ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ರೋಣ, ಆ. 27
ಬಯಲು ಮಲ ವಿಸರ್ಜನೆಯಿಂದ ಮುಕ್ತಗೊಳಿಸಲು ಸರ್ಕಾರ ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಪ್ರತಿಯೊಂದು ಮನೆಗೆ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ವೀರಣ್ಣ ತುರಮುರಿ ಹೇಳಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗದಗ ಜಿಲ್ಲೆಯಲ್ಲಿ 142935 ಕುಟುಂಬಗಳಿವೆ. ಇದರಲ್ಲಿ ಕೇವಲ 18852 ಕುಟುಂಬಗಳು ಮಾತ್ರ ಶೌಚಾಲಯಗಳನ್ನು ಹೊಂದಿವೆ. ಇನ್ನು 124083 ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹಾಗೂ ಉದ್ಯೋಗ ಚೀಟಿ ಹೊಂದಿದವರಿಗೆ ಸರ್ಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ರು. 4700 ಹಾಗೂ ನಿರ್ಮಲ ಭಾರತ ಅಭಿಯಾನ ಯೋಜನೆ ಮೂಲಕ ರು. 4500 ನೀಡಿ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಲಾಗುವುದು.
ರೋಣ ತಾಲೂಕಿನಲ್ಲಿ 39425 ಕುಟುಂಬಗಳಿಗೆ ಶೌಚಾಲಯಗಳಿರುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಮೊದಲು ರೋಣ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, 6 ತಿಂಗಳೊಳಗಾಗಿ ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳುವ ದಿಶೆಯಲ್ಲಿ ಚುರುಕಿನಿಂದ ಕಾರ್ಯ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ಪ್ರತಿಯೊಂದು ಗ್ರಾಪಂಗೆ ಒಬ್ಬ ನೋಡಲ್ ಅಧಿಕಾರಿಯನ್ನು, 3 ಗ್ರಾಪಂಗೆ ಒಬ್ಬ ಜಿಲ್ಲಾಮಟ್ಟದ ಅಧಿಕಾರಿಯನ್ನು ನೇಮಿಸಲಾಗುವುದು. ಪ್ರತಿ ಮನೆಗೆ ತೆರಳಿ ಶೌಚಾಲಯ ನಿರ್ಮಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರತಿ ಗ್ರಾಪಂನಲ್ಲಿ ಗ್ರಾಮಸಭೆ: ಬಯಲು ಮಲ ವಿಸರ್ಜನೆ ಮುಕ್ತಗೊಳಿಸಲು ಜನರಲ್ಲಿ ಎನ್.ಆರ್.ಇ.ಜಿ ಮತ್ತು ನಿರ್ಮಲ ಭಾರತ ಅಭಿಯಾನ ಯೋಜನೆಯ ಅನುದಾನದಲ್ಲಿ ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ 30 ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮ ಸಭೆಯನ್ನು ಸೆಪ್ಟೆಂಬರ್ 2ರಂದು ನಡೆಸಲು ಗ್ರಾಪಂ ಪಿಡಿಒಗಳಿಗೆ ಆದೇಶಿಸಲಾಗಿದೆ.
ಸೆ. 4ರಂದು ಶಾಸಕರ ನೇತೃತ್ವದಲ್ಲಿ ಸಭೆ: ಇದರಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಅದಕ್ಕಾಗಿ ಸೆ. 4 ರಂದು ರೋಣ ತಾಲೂಕಿಗೆ ಸಂಬಂಧಿಸಿದಂತೆ ರೋಣ ಶಾಸಕ ಜಿ.ಎಸ್. ಪಾಟೀಲ ಹಾಗೂ ನರಗುಂದ ಶಾಸಕ ಬಿ.ಆರ್. ಯಾವಗಲ್ ನೇತೃತ್ವದಲ್ಲಿ ಗ್ರಾಪಂ ಪಿಡಿಒ, ಗ್ರಾಪಂ ಮತ್ತು ತಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ಸಭೆಯನ್ನು ಸೆ. 4 ರಂದು ತಾಪಂ ಸಭಾಭವನದಲ್ಲಿ ಕರೆಯಲಾಗಿದೆ. ಅಂದೇ ಅಭಿಯಾನ ಪ್ರಾರಂಭವಾಗಲಿದೆ ಎಂದರು.
ಜಾಗೃತಿ ಅಭಿಯಾನ: ಕೇವಲ ಅಲ್ಲಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸುವುದರ ಬದಲು ಕಲಾ ಜಾತಾ, ಸಾಕ್ಷಾಚಿತ್ರ, ಗೋಡೆ ಬರಹ, ಸ್ತ್ರೀ ಶಕ್ತಿ ಸಂಘಗಳ ಮೂಲಕ, ಶಾಲಾ ಮಕ್ಕಳ ಮೂಲಕ ಸ್ವಚ್ಛತೆ ಕುರಿತು ಜಾಥಾ ಹಾಗೂ ಪ್ರಭಾತಪೇರಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಜಾಗೃತಿ ಅಭಿಯಾನದಲ್ಲಿ ತಹಸೀಲ್ದಾರ್ ಸೇರಿದಂತೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವರು. 6 ತಿಂಗಳ ಅವಧಿಯೊಳಗೆ ರೋಣ ತಾಲೂಕಿನಲ್ಲಿ 39425 ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಸಾಧಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಪಿಡಿಒಗಳನ್ನು ಸಾರ್ವಜನಿಕರು ಸಂಪರ್ಕಿಸಿ ಮಾಹಿತಿ ಪಡೆಯಬೇಕು ಎಂದರು. ಜಿಪಂ ಯೋಜನಾ ನಿರ್ದೇಶಕ ದಿನೇಶ, ಸುದರ್ಶನ, ಎಂ.ನಾರಾಯಣ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

