಲ ವರ್ಷಗಳ ವರೆಗೆ ಕಾಂಗ್ರೆಸ್ ಪ್ರತಿಸ್ಪರ್ಧಿಯೇ ಇಲ್ಲದಂತೆ ಆಗುತ್ತದೆ ಎಂಬ ಆಸೆಗೆ ಲೋಕಸಭೆಯಲ್ಲಿ ಚುನಾವಣೆಯ ಬಿಜೆಪಿ ಗೆಲವು ತಣ್ಣೀರೆರಚಿದೆ. ಕಾಂಗ್ರೆಸ್ನ ಕೆಲಮೊಂದು ನಿರ್ಧಾರಗಳು ಕಾಂಗ್ರೆಸ್ಗೆ ದೊಡ್ಡ ಮುಳುವಾಗಿವೆ.
ಮುಖ್ಯಮಂತ್ರಿಯೇ ಸ್ವತಃ ಬಳ್ಳಾರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮುಖಂಡರ ಸಭೆ ನಡೆಸಿ, ಗೆಲುವಿಗೆ ಶ್ರಮಿಸುವಂತೆ ತಿಳಿಸಿದರೂ, ಸಿದ್ದರಾಮಯ್ಯ ಪ್ರಯತ್ನ ಫಲಿಸಲಿಲ್ಲ. ಇದು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಮೇಲೆ ಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾದರೂಆಶ್ಚರ್ಯವಿಲ್ಲ.
ಜಾತಿ ಲೆಕ್ಕಾಚಾರ ವರ್ಕ್ಔಟ್ ಆಗಿಲ್ಲ: ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಬಳ್ಳಾರಿಯ ಚುನಾವಣೆಯ ಫಲಿತಾಂಶ ಆಧರಿಸಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ ಈ ಬಾರಿ ಬಳ್ಳಾರಿಯ ಮತದಾರರು ರಾಜಕೀಯ ಪಕ್ಷಗಳ ಜಾತಿಯ ಲೆಕ್ಕಾಚಾರ ಸುಳ್ಳು ಮಾಡಿದ್ದಾರೆ. ಸಿದ್ದರಾಮಯ್ಯ ಕುರುಬ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಲ್ಲುತ್ತದೆ, ಮೋದಿ ವಿರೋಧವಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರವಾಗಿ ನಿಲ್ಲುತ್ತದೆ ಎಂಬ ನಿರೀಕ್ಷೆ ಹುಸಿಗೊಂಡಿದೆ. ಜಾತಿ ಲೆಕ್ಕಾಚಾರ ಫಲಿಸಿದ್ದರೆ ಬಿಜೆಪಿಗೆ ಇಷ್ಟು ಬಹುಮತ ಕಷ್ಟಸಾಧ್ಯವಾಗುತ್ತಿತ್ತು. ಆದರೆ ಜಾತಿ ಲೆಕ್ಕಾಚಾರ ಈ ಚುನಾವಣೆಯಲ್ಲಿ ಫಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.
ರೆಡ್ಡಿ, ಶ್ರೀರಾಮುಲು ಸಾಮ್ರಾಜ್ಯದ ಪ್ರಾಬಲ್ಯ: ಜನಾರ್ದನ ರೆಡ್ಡಿ, ಟಿ.ಎಚ್. ಸುರೇಶ್ಬಾಬು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲಿಗೆ ಹೋಗಿರುವುದರಿಂದ ಸಿಬಿಐ ತನಿಖೆ ಬಹುವಾಗಿ ಕಾಡಿತ್ತು. ಅದರಲ್ಲೂ ಶ್ರೀರಾಮುಲು ಬಿಎಸ್ಆರ್ ಪಕ್ಷ ಕಟ್ಟಿದರೂ ರಾಜಕೀಯದಲ್ಲಿ ಯಶಸ್ಸು ಸಾಧಿಸಲಾರದ ಪರಿಸ್ಥಿತಿಯಲ್ಲಿ ಇನ್ನೇನು ರೆಡ್ಡಿ, ಶ್ರೀರಾಮುಲು ಸಾಮ್ರಾಜ್ಯ ಕುಸಿಯುತ್ತಿದೆ ಎನ್ನುವುದರಲ್ಲಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಲೋಕಸಭೆಗೆ ಸ್ಪರ್ಧಿಸಿ ಗೆಲವು ಸಾಧಿಸಿದ್ದು, ರೆಡ್ಡಿ, ಶ್ರೀರಾಮುಲು ಸಾಮ್ರಾಜ್ಯ ಪ್ರಾಬಲ್ಯ ಸಾಧಿಸಲು ಕಾರಣವಾಗಲಿದೆ. ಇನ್ನು ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿರುವವರು ಹೊರಗಡೆ ತರುವ ಕಾನೂನಾತ್ಮಕ ಪ್ರಯತ್ನಗಳಿಗೆ ಶ್ರೀರಾಮುಲು, ಮುಂದಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

