ಪಡಿತರ ತಾರತಮ್ಯ: ತಹಸೀಲ್ದಾರ್ಗೆ ಘೇರಾವ್
ಕನ್ನಡಪ್ರಭ ವಾರ್ತೆ, ರೋಣ, ಆ. 6
ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದ ಅರ್ಹ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯ ವಿತರಣೆಯಲ್ಲಾದ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕಿನ ಮಾರನಬಸರಿ ಗ್ರಾಮದ ಪಿಕೆಪಿಎಸ್ ಸೊಸೈಟಿ ಆವರಣದಲ್ಲಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮುಖಂಡ ನಿಂಗಪ್ಪ ಸರ್ವಿ, ರಾಜೇಸಾಬ ಚವಡಿ ಮಾತನಾಡಿ, ಮಾರನಬಸರಿ ಗ್ರಾಮದಲ್ಲಿದ್ದ 756 ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳಲ್ಲಿ ಅರ್ಹ ಬಡ ಕೂಲಿಕಾರರಾದ 307 ಫಲಾನುಭವಿಗಳ ಪಡಿತರ ಚೀಟಿ ರದ್ದಾಗಿವೆ. ಈವರೆಗೆ ಕೇವಲ 449 ಜನರಿಗೆ ಮಾತ್ರ ಪಡಿತರ ವಿತರಿಸಲಾಗಿದ್ದು, ಉಳಿದ 307 ಜನರಿಗೂ ಪಡಿತರ ವಿತರಿಸಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಂದು ತಾರತಮ್ಯ ಸರಿಪಡಿಸುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ತಹಸೀಲ್ದಾರಗೆ ಘೇರಾವ್: ಆಗ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಬಿ. ಪಾಟೀಲ, ಪಡಿತರ ವ್ಯವಸ್ಥೆಯಲ್ಲಿನ ಅವ್ಯವಹಾರ ಹೋಗಲಾಡಿಸಲು ಬಯೋ ಮೆಟ್ರಿಕ್ ಪದ್ಧತಿ ಅಳವಡಿಲಾಗಿದೆ. ಪಡಿತರ ಕಾರ್ಡುದಾರರು ಸರಿಯಾದ ದಾಖಲಾತಿ, ವಿದ್ಯುತ್ ಬಿಲ್ ನಂಬರ್, ಮನೆ ಉತಾರ, ಹೆಬ್ಬಟ್ಟಿನ ಗುರುತು ನೀಡದ್ದರಿಂದ ಅಂಥವುಗಳು ರದ್ದಾಗಿವೆ. ಏನು ಮಾಡಲು ಬರುವುದಿಲ್ಲ ಎಂದು ಹೇಳಿ ಹೊರಟು ನಿಂತಾಗ, ಕೆರಳಿದ ಪ್ರತಿಭಟನಾನಿರತ ಮಹಿಳೆಯರು ಸೊಸೈಟಿಗೆ ಬೀಗ ಜಡಿದು ತಹಸೀಲ್ದಾರ್ ವಾಹನದ ಮುಂದೆ ಕುಳಿತುಕೊಳ್ಳುವ ಮೂಲಕ ನಮ್ಮ ಸಮಸ್ಯೆ ಇತ್ಯರ್ಥವಾಗುವವರೆಗೂ ನೀವು ಇಲ್ಲಿಂದ ಕದಲುವಂತಿಲ್ಲ ಎಂದು ಘೇರಾವ್ ಹಾಕಿದರು.
ಪರಿಸ್ಥಿತಿ ತೀವ್ರತೆ ಅರಿತ ತಹಸೀಲ್ದಾರ್ ನಿಮ್ಮಲ್ಲಿ ಇನ್ನು ಹೆಚ್ಚಿನ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗುವುದು. ಪಡಿತರ ಕಾರ್ಡ್ ರದ್ದಾದವರು ಮತ್ತು ಬೆರಳು ಗುರುತು ನೀಡದವರು ಕೂಡಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಮುಂದಿನ ತಿಂಗಳು ವಿತರಿಸಲಾಗುವ ಪಡಿತರದಲ್ಲಿ ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆಗ ಪ್ರತಿಭಟನಾನಿರತರು ಇನ್ನು ಮುಂದೆ ಹೀಗಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿ ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ನಿಂಗಪ್ಪ ಸರ್ವಿ, ಗುಳಪ್ಪ ಮರಡಿ, ದೇವಪ್ಪ ಬಡಿಗೇರ, ಶೇಖಪ್ಪ ಸಂಗಟಿ, ರೇಣವ್ವ ಪಾಟೀಲ, ಅಮೀನಬೀ ಹವಾಲ್ದಾರ್, ಬಸವ್ವ ಹೊಂಬಳದ, ಶಿವವ್ವ ಬೊರಣ್ಣವರ, ಪಾರವ್ವ ಪಾಟೀಲ, ಬಾಳವ್ವ ತಳವಾರ, ದ್ಯಾಮವ್ವ ಜಾಲಿಹಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

