ಸ್ಮಶಾನಕ್ಕಾಗಿ ಶವವಿಟ್ಟು ಪ್ರತಿಭಟನೆ
ರೋಣ: ದಲಿತ ಸಮುದಾಯದವರು ನಿಧನ ಹೊಂದಿದಲ್ಲಿ ಶವ ಸಂಸ್ಕಾರ ಮಾಡಲು ಸೂಕ್ತ ಜಾಗೆ ಒದಗಿಸಿಕೊಡಬೇಕು ಎಂದು ತಾಲೂಕಿನ ಶಾಂತಗೇರಿ ಗ್ರಾಮದಲ್ಲಿ ನಿಧನ ಹೊಂದಿದ ತಾಯಪ್ಪ ಮಾದರ ಶವವಿಟ್ಟು ದಲಿತರು ತಮ್ಮ ಕೇರಿಯಲ್ಲಿ ಭಾನುವಾರ ಪ್ರತಿಭಟನೆ ಮಾಡುವುದರ ಮೂಲಕ ಗ್ರಾಪಂ ಮತ್ತು ತಾಲೂಕು ಆಡಳಿತದ ಕ್ರಮ ಖಂಡಿಸಿದರು.
ದಲಿತ ಮುಖಂಡರಾದ ಪ್ರಕಾಶ ಹೊಸಳ್ಳಿ, ಮಂಜುನಾಥ ಹಾಳಕೇರಿ, ಮಜುರಪ್ಪ ಶಾಂತಗೇರಿ ಮಾತನಾಡಿ, ದಲಿತರಿಗಾಗಿ ಇರುವ ಸ್ಮಶಾನ ಜಾಗೆಯನ್ನು ಬೇರೆಯವರು ಅತಿಕ್ರಮಣ ಮಾಡಿಕೊಂಡಿದ್ದರಿಂದ ಕಳೆದ ಹಲವು ತಿಂಗಳಿಂದ ದಲಿತರು ಶವ ಸಂಸ್ಕಾರಕ್ಕಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಸೂಕ್ತ ಸ್ಮಶಾನ ಒದಗಿಸಿಕೊಡಬೇಕು ಎಂದು ಗ್ರಾಪಂ ಮತ್ತು ತಾಲೂಕು ಆಡಳಿತಕ್ಕೆ ಶವವಿಟ್ಟು ಪ್ರತಿಭಟನೆ ಮಾಡುವುದರ ಮೂಲಕ ಎಚ್ಚರಿಸಿದ್ದವು. ಆಗ ತಹಸೀಲ್ದಾರ್ ಎಂ.ಬಿ. ಪಾಟೀಲ ಅವರು, ಒಂದು ತಿಂಗಳಲ್ಲಿಯೇ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮತ್ತೆ ಶವ ಸಂಸ್ಕಾರ ಮಾಡಲು ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರಮ ಕೈಗೊಳ್ಳದ ತಾಲೂಕು ಆಡಳಿತ: ದಲಿತರಿಗೆ ಶವ ಸಂಸ್ಕಾರ ಮಾಡಲು ತೀವ್ರ ತೊಂದರೆಯಾಗುತ್ತದೆ. ಶಾಶ್ವತ ಸ್ಥಳ ಕಲ್ಪಿಸಿ ಎಂದು ತಾಲೂಕು ಆಡಳಿತಕ್ಕೆ ಅನೇಕ ಬಾರಿ ಶಾಂತಗೇರಿ ಗ್ರಾಮದ ದಲಿತರು ಹಾಗೂ ತಾಲೂಕು ದಲಿತ ಸಂಘಟನೆ ಮುಖಂಡರು ಲಿಖಿತ ಹಾಗೂ ಮೌಖಿಕವಾಗಿ ಒತ್ತಾಯಿಸಲಾಗಿದೆ. ಆದರೂ ತಾಲೂಕು ಆಡಳಿತ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ ಎಂದು ಆರೋಪಿಸಿದರು.
ಪಟ್ಟು ಹಿಡಿದ ಪ್ರತಿಭಟನಾಕಾರರು: ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಶನಿವಾರ ರಾತ್ರಿ ನಿಧನ ಹೊಂದಿದ ತಾಯಪ್ಪ ಮಾದರ ಎಂಬುವವರ ಶವವನ್ನು ಭಾನುವಾರ ಸಂಜೆವರೆಗೂ ಪ್ರತಿಭಟನೆ ಮುಂದುವರಿಸಿದರು. ಸ್ಥಳಕ್ಕಾಗಮಿಸಿದ ಉಪ ತಹಸೀಲ್ದಾರ್ ಪಿ.ಬಿ. ಮೇಗಲಮನಿ, ಗ್ರಾಮ ಲೆಕ್ಕಾಧಿಕಾರಿ ಡಿ.ಯು. ಇಟಗಿ, ಕಂದಾಯ ನಿರೀಕ್ಷಕ ಜಿ.ಟಿ. ಕೊಪ್ಪದ ಪ್ರತಿಭಟನಾನಿರತರನ್ನು ಓಲೈಸಿ, ಈ ಕುರಿತು ಸೋಮವಾರ ತಹಸೀಲ್ದಾರ್ ಎಂ.ಬಿ. ಪಾಟೀಲರೊಂದಿಗೆ ಚರ್ಚಿಸಿ ವಾರದೊಳಗೆ ಸ್ಮಶಾನಕ್ಕೆ ಶಾಶ್ವತ ಜಮೀನು ಕಲ್ಪಿಸಲಾಗುವುದು. ಸದ್ಯ ಅರಣ್ಯ ಇಲಾಖೆಯ ಗುಡ್ಡದ ಜಾಗೆಯಲ್ಲಿ ಶವ ಸಂಸ್ಕಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದಾಗಿ ಲಿಖಿತ ಭರವಸೆ ನೀಡಿದರು. ಆಗ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು. ದಲಿತ ಮುಖಂಡರಾದ ಮಲ್ಲು ಮಾದರ, ಶಾಂತಪ್ಪ ಮಾದರ, ಯಮನೂರಪ್ಪ ಪೂಜಾರ, ಮುತ್ತಪ್ಪ ಹುನಸಿಮರದ, ಮುದಿಯಪ್ಪ ಮೇಲಿನಮನಿ, ಪಡಿಯಪ್ಪ ಹುನಸಿಮರದ, ಪರಶುರಾಮ ಹುನಸಿಮರದ, ಶಿವಾನಂದ ಹುನಸಿಮರದ, ಫಕೀರಪ್ಪ ಮೇಗಲಮನಿ, ಹೊನ್ನಪ್ಪ ಹುನಸಿಮರದ, ಶಿವಾನಂದ ಹುನಸಿಮರದ, ಪಡಿಯಪ್ಪ ಹುನಸಿಮರದ, ಪರಸಪ್ಪ ಮಾದರ, ಮತ್ತಪ್ಪ ಮಾದರ, ಕಲ್ಲವ್ವ ಮಾದರ, ಯಮನವ್ವ ಮಾದರ, ಫಕೀರವ್ವ ಹುಣಸಿಮರದ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

