ಗದಗ

ಎಚ್ಕೆ ವಿರುದ್ಧ ಒಮ್ಮತದ ಅಭ್ಯರ್ಥಿ?

Published On :

ಕ.ಪ್ರ.ವಾರ್ತೆ  ,  ಗದಗ  ,  ಏ.16
ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಸೇರಿ ಒಮ್ಮತದ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಲು ಗಂಭೀರವಾಗಿ ಚಿಂತಿಸಿದ್ದಾರೆ.
ಮಂಗಳವಾರ ನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ, ಸೋತ ಅಭ್ಯರ್ಥಿಗಳೆಲ್ಲ ಸಭೆ ಸೇರಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಿದ್ದಾರೆ. ರಾಜ್ಯ ನಾಯಕರು ತಮ್ಮ ಹಿತಾಸಕ್ತಿಗಾಗಿ ಪಕ್ಷಗಳನ್ನು ಸ್ಥಾಪಿಸುತ್ತಾ ಹೋದಲ್ಲಿ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಭವಿಷ್ಯ ಮಂಕಾಗುತ್ತದೆ. ಕಾಂಗ್ರೆಸ್ಸೇತರರು ಮತ್ತೊಮ್ಮೆ ಮೂಲೆಗುಂಪಾಗುವ ಸಾಧ್ಯತೆ ಇದೆ. ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಪಕ್ಷಗಳಿಗೆ ಹಾಗೂ ರಾಜ್ಯ ನಾಯಕರಿಗೆ ಪಾಠ ಕಲಿಸಲು ಎಲ್ಲರೂ ನಿರ್ಧರಿಸಿದ್ದಾರೆ.
ಆತಂಕ: ಕಾಂಗ್ರೆಸ್ಸೇತರ ಒಂದು ವರ್ಗವೇ ರಾಜಕೀಯದಲ್ಲಿದೆ. ಆದರೆ ನಾಯಕರ ಕಚ್ಚಾಟ, ಸ್ವ ಹಿತಾಸಕ್ತಿಗಾಗಿ ಅನೇಕ ಮಂದಿ ದೂರವಾಗಿದ್ದಾರೆ. 2008ರ ಚುನಾವಣೆ ಬಳಿಕ ಬಿಜೆಪಿಯಲ್ಲಾದ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ತೀವ್ರ ನೋವುಂಟು ಮಾಡಿದೆ. ಯಡಿಯೂರಪ್ಪ ಮತ್ತು ಶ್ರೀರಾಮುಲು ಪ್ರತ್ಯೇಕ ಪಕ್ಷಗಳನ್ನು ಸ್ಥಾಪಿಸಿ ಅಖಾಡಕ್ಕಿಳಿದಿದ್ದು, ಇದು ಮೂರು ಪಕ್ಷಗಳ ಸೋಲಿಗೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾದರೆ ಕಾಂಗ್ರೆಸ್ಸೇತರ ಕಾರ್ಯಕರ್ತರು ರಾಜಕೀಯದಿಂದ ಶಾಶ್ವತವಾಗಿ ದೂರವಾಗುತ್ತಾರೆ ಎನ್ನುವ ಆತಂಕದಿಂದಲೇ ಈ ಪ್ರಯತ್ನ ನಡೆಯುತ್ತಿದೆ.
ತಂತ್ರಗಾರಿಕೆಯೇ?: ರಾಜ್ಯದಲ್ಲೆಲ್ಲೂ ಇಲ್ಲದ ಈ ಪ್ರಯತ್ನ ಕೇವಲ ಗದಗ ಕ್ಷೇತ್ರದಲ್ಲಿ ಮಾತ್ರ ಏಕೆ ನಡೆಯುತ್ತಿದೆ ಎನ್ನುವ ಜಿಜ್ಞಾಸೆ ಎಲ್ಲರನ್ನೂ ಕಾಡುತ್ತಿದೆ. ಕೆಲವರು ಎಚ್.ಕೆ. ಪಾಟೀಲ್ ಅವರನ್ನು ಸೋಲಿಸಲು ಈ ರಣತಂತ್ರ ನಡೆಸುತ್ತಿದ್ದಾರೆ ಎಂದರೆ, ಮತ್ತೆ ಕೆಲವರು ಇದು ಉತ್ತಮ ಬೆಳವಣಿಗೆ, ರಾಜ್ಯಕ್ಕೆ ಮಾದರಿಯಾಗುವ ಕೆಲಸವನ್ನು ಗದುಗಿನ ಯುವ ರಾಜಕಾರಣಿಗಳು ಮಾಡುತ್ತಿದ್ದಾರೆ ಎನ್ನುತ್ತಾರೆ. ಇದಕ್ಕೆ ರಾಜಕೀಯದಿಂದ ದೂರ ಉಳಿದಿರುವ ಹಿರಿಯರು ಮಾರ್ಗದರ್ಶನ ಮಾಡಬೇಕೆನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಕಾಣದವರ ಬಲವಾದ ಕೆಲಸ: ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು, ಕಾಂಗ್ರೆಸ್ಸೇತರರು ಒಟ್ಟಿಗೆ ಸೇರಿ ಒಮ್ಮತದ ಅಭ್ಯರ್ಥಿಯನ್ನು ಗದಗದಲ್ಲಿ ಕಣಕ್ಕಿಳಿಸಲು ಎಲ್ಲರೊಂದಿಗೂ ಚರ್ಚಿಸಿ ಸಭೆ ನಡೆಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲರ ಗೆಲುವಿಗೆ ಕಡಿವಾಣ ಹಾಕಲು ಇಂಥ ಪ್ರಯತ್ನ ನಡೆದಿದೆ ಎಂದಾದಲ್ಲಿ, ರಾಜ್ಯ ಮಟ್ಟದ ನಾಯಕರ ವಕ್ರದೃಷ್ಟಿ ಗದುಗಿನತ್ತ ಇದೆ ಎನ್ನುವುದೂ ಸ್ಪಷ್ಟ. ಪಾಟೀಲ್ ಸೋತರೆ ಯಾರಿಗೆ ಲಾಭ ಎಂಬುದನ್ನು ವಿಚಾರಿಸಿದರೆ ಈ 'ಕೈ'ವಾಡ ಯಾರದ್ದು ಎಂಬುದು ಗೊತ್ತಾಗುತ್ತದೆ.

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.