ಬಳ್ಳಾರಿ

ಸಾಂಸ್ಕೃತಿಕ ಸಮುಚ್ಚಯ ಅಭಿವೃದ್ಧಿ ಆರಂಭ

Published On :

- ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 18
ನಗರದ ಗೋವಾ ಮಾದರಿಯ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣೆ ಕೊರತೆಯಿಂದ ಅಕ್ರಮ, ಅನೈತಿಕ ಚಟುವಟಿಕೆಯ ತಾಣವಾಗಿತ್ತು. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಸಮುಚ್ಚಯಕ್ಕೆ ಹೊಸ ರೂಪ ನೀಡಲು ಸಿದ್ಧತೆ ನಡೆಸಿದೆ.
ರು. 1.4 ಕೋಟಿ ವೆಚ್ಚದಲ್ಲಿ 1999ರಲ್ಲಿ ನಿರ್ಮಾಣವಾಗಿದ್ದ ಈ ಸಾಂಸ್ಕೃತಿಕ ಸಮುಚ್ಚಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರು. 81 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಿದೆ. ಗೋವಾ ಮಾದರಿಯ ಸಮುಚ್ಚಯ ತನ್ನ ನಿಜ ಸ್ವರೂಪ ಪಡೆಯುವತ್ತ ಹೆಜ್ಜೆ ಹಾಕುತ್ತಿದೆ.
1999ರಲ್ಲಿ ಅಂದಿನ ಜಿಲ್ಲಾಧಿಕಾರಿ ಗೌರಿ ತ್ರೀವೇದಿ ಗೋವಾಕ್ಕೆ ಭೇಟಿ ನೀಡಿ ಅದೇ ಮಾದರಿಯ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದರು. ಅದರಂತೆ 1999ರಲ್ಲಿ ರು. 1.40 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ 8 ಎಕರೆ ಜಮೀನಿನಲ್ಲಿ ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿ ಸಮುಚ್ಚಯ ನಿರ್ಮಾಣವಾಯಿತು. ಇಲ್ಲಿ ಬಯಲು ರಂಗಮಂದಿರ, ವಿಚಾರ ಸಂಕಿರಣ, ಮ್ಯೂಸಿಯಂ ಇದ್ದರೂ ಸೂಕ್ತ ನಿರ್ವಹಣೆ ಕೊರತೆಯಿಂದ ಅನೈತಿಕ ಚಟುವಟಿಕೆಯ ತಾಣವಾಗಿತ್ತು. ಇಂತಹ ಅವ್ಯವಸ್ಥೆಯನ್ನು ಹೋಗಲಾಡಿಸುವ ಹಲವು ವರ್ಷಗಳ ಪ್ರಯತ್ನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮನಸ್ಸು ಮಾಡಿರುವುದು ಶ್ಲಾಘನೀಯ.
ಜ್ಞಾನಪೀಠ ಪುರಸ್ಕೃತರ ಪ್ರತಿಮೆ: ಸಮುಚ್ಚಯದಲ್ಲಿ ಈಗಿರುವ ವಿಚಾರ ಸಂಕಿರಣದ ಒಳಗಡೆ ಸುತ್ತಲು ರು. 19.89 ಲಕ್ಷ ವೆಚ್ಚದಲ್ಲಿ  ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಅವರ ಸಾಹಿತ್ಯ ಸಾಧನೆಯ ಮಾಹಿತಿ ಸಹ ಅನಾವರಣಗೊಳಿಸಲಾಗುತ್ತದೆ. ಇನ್ನು ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಂಗೂಬಾಯಿ ಹಾನಗಲ್, ಪುಟ್ಟರಾಜ ಕವಿ ಗವಾಯಿಗಳು, ಭೀಮಸೇನ್ ಜೋಷಿ, ಜಿ.ಎಸ್. ಶಿವರುದ್ರಪ್ಪ, ರಾಜ್ಕುಮಾರ್, ಶ್ರೀಕೃಷ್ಣದೇವರಾಯ, ಬಳ್ಳಾರಿಯ ರಾಘವ, ಡಾ. ಜೋಳದರಾಶಿ ದೊಡ್ಡನಗೌಡರು, ಕೋಲಾಚಲಂ ಶ್ರೀನಿವಾಸ, ಧರ್ಮಾವರಂ ರಾಮಕೃಷ್ಣಾಚಾರ್ಯಲು ಪಿಓಪಿ ಪ್ರತಿಮೆ ನಿರ್ಮಾಣ ಮಾಡುವು ಗುರಿ ಹೊಂದಲಾಗಿದೆ.
ಬಯಲು ರಂಗ ಮಂದಿರಕ್ಕೆ ಕಾಯಕಲ್ಪ
ಸಮುಚ್ಚಯದಲ್ಲಿ ಬಯಲು ರಂಗಮಂದಿರವಿದ್ದರೂ ನಿರ್ವಹಣೆ ಕೊರತೆಯಿಂದ ಕೆಲ ಅವ್ಯವಸ್ಥೆಯಿಂದಾಗಿ ಹೆಚ್ಚಾಗಿ ಬಳಕೆಯಾಗುತ್ತಿರಲಿಲ್ಲ. ಇದೀಗ  ರು. 5.84 ಲಕ್ಷ ವೆಚ್ಚದಲ್ಲಿ ಬಯಲು ರಂಗಮಂದಿರ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರತ್ಯೇಕವಾಗಿ ಧ್ವನಿ, ಬೆಳಕಿನ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಅಲ್ಲದೆ ರು. 9.81 ಲಕ್ಷ ವೆಚ್ಚದಲ್ಲಿ ಫುಟ್ಪಾತ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಒಟ್ಟಾರೆ ಬಳ್ಳಾರಿ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಯಾಗಿರುವ ಮಾದರಿ ಸಾಂಸ್ಕೃತಿಕ ಸಮುಚ್ಚಯ ಹೆಸರಿನಂತೆ ಮಾದರಿಯಾಗಲು ಹೊರಟಿರುವುದು ಸಂತೋಷದ ಸಂಗತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.