ಮಾಗಳ-ಅಯ್ಯನಹಳ್ಳಿ ರಸ್ತೆ ಕಳಪೆ
ಹೂವಿನಹಡಗಲಿ: ತಾಲೂಕಿನ ಮಾಗಳ-ಕೆ. ಅಯ್ಯನಹಳ್ಳಿ ರಸ್ತೆ ಅಭಿವೃದ್ಧಿ ನೆಪದಲ್ಲಿ ತಗ್ಗು ಗುಂಡಿಗಳಿಗೆ ಸರಿಯಾಗಿ ಮಣ್ಣು ಹಾಕದೇ ಕಳಪೆ ಕಾಮಗಾರಿ ಮಾಡಿದ್ದರೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕಣ್ಮುಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ 15-20 ವರ್ಷಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಾಗಳ-ಕೆ.ಅಯ್ಯನಹಳ್ಳಿ ಜಿಲ್ಲಾ ಮುಖ್ಯ ರಸ್ತೆಗೆ ಪಂಚಾಯತ್ ರಾಜ್ ಇಲಾಖೆಯಿಂದ ರು. 5 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಟೆಂಡರ್ ಪಡೆದ ಗುತ್ತಿಗೆದಾರರು ಅರೆಬರೆ ಕಾಮಗಾರಿ ಮಾಡಿದ್ದರೂ ಯಾವ ಅಧಿಕಾರಿಗಳು ಪರಿಶೀಲನೆ ಮಾಡದೇ ಬಿಲ್ ಪಾವತಿಸಿದ್ದಾರೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಅನುದಾನಕ್ಕೆ ತಕ್ಕೆಂತೆ ಕಾಮಗಾರಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದು ಕಿ.ಮೀ. ಗೂ ಹೆಚ್ಚು ಜಂಗಲ್ ಕಟಿಂಗ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಸಮರ್ಪಕವಾಗಿ ಮಣ್ಣಿನ ಚರಂಡಿ ನಿರ್ಮಾಣ ಮಾಡಿಲ್ಲ. ರಸ್ತೆ ಪಕ್ಕದಲ್ಲಿನ ಮಣ್ಣು ತೆಗೆದು ತಗ್ಗು ಗುಂಡಿಗಳನ್ನು ಮುಚ್ಚಿದ್ದಾರೆ. ಇದರಿಂದ ರಸ್ತೆ ತುಂಬೆಲ್ಲಾ ಧೂಳುಮಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಬಂದಿರುವ ಅನುದಾನದಲ್ಲಿ 200 ಮೀಟರ್ ಡಾಂಬರೀಕರಣ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗುತ್ತಿಗೆದಾರ ಕೇವಲ 100 ಮೀಟರ್ ಡಾಂಬರೀಕರಣ ಮಾಡಿ ಕೈ ತೊಳೆದುಕೊಂಡಿದ್ದಾರೆ. ತಗ್ಗು ಗುಂಡಿಗಳಿಗೆ ಸರಿಯಾಗಿ ಕಲ್ಲು ಹಾಕದೇ ಮಣ್ಣು ಹಾಕಿದ್ದಾರೆ. ಇದರಿಂದ ರಸ್ತೆ ವಾರದಲ್ಲಿಯೇ ಕಿತ್ತು ಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಆರಂಭದಲ್ಲೇ ಈ ರೀತಿ ಕಳಪೆ ನಡೆಯುತ್ತಿವೆ. ಸರ್ಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೇ ದುರ್ಬಳಕೆ ಮಾಡಿಕೊಂಡಿದ್ದಾರೆ. ರಸ್ತೆ ಅಭಿವೃದ್ಧಿ ಇಲ್ಲದೇ ಕಳೆದ ಒಂದು ವರ್ಷದಿಂದ ಹೂವಿನಹಡಗಲಿ ಸಾರಿಗೆ ಘಟಕವು ಕೆ.ಅಯ್ಯನಹಳ್ಳಿ ಮಾರ್ಗವಾಗಿ ಮಾಗಳ ಗ್ರಾಮಕ್ಕೆ ಬಸ್ಸಿನ ಸೌಕರ್ಯ ನಿಲ್ಲಿಸಿದ್ದಾರೆ. ಇದರಿಂದ ಮಾಗಳ ಗ್ರಾಪಂ ವ್ಯಾಪ್ತಿಯ ಕೆ.ಅಯ್ಯನಹಳ್ಳಿ ಗ್ರಾಮಸ್ಥರಿಗೆ ನಿತ್ಯ ಖಾಸಗಿ ವಾಹನಗಳ ಮೊರೆ ಹೋಗಬೇಕಿದೆ ಎಂದು ಗ್ರಾಮಸ್ಥರು ದೂರಿದರು.
ಸಭೆ ಸಮಾರಂಭಗಳಲ್ಲಿ ದಕ್ಷ, ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ರಸ್ತೆ ಕಳಪೆಯಾಗಲು ಕಾರಣವಾಗಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

