ಗದಗ

ಉಚಿತ ಬೇಸಿಗೆ ಶಿಬಿರ

Published On :

ಗದಗ: ಜಿಲ್ಲೆಯ 5ರಿಂದ 16 ವರ್ಷದೊಳಗಿನ ಮಕ್ಕಳಿಗೆ ಯೋಗ, ರಂಗೋಲಿ, ಸಮೂಹ ಗೀತೆ, ಸಮೂಹ ನೃತ್ಯ, ರಂಗ ತರಬೇತಿ, ಚಿತ್ರಕಲೆ ಉಚಿತ ಬೇಸಿಗೆ ಶಿಬಿರ ಮೇ 8ರಿಂದ 22ರ ವರೆಗೆ ಏರ್ಪಡಿಸಿದ್ದು, ಆಸಕ್ತ ಮಕ್ಕಳು ಮೇ 6ರ ಸಂಜೆ 5ರೊಳಗೆ  ಬಾಲಕರ ಬಾಲಮಂದಿರ, ಹೆಲ್ತ್ ಕ್ಯಾಂಪ್, ಬೆಟಗೇರಿ-ಗದಗ ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ದೂ. 08372-246344, 220711 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

5ರಂದು ಸಂತೆ, ಜಾತ್ರೆ, ಉತ್ಸವ ರದ್ದು
ಗದಗ: ಮೇ 5ರಂದು ಶಿರಹಟ್ಟಿ, ಗದಗ, ರೋಣ ಹಾಗೂ ನರಗುಂದ ವಿಧಾನಸಭಾ ಮತಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆ ಜರುಗಲಿದೆ. ಶಿಸ್ತು ಮತ್ತು ಶಾಂತಿಯನ್ನು ಕಾಪಾಡಲು  ಮೇ 5ರಂದು ಶಿರಹಟ್ಟಿ (ಎಸ್ಸಿ) ವಿಧಾನಸಭಾ ಮತಕ್ಷೇತ್ರದ ಶಿರಹಟ್ಟಿ ಪಟ್ಟಣದಲ್ಲಿ, ರೋಣ ಮತಕ್ಷೇತದ ಮುಶಿಗೇರಿ, ಶಾಂತಗೇರಿ, ಹಾಳಕೇರಿ ಗ್ರಾಮಗಳಲ್ಲಿ, ನರಗುಂದ ಮತಕ್ಷೇತ್ರದ ಶಿರೋಳ ಗ್ರಾಮದಲ್ಲಿ ನಡೆಯುವ ವಾರದ ಸಂತೆಯನ್ನು ಆ ದಿನದ ಮಟ್ಟಿಗೆ ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಎಸ್.ಟಿ. ಅಂಜನ್ಕುಮಾರ ಆದೇಶ ಹೊರಡಿಸಿದ್ದಾರೆ.

ನರಗುಂದ: ಮದ್ಯ ವಶ
ನರಗುಂದ: ರೋಣ ತಾಲೂಕಿನ ಯಾವಗಲ್ ಗ್ರಾಮದ ಇಮಾಮಸಾಬ ಪಿಂಜಾರ ಎಂಬುವ ವ್ಯಕ್ತಿ ಮಂಗಳವಾರ ಪಟ್ಟಣದ ಬಸ್ ನಿಲ್ದಾಣ ಸಮೀಪ ಅನಧಿಕೃತವಾಗಿ 62 ಮದ್ಯದ ಬಾಟಲ್ಗಳನ್ನು ಸಾಗಿಸುವ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು, ವ್ಯಕ್ತಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ದಾಳಿ: ಮದ್ಯ ವಶ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ರಾಮನಗೌಡ ಪಾಟೀಲ ಎನ್ನುವವರು ಅಕ್ರಮವಾಗಿ ಸಂಗ್ರಹಿಸಿದ್ದ ರು. 75 ಸಾವಿರ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ಸಂಜೆ ಜರುಗಿದೆ. ದಾಳಿಯಲ್ಲಿ ಗದಗ ಗ್ರಾಮೀಣ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಂದಿನಿಂದ ಉರೂಸ್
ನರಗುಂದ:  ಪಟ್ಟಣದ ಜಮಲಾಪುರ ಓಣಿಯ ಜಮಾಲ ಶಾಹಾವಲಿಯವರ ಉರೂಸ್ ಮೇ 1ರಿಂದ 3ರ ವರೆಗೆ ಜರುಗಲಿದೆ. ಮೇ 1ರಂದು ಶ್ರೀಗಂಧ ಅರ್ಪಣೆ, 2ರಂದು ಜಮಾಲ ಶಾಹಾವಲಿ ಹಾಗೂ 3ರಂದು ಮರಿ ಉರೂಸ್  ಕಾರ್ಯಕ್ರಮ ಜರಗಲಿದೆ.

