ಗದಗ

ಹ್ಯಾಟ್ರಿಕ್ ಸಾಧನೆಗೆ ಬಂಡಿ ತಾಲೀಮು

Published On :

ಕನ್ನಡಪ್ರಭ ವಾರ್ತೆ, ರೋಣ, ಏ. 1  
ರೋಣ ವಿಧಾನಸಭೆ ಚುನಾವಣೆಯು ಪ್ರತಿ ಬಾರಿಯಂತೆ ಈ ಬಾರಿಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡುವ ಸಂಭವ ಹೆಚ್ಚಾಗಿದ್ದು, ಹಾಟ್ರಿಕ್ ಸಾಧಿಸಲು ಸಚಿವ ಕಳಕಪ್ಪ ಬಂಡಿ ಕಸರತ್ತು ನಡೆಸಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್.ನ ಮಾಜಿ ಶಾಸಕ ಜಿ.ಎಸ್. ಪಾಟೀಲ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಸಾರಿ ಜೆಡಿಎಸ್ ಪೈಪೋಟಿ ಒಡ್ಡಿದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಜೆಡಿಎಸ್.ನಿಂದ ಹೇಮಗಿರೀಶ ಹಾವಿನಾಳ ಸ್ಪರ್ಧಿಸಲಿದ್ದಾರೆ. ಇನ್ನೂ ಬಿಸ್ಸಾರ್, ಕೆಜೆಪಿ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಈ ಬಾರಿ ರಾಣಿ ಚನ್ನಮ್ಮ ಪಾರ್ಟಿ, ಬಿಎಸ್.ಪಿ, ಕರ್ನಾಟಕ ಮಕ್ಕಳ ಪಕ್ಷ, ಸಂಯುಕ್ತ ಜನತಾದಳ, ಲೋಕ ಜನತಾ ಶಕ್ತಿ, ಸರ್ವ ಜನತಾ ಪಕ್ಷ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಕೆಲವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ.  ರೋಣ ಕ್ಷೇತ್ರವು ಇಲ್ಲಿವರೆಗೆ 13 ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದು, 7 ಬಾರಿ ಕಾಂಗ್ರೆಸ್ ಗೆದ್ದರೆ, ಒಂದು ಬಾರಿ ಸಮಾಜವಾದಿ ಪಕ್ಷ, ಎರಡು ಬಾರಿ ಜನತಾ ಪಕ್ಷ, ಒಂದು ಬಾರಿ ಜನತಾ ದಳ ಮತ್ತು ಎರಡು ಬಾರಿ ಬಿಜೆಪಿ ಜಯಭೇರಿ ಬಾರಿಸಿದೆ. ರೋಣ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಜನಮನ್ನಣೆ ದೊರೆಯುತ್ತದೆಯೋ ಆ ಪಕ್ಷವೇ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ವಿಶೇಷವಾಗಿದೆ. ಹಾಗಾದರೆ 14ನೇ ವಿಧಾನಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾವ ರೀತಿ ಕಸರತ್ತು ನಡೆಯುತ್ತದೆ ಕುತೂಹಲ ಮೂಡಿಸಿದೆ.
