ಬಿಸಿಲಿನ ತಾಪ್ಕಕೆ ತತ್ತರಿಸಿದ ಜನತೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 7
ರಾಜ್ಯಾದ್ಯಂತ ಚುನಾವಣೆ ಕಾವು ಏರುತ್ತಿರುವುದು ಒಂದೆಡೆಯಾದರೆ, ಮುಂಡರಗಿ ತಾಲೂಕಿನಲ್ಲಿ ಬಿಸಿಲಿನ ಪ್ರತಾಪ ಹೆಚ್ಚುತ್ತಿದ್ದು, ಬೇಸಿಗೆಯ ಈ ಕಡು ಬಿಸಿಲಿನಿಂದಾಗಿ ಜನತೆ ತತ್ತರಿಸಿ ಹೋಗಿದ್ದಾರೆ.
ನಿತ್ಯ ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗುವ ಬಿಸಿಲು ಸಂಜೆ 6 ಗಂಟೆಯವರೆಗೂ ನಿಲ್ಲುವುದಿಲ್ಲ. ಹೊಲ, ಗದ್ದೆಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರು, ರೈತರು, ವೃದ್ಧರು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ಸುಡು ಬಿಸಿಲಿನಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಬಿಸಿಲಿನ ತಾಪದಿಂದ ಕಂಗೆಟ್ಟ ಜನತೆ ಬೇವಿನಮರ, ಹೊಂಗೆಮರ, ಮಾವಿನ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಮ್ಮಿಗಿ, ಕಕ್ಕೂರ, ಶಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಮುಷ್ಟಿಕೊಪ್ಪ, ಗುಮ್ಮಗೋಳ, ವಿಠಲಾಪುರ, ಕೊರ್ಲಹಳ್ಳಿ, ಬಾಗೇವಾಡಿ, ಮುರುಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಜನತೆ ದೇವಸ್ಥಾನಗಳಿಗೆ ತೆರಳಿ ಅಲ್ಲಿಯೇ ಮಲಗಿಕೊಂಡು, ಕುಳಿತು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ.
ನೀರಿನ ಅರವಟಿಗೆಗಳಿಲ್ಲ: ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗಿದೆ. ಇದರಿಂದಾಗಿ ಅನೇಕ ಸಾರ್ವಜನಿಕರು ಕುಡಿಯುವುದಕ್ಕಾಗಿ ಶುದ್ಧ ನೀರನ್ನು ಅಲ್ಲಲ್ಲಿ ಮಾರಾಟ ಮಾಡುತ್ತಿರುವ ಜಾಗೆಗೆ ಹೋಗಿ ತೆಗೆದುಕೊಂಡು ಬರುತ್ತಿದ್ದಾರೆ. ಈ ಹಿಂದೆ ಬೇಸಿಗೆ ಬಂದರೆ ಸಾಕು ಮುಂಡರಗಿ ಪಟ್ಟಣದಲ್ಲಿ ಅನೇಕ ಸಂಘ-ಸಂಸ್ಥೆಗಳು, ದೊಡ್ಡ ದೊಡ್ಡ ವ್ಯಾಪಾರಸ್ಥರು ಹಾಗೂ ಪುರಸಭೆಯವರು ಅಲ್ಲಿಲ್ಲಿ ಕುಡಿಯುವ ನೀರಿಗೆ ಅರವಟಿಗೆಗಳನ್ನು ಪ್ರಾರಂಭಿಸುತ್ತಿದ್ದರು. ಆದರೆ ಈ ಬಾರಿ ಎಲ್ಲಿಯೂ ಒಂದು ಅರವಟಿಗೆಗಳಿಲ್ಲ. ಇದರಿಂದಾಗಿ ಕುಡಿಯುವ ನೀರಿಗಾಗಿ ಜನತೆ ಪರದಾಡುವಂತಾಗಿದೆ. ತಹಸೀಲ್ದಾರ್ ಕಚೇರಿ, ಪುರಸಭೆ, ತಾಲೂಕು ಪಂಚಾಯ್ತಿ, ಕೃಷಿ ಇಲಾಖೆ, ಎಪಿಎಂಸಿ, ಪೊಲೀಸ್ ಠಾಣೆ ಹಿಗೆ ಹೆಚ್ಚು ಜನ ನಿಬಿಡ ಪ್ರದೇಶಗಳಲ್ಲಿ ಪುರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ತಂಪು ಪಾನೀಯಗಳಿಗೆ ಮೊರೆ: ತಮ್ಮ ನಿತ್ಯದ ವ್ಯಾಪಾರ, ವಹಿವಾಟಿಗಾಗಿ, ಬ್ಯಾಂಕ್ ವ್ಯವಹಾರಕ್ಕಾಗಿ, ಸಂತೆಗಾಗಿ ಪಟ್ಟಣಕ್ಕೆ ಆಗಮಿಸುತ್ತಿರುವ ಅನೇಕ ಗ್ರಾಮಗಳ ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಬಿಸಿಲಿನ ಪ್ರತಾಪದಿಂದ ದೇಹ ತಂಪಾಗಿಸಿಕೊಳ್ಳಲು ಮಾರುಕಟ್ಟೆಯಲ್ಲಿನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ.
ವರ್ಷ ಪೂರ್ತಿ ಅಲ್ಪ ಸ್ವಲ್ಪ ವ್ಯಾಪಾರದಲ್ಲಿಯೇ ದಿನ ಕಳೆಯುವ ತಂಪು ಪಾನೀಯ ಅಂಗಡಿಗಳ ಮಾಲೀಕರಿಗೆ ಬೇಸಿಗೆಯ ಈ ದಿನಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆದಿದೆ. ಅಲ್ಲದೆ ಪಟ್ಟಣದಲ್ಲಿ ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣಿನ ವ್ಯಾಪಾರವೂ ಭರದಿಂದ ಸಾಗಿದೆ.
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

