ಬಳ್ಳಾರಿ

ನಂದಿಹಳ್ಳಿಯಲ್ಲಿ ಚಿರತೆ ದಾಳಿ: 9 ಜನರಿಗೆ ಗಾಯ

Published On :

ಹೂವಿನಹಡಗಲಿ: ತಾಲೂಕಿನ ನಂದಿಹಳ್ಳಿ ಹೊರವಲಯದಲ್ಲಿ ಭಾನುವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿದ್ದು, ಓಡಿಸಲು ಯತ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸಹಿತ 9 ಜನರನ್ನು ಗಾಯಗೊಳಿಸಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಮಲ್ಲಿಕಾರ್ಜುನ, ಕೋಗಳಿ ವೀರೇಶ, ಕೋಗಳಿ ವಸಂತ, ಹರಿಜನ ಗಣೇಶ ಹಾಗೂ ಮಲ್ಲನಕೇರಿ ಕೊಟ್ರೇಶ, ವಿ.ಬಿ. ಚಂದ್ರಪ್ಪ, ನಿಂಗಪ್ಪ, ಹರಿಜನ ಬಸವರಾಜ, ನೂರಸಾಬ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ರೈತರ ಕಣದಲ್ಲಿ ಬೆಳಗ್ಗೆ 7ಕ್ಕೆ ಚಿರತೆ ಅವಿತುಕೊಂಡಿದ್ದನ್ನು ಗ್ರಾಮಸ್ಥರು ಕಂಡಿದ್ದಾರೆ. ಅದನ್ನು ಓಡಿಸಲು ಮುಂದಾದಾಗ ಗಾಬರಿಗೊಂಡ ಚಿರತೆ, ಒಬ್ಬನ ಮೇಲೆ ದಾಳಿ ಮಾಡಿ, ಪಕ್ಕದ ಜಮೀನಿನಲ್ಲಿ ಬೆಳೆ ಮಧ್ಯೆ ಬಚ್ಚಿಟ್ಟುಕೊಂಡಿತು.
ಈ ವಿಷಯವನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಿಬ್ಬಂದಿ ಸಕಾಲಕ್ಕೆ ಆಗಮಿಸದ ಕಾರಣ, ಆಕ್ರೋಶಗೊಂಡ ಗ್ರಾಮಸ್ಥರೇ ಚಿರತೆ ಓಡಿಸಲು ಮತ್ತೆ ಮುಂದಾಗಿದ್ದಾರೆ. ಗಾಬರಿಗೊಂಡ ಚಿರತೆ ಗ್ರಾಮದ ಕಡೆಗೆ ನುಗ್ಗಲೆತ್ನಿಸಿ, ಅಡ್ಡ ಸಿಕ್ಕ ಇಬ್ಬರ ಮೇಲೆ ದಾಳಿ ಮಾಡಿತು.
ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಾಡು ಹಂದಿ ಹಿಡಿಯುವ ಬಲೆಯನ್ನು ಜಮೀನು ಸುತ್ತಲೂ ಹಾಕಿ ಬೋನು ಇಟ್ಟಿದ್ದಾರೆ. ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಚಿರತೆ ಹಿಡಿಯುವ ಪ್ರಯತ್ನದಲ್ಲಿದ್ದಾಗ ಮತ್ತೊಬ್ಬನೂ ಗಾಯಗೊಳಿಸಿದೆ. ಸಂಜೆಯಾದರೂ ಚಿರತೆ ಬೋನಿನ ಹತ್ತಿರಕ್ಕೂ ಸುಳಿಯಲಿಲ್ಲ.
ಮತ್ತೆ ಐವರ ಮೇಲೆ ದಾಳಿ: ಸಂಜೆ ಅಗ್ನಿಶಾಮಕ ಸಿಬ್ಬಂದಿ ಚಿರತೆ ಹಿಡಿಯುವ ಪ್ರಯತ್ನವಾಗಿ ಹುಲ್ಲು ಬೆಳೆದಿದ್ದ ಜಮೀನಿಗೆ ನೀರು ಚಿಮುಕಿಸಿ ಚಿರತೆ ಹೊರ ಬರುವಂತೆ ಮಾಡಿದ್ದಾರೆ. ಚಿರತೆ ಹಿಡಿಯಲು ಕಾಡು ಹಂದಿ ಹಿಡಿಯುವ ಬಲೆಯನ್ನು ಜಿಗಿದು ಚಿರತೆ ಪರಾರಿಯಾಗಿದ್ದಲ್ಲದ್ದೇ ಮತ್ತೆ ಅಡ್ಡ ಬಂದ ಐವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಜಮಿನು ಸುತ್ತಮುತ್ತಲೂ ಬಯಲೇ ಇರುವುದರಿಂದ ಗಾಬರಿಗೊಂಡ ಚಿರತೆ ಮತ್ತೆ ಹುಲ್ಲು ಬೆಳೆದಿದ್ದ ಜಮೀನಿಗೆ ಮರಳಿ ಅವಿತುಕೊಂಡಿದೆ.
ಅರಣ್ಯಾಧಿಕಾರಿ ನಿರ್ಲಕ್ಷ್ಯ: ಬೆಳಗ್ಗೆ 7ಕ್ಕೆ ಚಿರತೆ ಇರುವ ಬಗ್ಗೆ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರೂ ಒಬ್ಬ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಅಧಿಕಾರಿಗಳು ಬಾರದೆ ನಿರ್ಲಕ್ಷ್ಯ ತಾಳಿದ್ದಾರೆ. ದೂರವಾಣಿ ಕರೆ ಮಾಡಿದಾಗ ಇಲ್ಲೇ ಇದ್ದೇನೆ, ಈಗ ಬರುತ್ತೇನೆ ಎಂದರು. ಸಂಜೆ 5 ಆದರೂ ಕಾಣಿಸಲೇ ಇಲ್ಲ.
ಹೂವಿನಹಡಗಲಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಲ್ಲಿ ಚಿರತೆ ಹಿಡಿಯುವ ಪರಿಕರಗಳಿಲ್ಲ. ಹೊಸಪೇಟೆ ಅರಣ್ಯ ಇಲಾಖೆಯಿಂದ ಪರಿಕರ ತರಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದರು. ಸಂಜೆ 6 ಗಂಟೆಯಾದರೂ ಹೊಸಪೇಟೆಯಿಂದ ಪರಿಕರ ಬರಲಿಲ್ಲ. ಚಿರತೆ ಹಿಡಿಯುವ ಪ್ರಯತ್ನ ಮುಂದುವರೆದಿತ್ತು.
ಡಿವೈಎಸ್ಪಿ ಆರ್.ಎಸ್. ಪಾಟೀಲ್, ಸಿಪಿಐ ಪ್ರಕಾಶ ರಾಠೋಡ್, ಪಿಎಸ್ಐ ಆಂಜನೇಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.