ಬಿಜೆಪಿ ಸೋಲು ಒಪ್ಪಿಕೊಂಡಂತೆ
ಕನ್ನಡಪ್ರಭ ವಾರ್ತೆ, ಗದಗ, ಏ. 30
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರಾಗುತ್ತಾರೆ ಎನ್ನುವ ಬಗ್ಗೆ ಅನಂತಕುಮಾರ ಈಗಿನಿಂದಲೇ ಚಿಂತೆ ಮಾಡುತ್ತಿರುವುದನ್ನು ಗಮನಿಸಿದಲ್ಲಿ ರಾಜ್ಯದಲ್ಲಿ ಬಿಜೆಪಿ ನೈತಿಕವಾಗಿ ಸೋತು ಹೋಗಿದೆ ಎನ್ನುವುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಂತೆ ಎಂದು ಕಾಂಗ್ರೆಸ್ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಟಿ. ಈಶ್ವರ ಹೇಳಿದರು.
ಅವರು ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಮ್ಮ ಪಕ್ಷದ ಬಗ್ಗೆ ಚಿಂತಿಸದೆ, ನಿಮ್ಮ ಅಭ್ಯರ್ಥಿಗಳನ್ನು ಅದ್ಯಾವ ರೀತಿಯಲ್ಲಿ ಗೆಲ್ಲಿಸಬೇಕು ಎನ್ನುವ ಬಗ್ಗೆ ಚಿಂತಿಸದೆ, ಕಾಂಗ್ರೆಸ್ನ ಸಿಎಂ ಸ್ಥಾನದ ಬಗ್ಗೆ ನಿಮಗೇಕೆ ಚಿಂತೆ ಎಂದು ಲೇವಡಿ ಮಾಡಿದರು.
ಗದಗ ಗೂಂಡಾ ಮುಕ್ತವಾಗಿಸಲು ಬಿಜೆಪಿ ಬೆಂಬಲಿಸಿರಿ ಎನ್ನುವ ಅವರ ಹೇಳಿಕೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಿಮ್ಮ ಪಕ್ಷದ ನಾಲ್ವರು ಅಭ್ಯರ್ಥಿಗಳು ಕಳೆದೈದು ವರ್ಷದಲ್ಲಿ ಏನೆಲ್ಲಾ ಸಾಧನೆ ಮಾಡಿದ್ದಾರೆ ಎನ್ನುವುದನ್ನು ಮೊದಲು ಗಮನಿಸಿ ಎಂದರು.
ನಾಲ್ವರ ಮೇಲೆ ಆರೋಪ: ನಿಮ್ಮ ಪಕ್ಷದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹಾಗೂ ಅವರ ಹಿಂಬಾಲಕರು ಬಳ್ಳಾರಿ ಗಣಿ ಉಧ್ಯಮಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಪ್ಪತ್ತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಸಿಎಂ ಲೆಟರ್ಹೆಡ್ನ ಪ್ರತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿಯಂತೂ ಕ್ಷೇತ್ರದಲ್ಲಿ ಹಳೇ ಕಲ್ಲು... ಹೊಸಾ ಬಿಲ್ಲು ಎನ್ನುವ ಅಂಕಿತ ನಾಮವನ್ನೇ ಹೊಂದಿದ್ದಾರೆ. ನರಗುಂದ ಕ್ಷೇತ್ರದ ಶಾಸಕರು ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಕೀರ್ತಿ ಹೊಂದಿದ್ದಾರೆ. ಇವೆಲ್ಲ ಜಿಲ್ಲೆಯ ಜನತೆಗೆ ಗೊತ್ತಿದೆ. ಮೊದಲು ನಿಮ್ಮ ಅಭ್ಯರ್ಥಿಗಳ ಬಗ್ಗೆ ಯೋಚಿಸಿ ಎಂದರು.
ಗೂಂಡಾ ಸಂಸ್ಕೃತಿ ಬೆಳೆಸಿದ್ದು ಶ್ರೀರಾಮುಲು: ಗದಗನಲ್ಲಿ ಗೂಂಡಾ ಸಂಸ್ಕೃತಿ ಬೆಳೆಸಿದ್ದು ಬಳ್ಳಾರಿಯಿಂದ ಬಂದಿದ್ದ ಶ್ರೀರಾಮುಲು ಹಾಗೂ ಅವರ ಹಿಂಬಾಲಕರು. ಅದನ್ನು ಕಾಂಗ್ರೆಸ್ನವರ ತೆಲೆಗೆ ಕಟ್ಟುವ ಮೂಲಕ ಜನರಲ್ಲಿ ಭಾವನಾತ್ಮಕವಾಗಿ ನೀವು ಮತ ಸೆಳೆಯಲು ಪ್ರಯತ್ನಿಸುತ್ತಿದ್ದೀರಿ. ಇದಕ್ಕೆ ಜನತೆ ಅವಕಾಶ ನೀಡುವುದಿಲ್ಲ. ಗೂಂಡಾ ಸಂಸ್ಕೃತಿ ನಮ್ಮ ಪಕ್ಷದ್ದಲ್ಲ. ನಮ್ಮ ನಾಯಕರದ್ದೂ ಅಲ್ಲ ಎಂದು ಅನಂತಕುಮಾರ ಸೋಮವಾರ ಸಂಜೆ ಗದುಗಿನಲ್ಲಿ ನೀಡಿದ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು.
ವಿರೋಧ ಪಕ್ಷದ ಸ್ಥಾನ ಯಾರಿಗೆ?: ನಿಮ್ಮ ಪಕ್ಷ ಅಧಿಕಾರಕ್ಕೆ ಬರುವುದಲ್ಲ, ವಿರೋಧ ಪಕ್ಷವಾಗುವಷ್ಟು ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಒಂದು ವೇಳೆ ನೀವು ವಿರೋಧ ಪಕ್ಷದ ಸ್ಥಾನವನ್ನು ಪಡೆದಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನು ಮಾಡುತ್ತೀರಿ ಎಂದು ನಾನು ಅನಂತಕುಮಾರ ಅವರನ್ನು ಪ್ರಶ್ನಿಸುತ್ತೇನೆ ಎಂದರು. ಬಿದರೂರ ಅವರು ಸಿಎಂ ಲೆಟರ್ಹೆಡ್ ದುರ್ಬಳಕೆ ಮಾಡಿಕೊಂಡ ಬಗ್ಗೆ ಯಾವುದಾದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೀರಾ ಎಂದಾಗ, ಅದಕ್ಕೆ ಸೂಕ್ತ ಕಾಲ ಬಂದಾಗ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎನ್ನುವ ಹಾರಿಕೆ ಉತ್ತರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಮಣ್ಣ ಪಲದೊಡ್ಡಿ, ಮಹಾಂತೇಶ ಬೀಳಗಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

