ಜೈನ ಸಮುದಾಯದ ಸಾಮಾಜಿಕ ಕಳಕಳಿ ಅನನ್ಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಆ. 23
ಜೈನ ಸಮುದಾಯ ಕೇವಲ ವ್ಯವಹಾರಿಕ ಕ್ಷೇತ್ರಕ್ಕೆ ಸೀಮಿತವಾಗದೆ ಸಮಾಜದ ಬಡ ನಿರ್ಗತಿಕರ ಕಲ್ಯಾಣಕ್ಕಾಗಿ ಶ್ರಮಿಸುವಲ್ಲಿಯೂ ಅಗ್ರ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲಹೇಳಿದರು.
ಅವರು ಶುಕ್ರವಾರ ಸ್ಥಳೀಯ ಟಿ.ಟಿ.ಡಿ. ಕಲ್ಯಾಣ ಮಂಟಪ ಬಳಿಯ ಅಹಿಂಸಾ ಮಂಟಪದಲ್ಲಿ ನಡೆದ ಭಗವಾನ್ ಮಹಾವೀರ ಜೈನ್ ಆಯುರ್ವೆದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಶೋಕ ಬಾಗಮಾರ ಅವರ 61ನೇ ಹುಟ್ಟುಹಬ್ಬ ಹಾಗೂ ಷಷ್ಟ್ಯಬ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಹಿಂಸಾ ತತ್ವದ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಜೈನ ಸಮುದಾಯದ ಹೃದಯ ವೈಶಾಲ್ಯತೆ ಸಾಮಾಜಿಕ ಕಳಕಳಿ ಅನನ್ಯವಾದುದು. ಜತೆಗೆ ಇತರರಿಗೆ ಮಾದರಿ. ಸರ್ಕಾರವು ಮಾಡದ ಸಾಮಾಜಿಕ ಸೇವೆಯನ್ನು ಜೈನ ಸಮುದಾಯ ಮಾಡುತ್ತಿರುವುದು ಶ್ಲಾಘನೀಯ. ಪ್ರಕೃತಿ ಮುನಿಸಾದ ಸಂದರ್ಭದಲ್ಲಿ ಜೈನ ಸಮುದಾಯ ಮೊದಲು ಧಾವಿಸಿ ನಿರಾಶ್ರಿತರ ನೆರವಿಗೆ ಆಸರೆಯಾಗಿ ಮಾನವೀಯತೆ ಮೆರೆದಿದ್ದಾರೆ ಎಂದರು.
ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ನಾಡಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಜೈನ ಸಮುದಾಯದ ಜನಪರ ಚಿಂತನೆ ಅಗಾಧವಾದದ್ದು, ಇಂತಹ ಸಾಮಾಜಿಕ ಚಿಂತನೆಯುಳ್ಳ ಸಮುದಾಯಗಳನ್ನು ರಾಜಕೀಯವಾಗಿ ಗುರುತಿಸುವುದು ಸರ್ಕಾರಗಳ ಕರ್ತವ್ಯ ಎಂದರು. ವಿ.ಪ.ನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಕಳಕಪ್ಪ ಬಂಡಿ, ಶಾಸಕ ಜಿ.ಎಸ್.ಪಾಟೀಲ, ಅಶೋಕ ಬಾಗಮಾರ ರವರ ಸಾರ್ವಜನಿಕ ಚಿಂತನಾ ಜೀವನ ಕುರಿತು ಮಾತನಾಡಿದರು. ಬಳಿಕ ಅಭಿನಂದನೆ ಸ್ವೀಕರಿಸಿದ ಅಶೋಕ ಬಾಗಮಾರ ಮಾತನಾಡಿ, ತಮ್ಮ ಸಾರ್ವಜನಿಕ ಸೇವೆಗೆ ತಂದೆ ತಾಯಿಗಳೆ ಪ್ರೇರಣೆ ಎಂದು ಭಾವುಕರಾಗಿ ನುಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಬಾಗಮಾರ ಸೇವಾ ಸಮಿತಿ ವತಿಯಿಂದ ಗೌತಮಚಂದ ಬಾಗಮಾರ, ಬಾಗಮಾರ ರತ್ನ ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ, ರಾಜೇಂದ್ರಕುಮಾರ ಜೈನ್, ಮೇಘರಾಜ ಖವಾಡ, ಶೈಲೇಶ ಬಾಗಮಾರ ಅವರಿಗೆ ಅಹಿಂಸಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಸಾವಿರಾರು ಬಡ ಕುಟುಂಬಗಳಿಗೆ ಬಟ್ಟೆ ವಿತರಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಮಾಜಿ ಸಂಸದ ಆರ್.ಎಸ್.ಪಾಟೀಲ, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಡಾ. ಶ್ರೀನಿವಾಸ ಬನಿಗೋಳ, ಚಂಪಾಲಾಲ ಮೇಹತಾ, ಶರಣಪ್ಪ ಕೊಟಗಿ, ವಿ.ಆರ್. ಗುಡಿಸಾಗರ, ವರ್ಧಮಾನ ಬಾಗಮಾರ, ವೀರಣ್ಣ ಸೊನ್ನದ ಉಪಸ್ಥಿತರಿದ್ದರು. ಅಜಿತಕುಮಾರ ಬಾಗಮಾರ ಸ್ವಾಗತಿಸಿದರು. ಎಚ್.ಬಿ.ಮಂಜುನಾಥ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

