ಮಕ್ಕಳ ಜನ್ಮದಿನ ಆಚರಿಸುವ ಶಾಲೆ..!
ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಆ. 31
ಸಚಿವರ, ಸಂಸದರ, ಶಾಸಕರ, ಸಿನಿಮಾ ನಟ-ನಟಿಯರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು, ಕಾರ್ಯಕರ್ತರು ಆಚರಿಸುವುದನ್ನು ನೋಡಿದ್ದೇವೆ. ಆದರೆ, ಶಾಲೆಯಲ್ಲಿ ವಿದ್ಯಾರ್ಥಿಗಳ ಹುಟ್ಟು ಹಬ್ಬವನ್ನು ಆಚರಿಸುವ ವಿಶಿಷ್ಟ ಸಂಪ್ರದಾಯವನ್ನು ರೂಢಿಸಿಕೊಂಡ ಶಾಲೆಯೊಂದಿದೆ.
ಹೌದು, ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀಮತಿ ಫ.ಫ. ಹಿರೇಮಠ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯಾ ತಿಂಗಳಲ್ಲಿ ಜನಿಸಿದ ವಿದ್ಯಾರ್ಥಿಗಳ ಹುಟ್ಟು ಹಬ್ಬವನ್ನು ಸ್ವತಃ ಶಿಕ್ಷಕರೇ ಕೇಕ್ ತರಿಸಿ, ಸಿಹಿ ಅಡುಗೆ ಮಾಡಿಸಿ ಹೆತ್ತ ತಂದೆ-ತಾಯಿ, ಶಾಲಾ ಸುಧಾರಣಾ ಮೇಲುಸ್ತುವರಿ ಅಧ್ಯಕ್ಷ, ಸದಸ್ಯರೆಲ್ಲರೂ ಕೂಡಿಕೊಂಡು ಜನ್ಮದಿನ ಆಚರಿಸಿ ಮಕ್ಕಳಿಗೆ ಶುಭ ಕೋರುವ ಶಿಕ್ಷಕರ ಈ ವಿಶಿಷ್ಟ ಸಂಪ್ರದಾಯ ರಾಜ್ಯದಲ್ಲಿಯೇ ಮೊದಲು ಎನ್ನಬಹುದು.
ಜನ್ಮದಿನ ಆಚರಣೆ: ಸರ್ಕಾರ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ, ಹಾಜರಾತಿ ಹೆಚ್ಚಳಕ್ಕೆ ಹತ್ತು ಹಲವು ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದೆ. ಅಕ್ಷರ ದಾಸೋಹ, ಕ್ಷೀರಭಾಗ್ಯ, ಶಿಷ್ಯವೇತನ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ಜತೆಗೆ ಶಾಲಾ ಪ್ರಾರಂಭೋತ್ಸವ, ಶಾಲೆಗಾಗಿ ನಾವು-ನೀವು, ಸಮುದಾಯದತ್ತ ಶಾಲೆ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಜಾರಿಯಲ್ಲಿವೆ. ಇವೆಲ್ಲದರ ಜತೆಗೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡುವ ಕಾರ್ಯಕ್ರಮ ನಡೆಯುತ್ತಿದೆ. ಎಷ್ಟೋ ಮಕ್ಕಳ ಬಡ ತಂದೆ-ತಾಯಂದಿರು ಕೂಲಿ ಮಾಡಿ ಜೀವನ ಸಾಗಿಸುತ್ತಿರುವುದರಿಂದ ಮನೆಯಲ್ಲಿ ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡುವುದು ಕನಸಿನ ಮಾತು.
ಮನೆಯಲ್ಲಿ ಮಕ್ಕಳ ಹುಟ್ಟುಹಬ್ಬ ಆಚರಿಸಲು ಆಗದೇ ಇರುವ ಪಾಲಕರಿಗೆ ಇದು ಸಂತಸ ತಂದಿದೆ. ಮತ್ತು ಮಕ್ಕಳಲ್ಲಿಯೂ ಈ ಕಾರ್ಯ ಹುಮ್ಮಸ್ಸು ಮೂಡಿಸಿದೆ.
ಮಕ್ಕಳು ಶಾಲೆಗೆ ತಪ್ಪದೇ ತೆರಳುತ್ತಾರೆ. ಕಲಿಕೆಯಲ್ಲಿ ಉತ್ಸಾಹ, ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ಭಾವೈಕ್ಯತೆ ಮೂಡಿದೆ. ಸಮಾನತೆ ಅರಿವಾಗಿದೆ. ನಾವೆಲ್ಲ ಒಂದೇ ಎಂಬ ಭಾವನೆ ಮೂಡಿದೆ. ಬಡತನದಲ್ಲಿ ವಿದ್ಯಾಭ್ಯಾಸ ಪಡೆದು ಶಿಕ್ಷಕ ವೃತ್ತಿಗೆ ಬಂದ ಶಿಕ್ಷಕ, ಶಿಕ್ಷಕಿಯರು ಸಹ ಮಕ್ಕಳ ಜತೆಗೆ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ. ಇಲ್ಲಿಯೇ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

