ಗದುಗಿಗೆ ಹಿಂದೆ ಆಳಿದವರ ಕೊಡುಗೆ ಏನು?
ಗದಗ: ದಶಕಗಳ ಕಾಲ ಒಂದೇ ಕುಟುಂಬದವರೇ ಗದಗ ಕ್ಷೇತ್ರವನ್ನು ಆಳಿದ್ದರೂ ಇವರು ಗದುಗಿಗೆ ಯಾವ ಯೋಜನೆಯನ್ನು ಕೊಡುಗೆ ನೀಡಿಲ್ಲ. 5 ವರ್ಷದ ನಮ್ಮ ಅಭಿವೃದ್ಧಿ ಹಾಗೂ ದಶಕಗಳ ಕಾಲ ಆಳಿದವರ ಅಭಿವೃದ್ಧಿ ಕೆಲಸಗಳೆಷ್ಟು ಎನ್ನುವ ಕುರಿತು ಒಂದೇ ವೇದಿಕೆಯಲ್ಲಿ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದರು.
ಅವರು ಭಾನುವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಸಭಾಭವನದಲ್ಲಿ ಏರ್ಪಡಿಸಿದ್ದ ಚುನವಾಣಾ ಪ್ರಚಾರ ಕಾರ್ಯಕ್ರಮದ ವೇದಿಕೆಯನ್ನು ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲರನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದು ವಿಶೇಷವಾಗಿತ್ತು. ಹಲವು ವರ್ಷಗಳ ಕಾಲ ಜನತೆ ನಿಮಗೆ ಅಧಿಕಾರ ನೀಡಿದ್ದರು, ಸಿಕ್ಕ ಅಧಿಕಾರವನ್ನು ಜನಪರ, ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡದೇ ಇರುವುದರಿಂದಲೇ ಗದಗ ದೊಡ್ಡ ಪ್ರಮಾಣ ನಾಯಕರನ್ನು ಹೊಂದಿದ್ದರೂ ಹಿಂದುಳಿದ ಜಿಲ್ಲೆಯಾಗಿಯೇ ಉಳಿದಿದೆ.
ಗದಗ ಕ್ಷೇತ್ರ ಹಾಗೂ ಇನ್ನುಳಿದ ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿ ಬೇಕಾಗಿತ್ತು ಎನ್ನುವುದನ್ನು ಜನತೆ 2008ರಲ್ಲಿ ಮತ ಹಾಕಿ ತಿಳಿಸಿದ್ದರು. ನಮಗೆ ವಹಿಸಿದ್ದ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ಇಷ್ಟೊಂದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ನಿಮ್ಮಿಂದ ಗದುಗಿಗೆ ಯಾವ ದೊಡ್ಡ ಕೊಡುಗೆ ಮೂಡಿ ಬಂದಿದೆ ಎನ್ನುವುದನ್ನು ಹೇಳಿ ಎಂದು ಕಾಂಗ್ರೆಸ್ನ್ನು ಪ್ರಶ್ನಿಸಿದರು.
ವೈದ್ಯಕೀಯ ಕಾಲೇಜು, ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ಜಿಲ್ಲೆಯನ್ನು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲಾಗಿ ನಿಲ್ಲುವಂತೆ ಮಾಡಿದೆ. ಕುಡಿವ ನೀರಿನ ತೊಂದರೆಗೆ ಶಾಶ್ವತ ಪರಿಹಾರ ಕಂಡಕೊಳ್ಳುವಲ್ಲಿ ಇಷ್ಟೊಂದು ವರ್ಷವಾದರೂ ಏಕೆ ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ರು. 93 ಕೋಟಿ ವೆಚ್ಚದ 2ನೇ ಹಂತದ ಕುಡಿವ ನೀರಿನ ಯೋಜನೆ ಜಾರಿಗೊಳಿಸಿದೆ.
ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಸ್ತರಿಸಿದ ಮಾತ್ರಕ್ಕೆ ಎಲ್ಲವೂ ನಾವೇ ಮಾಡಿದ್ದೇವೆ ಎಂದು ಹೇಳುವುದು ಎಷ್ಟು ಸರಿ, ಈ ಯೋಜನೆಗೆ ಯಾವ ಸರ್ಕಾರದಿಂದ ಎಷ್ಟು ಹಣ ಬಿಡುಗಡೆಯಾಗಿದೆ ಎನ್ನುವ ಬಗ್ಗೆ ಜನರಿಗೆ ತಿಳಿಯಬೇಕಾಗಿದೆ.
