ನಾಳೆ ಸುಕ್ಷೇತ್ರ ಸಿಂಗಟಾಲೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 13
ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿರುವ ಕಪ್ಪತಗುಡ್ಡದ ಕೊನೆಯ ಅಂಚಿನ ಸಾಲಿನಲ್ಲಿ ತುಂಗಭದ್ರಾ ನದಿ ದಡದಲ್ಲಿ ನೆಲೆನಿಂತಿರುವ ಸುಕ್ಷೇತ್ರ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಏ. 15ರಂದು ಜರುಗಲಿದೆ.
ವೀರಭದ್ರೇಶ್ವರ ಶಿಲಾ ಮೂರ್ತಿಯನ್ನು ಇಲ್ಲಿಯೇ ಪ್ರತಿಷ್ಠಾಪಿಸಲು ವಿಶಿಷ್ಟ ಹಿನ್ನೆಲೆಯಿದೆ. ಈ ಜಾಗೆಗೆ ಪ್ರತಿದಿನ ಆಕಳು ಬಂದು ಹುತ್ತದ ಮೇಲೆ ಹಾಲು ಎರೆಯುತ್ತಿತ್ತು. ಅದರ ಪಕ್ಕದ ಗವಿಯಲ್ಲಿಯೇ ತಪಸ್ಸು ಗೈಯುತ್ತಿದ್ದ ಸಂತರೊಬ್ಬರು ಈ ಸ್ಥಳದ ಮಹತ್ವವನ್ನರಿತು ಇಲ್ಲಿಯೇ ವೀರಭದ್ರೇಶ್ವರ ಮೂರ್ತಿಯನ್ನು ಸ್ಥಾಪಿಸಿದರೆನ್ನಲಾಗಿದೆ. ಎಡಭಾಗದಲ್ಲಿ ಭದ್ರಕಾಳಮ್ಮನ ದೇವಾಲಯ, ಮಧ್ಯದಲ್ಲಿರುವ ಗವಿಯಲ್ಲಿ ಈಶ್ವರ ಲಿಂಗಗಳಿವೆ. ಈ ಗವಿಯಿಂದ ಕಪ್ಪತ್ತಮಲ್ಲಿಕಾರ್ಜುನ ದೇವಾಲಯದ ಹತ್ತಿರವಿರುವ ಕಾರಿಸಿದ್ಧಪ್ಪನ ಪಡೆಗೆ ಒಳದಾರಿ ಇದೆ. ಸಿದ್ಧಪುರುಷರು ನಡೆದಾಡಿದ ಈ ಭಾಗದಲ್ಲಿ ಶ್ರೀ ವೀರಭದ್ರೇಶ್ವರನು ಭಕ್ತರಿಗೆ ಬೇಡಿದ್ದನ್ನು ಕೊಡುತ್ತಾನೆ ಎನ್ನುವ ಪ್ರತೀತಿ ಇದೆ.
ಜಾತ್ರೆಗೆ ಜನಸಾಗರ
ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಜರುಗುವ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿವರ್ಷ ಜನಸಾಗರ ಹರಿದು ಬರುತ್ತಿದೆ. ಜಾತ್ರೆಯ ಅಂಗವಾಗಿ ಧರ್ಮಸಭೆ, ಜನಜಾಗೃತಿ ಸಭೆ, ಪರಿಸರ ಸ್ನೇಹಿ ಕಾರ್ಯಕ್ರಮ, ಜನಪದ ಕಾರ್ಯಕ್ರಮ, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಗಳನ್ನು ಮಾಡುತ್ತ ಬಂದಿರುವುದು ಇಲ್ಲಿನ ಜಾತ್ರೆಯ ವಿಶೇಷ.
ಪ್ರತಿ ವರ್ಷ ಜಾತ್ರೆಗೆ ಬರುವ ಭಕ್ತರಿಗೆ ವಸತಿಗಾಗಿ ಸಿಂಗಟಾಲೂರು ವೀರಭದ್ರೇಶ್ವರ ಟ್ರಸ್ಟ್ ಕಮಿಟಿಯಿಂದ ವ್ಯವಸ್ಥೆ ಮಾಡಲಾಗುತ್ತದೆ. ಇದೀಗ ಬೇಸಿಗೆಯ ಸಂದರ್ಭವಾಗಿರುವುದರಿಂದ ತುಂಗಭಧ್ರಾ ನದಿಯಲ್ಲಿ ನೀರು ಖಾಲಿಯಾಗಿದ್ದು, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಿಸಲಾಗಿದೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದ್ದಾರೆ.
ಏ 15ರ ಸಂಜೆ 5 ಗಂಟೆಗೆ ಮಹಾರಥೋತ್ಸವ, ಸಂಜೆ 7 ಗಂಟೆಗೆ ಹೊನ್ನಾಳಿಯ ಹಿರೇಕಲ್ಮಠದ ಪುರಪಟ್ಟಾಧ್ಯಕ್ಷರಾದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಕಲಕೇರಿ-ವಿರುಪಾಪುರ ಮಠದ ಮುಧುಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಟ್ರಸ್ಟ್ ಕಮಿಟಿ ಮಾಜಿ ಅಧ್ಯಕ್ಷ ಕೊಟ್ರೇಶ ಅಂಗಡಿ, ಪ್ರೌಢ ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಿ. ಸೀತಾರಾಮರಾಜು ಆಗಮಿಸಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ, ಕೆ.ಎ. ಬಳಿಗಾರ ಮಾತನಾಡಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೊತಬಾಳ ಅರುಣೋದಯ ಕಲಾತಂಡದವರಿಂದ ಹಾಗೂ ಗಂಗಾವತಿಯ ರವಿಕುಮಾರ ಕಾಶಟ್ಟಿ ಹಾಗೂ ಸಂಗಡಿಗರಿಂದ ಜನಪದ ಕಾರ್ಯಕ್ರಮಗಳು ಜರುಗಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡು, ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದ್ದಾರೆ.
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

