ಗದಗ

ಪಡಿತರ ವಿತರಣೆ ಅವ್ಯವಸ್ಥೆ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರೋಣ, ಆ.5
ಅರ್ಹ ಫಲಾನುಭವಿಗಳು ಪಡಿತರ ಆಹಾರ ಧಾನ್ಯದಿಂದ ವಂಚಿತರಾಗಿದ್ದು, ವಿತರಣೆಯಲ್ಲಾಗುತ್ತಿರುವ ತಾರತಮ್ಯ ಮತ್ತು ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಹಿರೇಹಾಳ ಗ್ರಾಮಸ್ಥರು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ 2 ಗಂಟೆಗೂ ಹೆಚ್ಚು ಕಾಲ ಪಾಲಾ ಬದಾಮಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ಬಳಿಕ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದರು.   
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕನಗೌಡ ಗೌಡರ ಮಾತನಾಡಿ, 3 ತಿಂಗಳಿನಿಂದ ಪಡಿತರ ವಿತರಣೆಯಲ್ಲಿ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಕಾರ್ಡ್‌ದಾರರಿಗೆ ಆಹಾರ ಧಾನ್ಯವನ್ನು ಸರಿಯಾದ ಸಮಯಕ್ಕೆ ವಿತರಿಸುತ್ತಿಲ್ಲ. 200ಕ್ಕೂ ಹೆಚ್ಚು ಬಡವರ ಮತ್ತು ಅರ್ಹ ಫಲಾನುಭವಿಗಳ ಕಾರ್ಡ್ ರದ್ದಾಗಿವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ಮತ್ತು ಮೌಖಿಕವಾಗಿ ಆಗ್ರಹಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂಗೆ ಮುತ್ತಿಗೆ: ರಸ್ತೆ ತಡೆಯಿಂದ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆ ನಿವಾರಣೆಗೆ ಒಂದಡೆ ಕುಳಿತು ಚರ್ಚಿಸೋಣ ಎಂದು ತಹಸೀಲ್ದಾರ್ ಎಂ.ಬಿ. ಪಾಟೀಲ, ಪಿಎಸ್‌ಐ ಎಂ.ಎನ್. ಹತ್ತಿಕಟಗಿ ಅವರು ಪ್ರತಿಭಟನಾಕಾರರನ್ನು ಮನವೊಲಿಸಿದಾಗ, ರಸ್ತೆ ತಡೆ ಕೈಬಿಟ್ಟ ಪ್ರತಿಭಟನಾಕಾರರು ಗ್ರಾಪಂ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ಅಧಿಕಾರಿಗಳ ವರ್ತನೆಗೆ ಬೇಸತ್ತು ರೈತ ಸಂಘದ ಉಪಾಧ್ಯಕ್ಷ ಲೋಕನಗೌಡ ಗೌಡರ ಗ್ರಾಪಂ ಕಚೇರಿಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು, ಸಾರ್ವಜನಿಕರು ಸಮಾಧಾನಪಡಿಸಿದರು. ಬಳಿಕ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು. ಯಲ್ಲನಗೌಡ ಗೌಡರ, ಶಂಕರಗೌಡ ಗೌಡರ, ವೀರಣ್ಣ ವಸ್ತ್ರದ, ನೀಲವ್ವ ತೆಲೆಬಟ್ಟಿ, ವೀರಣ್ಮ ಸಾಲಮನಿ, ಬಸವರಾಜ ತೋಟಗಂಟಿ, ಬಾಬು ರಾಟಿ, ಹನಮಂತಪ್ಪ ಕುರಬರ, ಮಲ್ಲಯ್ಯ ಗಣಾಚಾರಿ, ಶಿವಪ್ಪ ತೋಟದ, ಮೈಲಾರಪ್ಪ ಶಿರಗುಂಪಿ, ಫಕ್ರುಸಾಬ ಲಾಡ್ಡಿ, ಬಸವ್ವ ಚವ್ಹಾಣ, ಗಿರಿಜಾ ಹರನಶಿಕಾರಿ, ಅಮರಪ್ಪ ಗೊರೇಬಾಳ, ಸಂಗಪ್ಪ ಪೂಜಾರ, ಮಲ್ಲನಗೌಡ ಗೌಡರ, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.