ಕಾಂಗ್ರೆಸ್ ಹಿನ್ನಡೆಗೆ ಶಿರಾಜಶೇಕ ಕಾರಣ
ಹಗರಿಬೊಮ್ಮನಹಳ್ಳಿ: ಬಿಎಸ್ಸಾರ್ ಮುಖಂಡ, ಮಾಜಿ ಶಾಸಕ ಸಿರಾಜ್ ಶೇಕ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೆ ಲೋಕಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಲು ಕಾರಣ ಎಂದು ಹಗರಿಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಆರೋಪಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಬಳಿ ಇರುವ ಶಾಸಕ ಅನಿಲ ಫಾರಂ ಹೌಸ್ನಲ್ಲಿ ಬ್ಲಾಕ್ ಕಾಂಗ್ರೆಸ್ ಆತ್ಮಾವಲೋಕನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ಗೆ ದ್ರೋಹ ಬಗೆದು ಬಿಜೆಪಿ, ಬಿಎಸ್ಸಾರ್ ಪಕ್ಷಗಳಿಗೆ ಗುಳೆ ಹೋಗಿಬಂದಿದ್ದ ಸಿರಾಜಶೇಕ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ಇಡೀ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಒಕ್ಕೂರಲಿನಿಂದ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆಯೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಅವರು ಪಕ್ಷಕ್ಕೆ ಬಂದ ಮೇಲೆ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿ ಅದು ಮತದಾನದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಿತು. ಹೀಗಾಗಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಈ ಕ್ಷೇತ್ರದಲ್ಲಿ ಭಾರಿ ಮತಗಳ ಹಿನ್ನಡೆ ಉಂಟಾಯಿತು ಎಂದು ದೂರಿದರು.
ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾದ ಈ ಎಲ್ಲ ಅಂಶಗಳನ್ನು ವರದಿ ರೂಪದಲ್ಲಿ ಜಿಲ್ಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುವೆ ಎಂದು ಸಭೆಯಲ್ಲಿ ಹೇಳಿದರು. ಸಭೆಯಲ್ಲಿ ತಾಪಂ ಸದಸ್ಯ ಎಂ.ಎಂ. ಶಿವಕುಮಾರ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಎಚ್.ಎ. ಕೊಟ್ರೇಶ್, ಎಪಿಎಂಸಿ ಸದಸ್ಯ ಬಾಲಕೃಷ್ಣಬಾಬು, ಪಂಚಾಯ್ತಿ ಸದಸ್ಯರಾದ ಪವಾಡಿಹನುಮಂತಪ್ಪ, ವಿ. ಹನುಮಂತಪ್ಪ, ದಾದಮ್ಮನವರ ರಾಜಪ್ಪ, ಪಕ್ಷದ ಮುಖಂಡರಾದ ಬಾರಿಕರ ಬಾಪೂಜಿ, ಬುಡ್ಡಿ ಬಸವರಾಜ, ಪತ್ರೇಶ ಹಿರೇಮಠ್, ಎಚ್.ಎಂ. ನಾಗರಾಜ, ಅಂಕಸಮುದ್ರ ಉಮೇಶ, ವೆಂಕಟೇಶ, ಭೋವಿಶಾಂತಪ್ಪ ಸೇರಿದಂತೆ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