ಗದಗ ಜಿಲ್ಲೆಯಲ್ಲಿಯೇ ರೋಣ ಕ್ಷೇತ್ರ ದೊಡ್ಡದಾಗಿದ್ದು, ಹಲವರ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸಿದ ಕ್ಷೇತ್ರ ಎಂಬ ಹಿರಿಮೆ ಇದಕ್ಕಿದೆ. ಕ್ಷೇತ್ರದಲ್ಲಿ 2008ರ ವರೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಆಯಾ ಕಾಲಘಟ್ಟದಲ್ಲಿ ಉದಯಿಸಿದ ಜನತಾ ಪರಿವಾರದ ಪಕ್ಷಗಳಲ್ಲೇ ನೇರ ಸ್ಪರ್ಧೆ ಏರ್ಪಟ್ಟಿದೆ.
2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ರೋಣ, ಮುಂಡರಗಿ ಮತ್ತು ಗದಗ ವ್ಯಾಪ್ತಿಯಲ್ಲಿನ ಹಳ್ಳಿಗಳನ್ನು ಕ್ಷೇತ್ರ ಒಳಗೊಂಡಿದೆ. ರೋಣ ತಾಲೂಕಿನ ರೋಣ, ಗಜೇಂದ್ರಗಡ ಮತ್ತು ನರೇಗಲ್ ಪಟ್ಟಣ ಸೇರಿದಂತೆ ತಾಲೂಕಿನ 65 ಹಳ್ಳಿಗಳು, ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ 28 ಹಳ್ಳಿಗಳು ಮತ್ತು ಗದಗ ತಾಲೂಕಿನ 5 ಹಳ್ಳಿಗಳು ಸೇರಿದಂತೆ ರೋಣ ಮತಕ್ಷೇತ್ರ 98 ಹಳ್ಳಿಗಳನ್ನು ಒಳಗೊಂಡಿದೆ. ಒಟ್ಟು 1,88,449 ಮತದಾರರಿದ್ದಾರೆ. ಇದರಲ್ಲಿ 96,415 ಪುರುಷ ಹಾಗೂ 92,034 ಮಹಿಳಾ ಮತದಾರರಿದ್ದಾರೆ.    
ಮತಕ್ಷೇತ್ರ ಇತಿಹಾಸ: 1957ರಿಂದ 1967ರ ಅವಧಿಯಲ್ಲಿನ 3 ಚುನಾವಣೆಯಲ್ಲಿ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಶಾಸಕರಾಗಿ ಆಯ್ಕೆ. ನಂತರ 2 ವರ್ಷದ ಅವಧಿಗೆ ಸಮಾಜವಾದಿ ಪಕ್ಷದಿಂದ ಹೊಸಳ್ಳಿಯ ನೀಲಗಂಗಯ್ಯ ಪೂಜಾರ, 1972ರಲ್ಲಿ ಎ.ವಿ. ಪಾಟೀಲ, 1978ರಲ್ಲಿ ಕಾಂಗ್ರೆಸ್.ನಿಂದ ವೀರಣ್ಣ ಮತ್ತಿಕಟ್ಟಿ, 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಜ್ಞಾನದೇವ ದೊಡ್ಡಮೇಟಿ, 1989ರಲ್ಲಿ ಕಾಂಗ್ರೆಸ್.ನಿಂದ ಜಿ.ಎಸ್. ಪಾಟೀಲ, 1994ರಲ್ಲಿ ಜನತಾದಳದಿಂದ ಶ್ರೀಶೈಲಪ್ಪ ಬಿದರೂರ, 1999ರಲ್ಲಿ ಮತ್ತೆ ಜಿ.ಎಸ್.ಪಾಟೀಲ ಆಯ್ಕೆಯಾಗಿದ್ದಾರೆ. 2004 ಮತ್ತು 2008ರಲ್ಲಿ ಬಿಜೆಪಿಯಿಂದ ಕಳಕಪ್ಪ ಬಂಡಿ ಆಯ್ಕೆ, ಬಳಿಕ ಶೆಟ್ಟರ್ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾದರು. ಅಂದಾನಪ್ಪ ದೊಡ್ಡಮೇಟಿ 3 ಬಾರಿ ಶಾಸಕರಾಗಿ ಮೊದಲ ಸ್ಥಾನ ಹೊಂದಿರುವುದಲ್ಲದೇ  1967ರಲ್ಲಿ ಸಣ್ಣ ನೀರಾವರಿ ಮತ್ತು ಸಾತಂತ್ರ್ಯ ಯೋಧರ ಪಿಂಚಣಿ ರಾಜ್ಯ ಸಚಿವರಾಗಿದ್ದು, ರೋಣದ ಇತಿಹಾಸದಲ್ಲಿಯೇ ಮೊದಲ ಬಾರಿ ಸಚಿವರಾದ ಕೀರ್ತಿ ಇವರಿಗೆಸಲ್ಲುತ್ತದೆ.

-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.