ಗದಗ ಜಿಲ್ಲೆಯಲ್ಲಿ ಹತ್ತಾರು ಸರ್ಕಾರಿ ಕಾಲೇಜು ಸ್ಥಾಪಿಸಿ, ಅವುಗಳಿಗೆ ಉತ್ತಮ ಕಟ್ಟಡ ನಿರ್ಮಿಸಲಾಗಿದೆ. ಇದನ್ನೆಲ್ಲಾ ನೀವೇಕೆ ಮಾಡಲಿಲ್ಲ. ಬಿಜೆಪಿ ಸರ್ಕಾರಕ್ಕೆ 5 ವರ್ಷದಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರೆ, ಹಲವು ವರ್ಷಗಳ ಕಾಲ ಆಳಿದ ಇವರಿಗೇಕೆ ಆಗಲಿಲ್ಲ ಎಂದು ಸವಾಲು ಹಾಕಿದ ಜೋಶಿ, ಈ ವಿಷಯವಾಗಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಜಿಲ್ಲೆಯ ಜನತೆ ನೆನಪಿನಲ್ಲಿಡುವಂತಹ ಯಾವುದಾದರೂ ಒಂದು ಯೋಜನೆಯನ್ನು ಗದುಗಿಗೆ ತಂದಿದ್ದೀರಾ ಹೇಳಿ ನೋಡೋಣ.. ನಮ್ಮ ಸಾಧನೆಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತೇವೆ. ನಿಮ್ಮ ಸಾಧನೆಗಳ ಬಗ್ಗೆ ತಿಳಿಸಿ, ಒಂದು ಆರೋಗ್ಯಯುತ ಚರ್ಚೆಯಾಗಲಿ. ಯಾರು ಅಭಿವೃದ್ಧಿ ಪರ ಎನ್ನುವುದು ಸಾಬೀತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಜೋಶಿ ಪರೋಕ್ಷವಾಗಿ ಎಚ್.ಕೆ.ಪಾಟೀಲರನ್ನು ಟೀಕಿಸಿದರು.
ಬಿಜೆಪಿ ಭಿನ್ನಮತ ಶಮನ...
ಗದಗ: ಗದಗ ಕ್ಷೇತ್ರದಲ್ಲಿ ಹಾಲಿ ಶಾಸಕ ಶ್ರೀಶೈಲಪ್ಪ ಬಿದರೂರಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಕೆಲ ಬಿಜೆಪಿ ಮುಖಂಡರು ಮುನಿಸಿಕೊಂಡು ಪಕ್ಷದ ಪ್ರಚಾರದಿಂದ ದೂರ ಸರಿದಿದ್ದರು. ಭಾನುವಾರ ಗದಗಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ನಗರದ ಖಾಸಗಿ ಹೋಟೆಲ್ನಲ್ಲಿ ರಹಸ್ಯ ಸಭೆ ನಡೆಸುತ್ತಿದ್ದ ಭಿನ್ನಮತಿಯರನ್ನು ಭೇಟಿ ಮಾಡಿ, ಮನವೊಲಿಸುವಲ್ಲಿ ಯಶಸ್ವಿಯಾದರು. ಸ್ಥಳದಲ್ಲಿದ್ದ ಕೆಲ ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ ಹಾಗೂ ಶಾಸಕ ಶ್ರೀಶೈಲಪ್ಪ ಬಿದರೂರ ಹಲವಾರು ವರ್ಷಗಳಿಂದ ನೈಜ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಾ ಬಂದಿದ್ದಾರೆ ಎಂದು ದೂರಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಮಧ್ಯ ಪ್ರವೇಶಿಸಿದ ಜೋಶಿ ಪರಿಸ್ಥಿತಿ ತಿಳಿಗೊಳಿಸಿ, ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆ ತಂದು ಬಂಡಾಯ ಶಮನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