ಪ್ರತಿಯೊಬ್ಬರೂ ಮತದಾನ ಮಾಡಿ
ಗಜೇಂದ್ರಗಡ: ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ. ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಕಡ್ಡಾಯವಾಗಿ, ನಿರ್ಭೀತಿಯಿಂದ ಮತ ಚಲಾಯಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು. ಮಂಗಳವಾರ ಪುರಸಭೆ ಆವರಣದಲ್ಲಿ ಮತದಾನದ ಜಾಗೃತಿ ಕುರಿತು ನಡೆದ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಮಿಷಗಳಿಗೆ ಒಳಪಡದೆ ಮೇ 5ರಂದು ವಿಧಾನಸಭೆ ಚುನಾವಣೆಯಲ್ಲಿ ನಿರ್ಭೀತಿಯಿಂದ ಮತ ಚಲಾಯಿಸುವ ಮೂಲಕ ದೇಶದ ಸಾರ್ವಭೌಮತ್ವ ಗೌರವಿಸಿ ಎಂದರು. ಪುರಸಭೆ ಆಡಳಿತಾಧಿಕಾರಿ ಐ.ಜಿ. ಗದ್ಯಾಳ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದ ಹಿನ್ನಲೆಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲು ಏ. 17ರಿಂದಲೇ ಜಿಲ್ಲೆಯ ಎಲ್ಲ ತಾಪಂ, ಗ್ರಾಪಂ, ನಗರಸ ಪಟ್ಟಣ ಪ್ರದೇಶಗಳಲ್ಲಿಯೂ ಜಾಗೃತಿ ರ್ಯಾಲಿ, ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ವಿಶೇಷ ತಹಸೀಲ್ದಾರ ಸಿ.ಎಂ ಕಲಹಾಳ, ಎಸ್.ಎಸ್. ಇಟೇಕರ ಮಾತನಾಡಿದರು. ಪುರಸಭೆ, ವಿಶೇಷ ತಹಸೀಲ್ದಾರ, ಪುರಸಭೆ ಕಾರ್ಯಾಲಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಕೆ.ಓ. ಮುಲ್ಲಾ, ಮಹೇಶ ನಿಡಶೇಶಿ, ಪಿ.ಎನ್. ದೊಡ್ಡಮನಿ, ಎಂ.ಬಿ. ಒಂಟಿ, ಬಿ.ಜಿ. ಇಂಡಿ, ಬಸವರಾಜ ಬಳಗಾನೂರ, ಸಿ.ಡಿ. ದೊಡ್ಡಮನಿ, ಸುವರ್ಣ ಇಂಡಿ, ಅಕ್ಕಮಹಾದೇವಿ ಗೊಂಗಡಶೆಟ್ಟಿಮಠ, ಜಿ.ಎಚ್. ಕಾಳೆ, ಎನ್.ಬಿ ಬೆಲೇರಿ, ಹೇಮಾ ಮಾದಗುಂಡಿ, ಉಮಾ ಕುರಹಟ್ಟಿ ಇದ್ದರು.

ಸಂಕಣ್ಣವರ ಮತಯಾಚನೆ
ಗದಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಮಾತ್ರ ರಾಜ್ಯದ ಹಿತ ಕಾಪಾಡುವುದು ಸಾಧ್ಯ ಎಂದು ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಹೇಳಿದರು. ಅವರು ಸೋಮವಾರ ಬೆಟಗೇರಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ, ಬಳಿಕ ಪ್ರಚಾರಾರ್ಥವಾಗಿ ನಡೆದ ಬೆಟಗೇರಿ ಎಲ್ಐಸಿ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.  ಯಡಿಯೂರಪ್ಪ ಈ ದೇಶ ಕಂಡ ಅಪ್ರತಿಮ ಮುಖ್ಯಮಂತ್ರಿ ಎಂಬುದನ್ನು ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನಿರೂಪಿಸಿವೆ. ಅಂತಹ ಧೀಮಂತ ನಾಯಕ ರಾಜ್ಯದ ಹಿತಕಾಯಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಮನಗಂಡು ಕೆಜೆಪಿ ಸ್ಥಾಪಿಸಿದ್ದಾರೆ. ಅವರ ಈ ಸದುದ್ದೇಶಕ್ಕೆ ಬೆಂಬಲ ನೀಡಿದರೆ ರಾಜ್ಯದ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಲು ಸಾಧ್ಯ ಎಂದರು. ಕೆಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿದರು. ಜೀವ ವಿಮಾ ಪ್ರತಿಧಿಗಳ ರಾಜ್ಯ ಘಟಕದ ಅಧ್ಯಕ್ಷ ಎಫ್.ಎಸ್. ಸಿಂಧಗಿ, ಎಸ್.ಎಸ್. ಕಟ್ಟಿ, ಎಸ್.ಟಿ. ವೀರಾಪುರ, ಎಂ.ಎಸ್. ಮಲ್ಲಾಪುರ, ಕನ್ಯಾಳ, ಸದು ಮದರಿಮಠ, ಸಂಗಣ್ಣ ಬಂಗಾರಶೆಟ್ರ, ಕೆ.ಪಿ. ಗುಳಗೌಡ್ರ, ರಜಾಕ ಡಂಕೇದ, ಖಾಲಿದ ಕೊಪ್ಪಳ, ಕುಂದಗೋಳ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಇತರರು ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.