ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮ: ಪಾಂಡುರಂಗ ನಾಯಕ
ಕನ್ನಡಪ್ರಭ ವಾರ್ತೆ, ಗದಗ, ಏ. 2
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವಾಪ್ತಿಯಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವ ಉದ್ಧೇಶದಿಂದ ಜಿಲ್ಲಾದ್ಯಂತ ಅಕ್ರಮ ಸಾರಾಯಿ ಮಾರಾಟ, ಬಾಡೂಟ, ಹಣ ಹಂಚುವದು, ಆಮಿಷವೊಡ್ಡುವುದರ ಮೇಲೆ ನಿಗಾವಹಿಸಲಾಗಿದ್ದು, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಸಮಿತಿ ರಚಿಸಲಾಗಿದೆ ಎಂದರು.
29 ಜನರ ಬಂಧನ: ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಏಪ್ರಿಲ್ 1 ರವರೆಗೆ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ 29 ಜನರನ್ನು ಪೊಲೀಸರು ಬಂಧಿಸಿ, ಅವರ ವಿರುದ್ಧ ಒಟ್ಟು 22 ಕೇಸ್ ದಾಖಲಿಸಿದ್ದಾರೆ. ಬಂಧಿತರಿಂದ 529 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪರವಾಗಿ ಬರೆಯುವ ಹಿತಾಸಕ್ತಿ ಸುದ್ದಿ (ಪೇಡ್ ನ್ಯೂಜ್) ಮೇಲೆ ನಿಗಾವಹಿಸಲು ದೃಶ್ಯ ಮಾಧ್ಯಮ, ಶ್ರವಣ ಮಾಧ್ಯಮ ಮತ್ತು ಮುದ್ರಣ ಮಾಧ್ಯಮ ಕೈಗೊಳ್ಳುವ ಪ್ರಚಾರಗಳನ್ನು ಪರಿಶೀಲಿಸಲು ಹಾಗೂ ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಮಿಡಿಯಾ ಸರ್ಟಿಫೀಕೆಟ್ ಆಂಡ್ ಮಾನಿಟರಿಂಗ್ ಕಮಿಟಿ ರಚಿಸಲಾಗಿದೆ. ಈ ಸಮಿತಿ ಎಲ್ಲವನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಮತದಾನಕ್ಕೆ ಆದ್ಯತೆ: ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನದಲ್ಲಿ ಮತದಾರರು ಭಾಗವಹಿಸುವಿಕೆ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಕಮಿಟಿ ರಚಿಸಲಾಗಿದೆ. ಮಾದರಿ ನೀತಿ ಸಂಹಿತೆ ಅನುಷ್ಠಾನ ಸಮಿತಿ, ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಸಂಚಾರಿ ದಳ, ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಸಮಿತಿ, ಅಭ್ಯರ್ಥಿಗಳು ಸಲ್ಲಿಸುವ ಚುನಾವಣಾ ಲೆಕ್ಕ ಪರಿಶೀಲನಾ ತಂಡ ಹಾಗೂ ಅಭ್ಯರ್ಥಿಗಳ ಖರ್ಚಿನ ಬಗ್ಗೆ ನಿಗಾವಹಿಸಲು ಉಸ್ತುವಾರಿಗಾಗಿ ನೋಡಲ್ ಅಧಿಕಾರಿಗಳ ವಿವರ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದೆ. ಈ ಎಲ್ಲ ಸಮಿತಿಗಳು ಈಗಾಗಲೇ ತಮ್ಮ ಕಾರ್ಯವನ್ನು ಪ್ರಾರಂಭಿಸಿವೆ ಎಂದರು.
10 ಜನರ ಬಂಧನ, ಬಿಡುಗಡೆ: ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಮತದಾನ ಶಾಂತಿಯುತ ಹಾಗೂ ಮುಕ್ತವಾಗಿ ನಡೆಯುವ ಉದ್ದೇಶದಿಂದ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ಜನರನ್ನು ಬಂಧಿಸಿ, ಅವರಿಂದ ಕಾನೂನು ಪಾಲನೆ ಕುರಿತ ಒಪ್ಪಿಗೆ ಪತ್ರಗಳನ್ನು ಪಡೆದುಕೊಂಡು ಬಿಡುಗಡೆಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಸದಂತೆ ಈಗಾಗಲೇ ಜಿಲ್ಲೆಯಾದ್ಯಂತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ 15 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳನ್ನು ತಪಾಸಣೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದರು. ಜಿಪಂ ಸಿಇಓ ವೀರಣ್ಣ ತುರಮರಿ ಮಾತನಾಡಿ, ಮತದಾರರ ಜಾಗೃತಿ ಕುರಿತು ಅಂಕಿ ಅಂಶಗಳನ್ನು ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

