ಇಂದು ದುರ್ಗಾದೇವಿಗೆ ಕುಂಭ ಜಲಾಭಿಷೇಕ
ಶರಣು ಸೊಲಗಿ
ಮುಂಡರಗಿ: ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ದುರ್ಗಾದೇವಿಗೆ ಪ್ರತಿವರ್ಷ ಯುಗಾದಿ ಅಮಾವಾಸ್ಯೆಯಂದು (ಏ. 10) ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದ ತುಂಗಭದ್ರಾ ನದಿ ನೀರಿನಿಂದ 101 ಕುಂಭ ಜಲಾಭಿಷೇಕ ನೆರವೇರಲಿದೆ.
ಈ ಪದ್ಧತಿಗೆ 200 ವರ್ಷಗಳ ಇತಿಹಾಸವಿದೆ. ಆರಂಭಧಲ್ಲಿ ಕೋಟುಮಚಗಿ ಗ್ರಾಮದ 10-20 ಜನ ಮಣ್ಣಿನ ತತ್ತರಾಣಿ ಒಯ್ದು, ಅದರಲ್ಲಿ ನದಿ ನೀರು ತಂದು ದುರ್ಗಾದೇವಿಗೆ ಜಲಾಭಿಷೇಕ ಮಾಡುತ್ತಿದ್ದರು. ಆಮೇಲೆ ಪಲ್ಲಕ್ಕಿಯಲ್ಲಿ ದುರ್ಗಾದೇವಿಯನ್ನು ಕೂರಿಸಿ, ಕೋರ್ಲಹಳ್ಳಿ ನದಿ ನಡಕ್ಕೆ ತಂದು ಜಲಾಭಿಷೇಕ ಮಾಡಲು ಆರಂಭಿಸಿದರು. ಈಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.
ಯುಗಾದಿ ಅಮಾವಾಸ್ಯೆಗೆ ಎರಡು ದಿನ ಇರುವಾಗ ಈ ಬಾರಿ ಏ. 8ರಂದು ರಾತ್ರಿ 11 ಗಂಟೆಗೆ ಕೋಟುಮಚಗಿ ಗ್ರಾಮಸ್ಥರು 50ಕ್ಕೂ ಹೆಚ್ಚು ಚಕ್ಕಡಿಗಳಲ್ಲಿ ಹಾಗೂ ಕಾಲ್ನಡಿಗೆಯಲ್ಲಿ ಮೆರವಣಿಗೆ ಮಾಡಿ, ಪಾಲಕಿಯಲ್ಲಿ ದುರ್ಗಾದೇವಿಯನ್ನು ಹೊತ್ತು ಕೋರ್ಲಹಳ್ಳಿಗೆ ಬರುತ್ತಾರೆ. ಏ. 9ರಂದು ರಾತ್ರಿಯೆಲ್ಲ ಭಕ್ತರು ಗ್ರಾಮಕ್ಕೆ ಆಗಮಿಸಲಿದ್ದು, ಏ. 10ರಂದು ಜರಗುವ 101 ಕುಂಭಜಲಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಕೋರ್ಲಹಳ್ಳಿಯ ಜಲಾಶಯದಲ್ಲಿ ಸ್ನಾನ ಮಾಡುತ್ತಾರೆ. ಆಮೇಲೆ ದೇವಿಕ ಕಾರ್ಣಿಕ (ಹೇಳಿಕೆ) ಜರುಗಲಿದೆ.
ಉಡಿ ತುಂಬಿಸುವ ಕಾರ್ಯ: ಏ. 10ರಂದು ಮಧ್ಯಾಹ್ನ 2 ಗಂಟೆಗೆ ಸುಡುವ ಬಿಸಿಲಿನಲ್ಲಿ ದೇವಿಯ ಪ್ರಸಾದ ಜರುಗಲಿದೆ. ಸಂಜೆ 4 ಗಂಟೆಗೆ ದುರ್ಗಾದೇವಿ ಪಲ್ಲಕ್ಕಿ ಮೆರವಣಿಗೆ ಕೋರ್ಲಹಳ್ಳಿ ಗ್ರಾಮದಲ್ಲಿ ಸಂಚರಿಸಿ ಉಡಿ ತುಂಬಲಾಗುವುದು. ರಾತ್ರಿ 8 ಗಂಟೆಗೆ ಕೋರ್ಲಹಳ್ಳಿಯಿಂದ ಮೆರವಣಿಗೆ ಹೊರಟು ಏ. 11ರಂದು ಬೆಳಗ್ಗೆ 9 ಗಂಟೆಗೆ ಕೋಟುಮಚಗಿ ಗ್ರಾಮ ಸೇರುತ್ತದೆ. ಅಲ್ಲಿ ಗ್ರಾಮದೇವತೆಗೆ ವಿಶೇಷ ಪೂಜೆ ಜರುಗಲಿದೆ. ಭಕ್ತರು ಬೇವಿನ ಎಲೆ, ಹೂವುಗಳನ್ನು ನೀರಿಗೆ ಹಾಕಿ ಸ್ನಾನ ಮಾಡಿ, ಯುಗಾದಿ ಪಾಡ್ಯ ಆಚರಿಸುತ್ತಾರೆ.
ದುರ್ಗಾದೇವಿ ಹೊಳೆಗೆ ಹೋಗುವ ಕಾರ್ಯಕ್ರಮ ನಮ್ಮ ಅಜ್ಜಂದಿರ ಕಾಲದಿಂದಲೂ ನಡೆಯುತ್ತಿದೆ. ಮೊದಲು ಭಕ್ತರು ಕಡಿಮೆ ಸಂಖ್ಯೆಯಲ್ಲಿ ಇರುತ್ತಿದ್ದರು. ಈಗೀಗ 10 ಸಾವಿರಕ್ಕೂ ಅಧಿಕ ಜನ ಸೇರುತ್ತಾರೆ. ಬೆಂಗಳೂರು, ಬೆಳಗಾವಿ, ಧಾರವಾಡ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳಿಂದಲೂ ಬರುವುದು ವಿಶೇಷ.
ಟ ಎಂ.ಜಿ. ಪಾಟೀಲ, ಮಾಜಿ ಸೈನಿಕ
ಕೋಟುಮಚಗಿ
ಈ ಮೊದಲು ಕಡಿಮೆ ಜನ ಬರುತ್ತಿದ್ದರು. ಈಗ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕೋರ್ಲಹಳ್ಳಿಯಲ್ಲಿ ಎರಡು ದಿನ ಜರಗುವ ಈ ಹಬ್ಬದಲ್ಲಿ ಸ್ಥಳೀಯರೂ ಸಂತಸದಿಂದ ಪಾಲ್ಗೊಳ್ಳುತ್ತಾರೆ. ಬೇರೆ ಊರಿನ ಜನ ಬಂದು ಇಲ್ಲಿ ಹಬ್ಬ ಆಚರಿಸುವುದು ನಮಗೆ ಸಂತೋಷ ತಂದಿದೆ.
ಟ ಸಣ್ಣಭೀಮಪ್ಪ ಕೊಳಲ, ಮದರಸಾಬ ಸಿಂಗನಮಲ್ಲಿ, ನಾಗರಾಜ ಅರ್ಕಸಾಲಿ
ಕೋರ್ಲಹಳ್ಳಿ ಗ್ರಾಮಸ್ಥರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

