ಬಳ್ಳಾರಿ

ಅರೆ ವೈದ್ಯಕೀಯ ಪೂರಕ ಪರೀಕ್ಷೆ ನಿಷೇಧಾಜ್ಞೆ ಜಾರಿ

Published On :

ಬಳ್ಳಾರಿ: ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭವಾಗಿರುವ ಅರೆ ವೈದ್ಯಕೀಯ ಮಂಡಳಿ ಪೂರಕ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.    
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ಪರೀಕ್ಷೆಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ನಡೆಸುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ನಗರದ ವಿಮ್ಸ್ ಕಾಲೇಜು ಹಾಗೂ ಹೊಸಪೇಟೆ ಸಂಕ್ಲಾಪುರ ತಾಂಡದಲ್ಲಿರುವ ಟಿ.ಎಂ.ಎ.ಇ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಮೇ 29ರವರೆಗೆ  ಸದರಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಎಲ್ಲ ಜರಾಕ್ಸ್ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಲಾಗಿದೆ.  
ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿ ಶಸ್ತ್ರ, ಬಡಿಗೆ, ಬರ್ಚಿಗದೆ, ಬಂದೂಕು, ಚೂರಿ ಕೋಲು ಅಥವಾ ಸ್ಫೋಟಕ ವಸ್ತು ಒಯ್ಯುವುದನ್ನು ನಿರ್ಬಂಧಿಸಲಾಗಿದೆ.  ಬಹಿರಂಗವಾಗಿ ಘೋಷಣೆ ಮಾಡುವುದು, ಹಾಡು ಹಾಡುವುದು, ವಾದ್ಯ ಬಾರಿಸುವುದು, ಸನ್ನೆ ಅಥವಾ ನಕ್ಲಿಯ ಪ್ರದರ್ಶನ ಮಾಡುವುದು, ವ್ಯಾಖ್ಯಾನ ಕೊಡುವುದು, ಗುಂಪಾಗಿ ತಿರುಗಾಡುವುದು, ಕಲ್ಲು ಎಸೆಯುವುದು ಮತ್ತಿತರ ಉಲ್ಲಂಘಿಸುವ ಚಟುವಟಿಕೆಗಳನ್ನು ಪ್ರತಿಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಟಕ ಕಲೆ ಉಳಿವಿಗೆ ಯತ್ನಿಸಿ: ಎಸ್ಪಿ ರಾಥೋರ್
ಬಳ್ಳಾರಿ: ದೂರದರ್ಶನ, ಅಂತರ್ಜಾಲ ಕ್ರಾಂತಿಯ ನಂತರ ಜನರಿಂದ ಮರೆಯಾಗುತ್ತಿರುವ ಬಯಲಾಟ, ನಾಟಕ, ಯಕ್ಷಗಾನ ಕಲೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋರ್ ಅಭಿಪ್ರಾಯಪಟ್ಟಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನವೋದಯ ನಾಟ್ಯ ಕಲಾಸಂಘದ ಸಹಯೋಗದಲ್ಲಿ ನಗರದ ರಾಘವಕಲಾ ಮಂದಿರದಲ್ಲಿ ಈಚೆಗೆ ಏರ್ಪಡಿಸಿದ್ದ ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟಕ ಉದ್ಘಾಟಿಸಿ ಮಾತನಾಡಿದರು.
ಡಿವೈಎಸ್ಪಿ ರುದ್ರಮುನಿ ಮಾತನಾಡಿ, ಸಮಾಜದಲ್ಲಿ ಕಲಾವಿದರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ನಾಟಕ ಕ್ಷೇತ್ರಕ್ಕೆ ಸ್ಥಾನಮಾನ ತಂದುಕೊಟ್ಟ ಗುಬ್ಬಿ ವೀರಣ್ಣ, ಬಳ್ಳಾರಿಯ ರಾಘವಾಚಾರ್ಯರು, ಜೋಳದರಾಶಿ ದೊಡ್ಡನಗೌಡ ಅವರಂತಹ ಮಹಾನ್ ಕಲಾವಿದರನ್ನು ನಾವು ಸ್ಮರಿಸಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿದರು. ನಗರ ಡಿವೈಎಸ್ಪಿ  ಟಿ.ಎಸ್. ಮುರುಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿ ರಮೇಶ ಗೌಡ ಪಾಟೀಲ್, ಸಂಸ್ಥೆಯ ಅಧ್ಯಕ್ಷ ದೇವೇಂದ್ರಪ್ಪ, ರಾಮಲಿಂಗಪ್ಪ, ಯಲ್ಲಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.